ಉಳುಕು ನೋವಿಂದ ಆಸ್ಪತ್ರೆಗೆ ಹೋದ ಯುವತಿಗೆ ಶಾಕ್​: 25 ವರ್ಷ ಬಳಿಕ ಗೊತ್ತಾಯ್ತು ತಾನು ಹೆಣ್ಣಲ್ಲ, ಗಂಡೆಂದು!

Woman or Man
Published on

ಬೀಜಿಂಗ್​: ಕಾಲು ಉಳುಕಿನ ನೋವಿನಿಂದ ಆಸ್ಪತ್ರೆಗೆ ಹೋದ 25 ವರ್ಷದ ಯುವತಿ, ತನ್ನ ದೈಹಿಕ ಸ್ಥಿತಿಯ ಸತ್ಯಾಂಶ ತಿಳಿದು ಶಾಕ್​ ಆಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಯುವತಿಯು ಬಯಲಾಜಿಕಲಿ (ಜೈವಿಕವಾಗಿ) ಮತ್ತು ಕ್ರೋಮೋಸೊಮಲಿ (ವರ್ಣತಂತು) ಪುರುಷನಾಗಿ ಹುಟ್ಟಿರುವ ಆಘಾತಕಾರಿ ವಿಚಾರ ತಿಳಿದಿದೆ.

ಯುವತಿಯನ್ನು ಪೂರ್ವ ಚೀನಾದ ಜೆಜಿಯಾಂಗ್​ ಪ್ರಾಂತ್ಯದ ನಿವಾಸಿ ಎಂದು ಗುರುತಿಸಲಾಗಿದೆ. ಈಕೆ ಇದುವರೆಗೂ ಒಮ್ಮೆಯು ಮುಟ್ಟಿನ ಅನುಭವ ಹೊಂದಿಲ್ಲ. ಮದುವೆ ಬಳಿಕವೂ ಗರ್ಭಿಣಿಯಾಗಲು ಸಾಧ್ಯವಾಗಿಲ್ಲ.

ಕಾಲು ಉಳುಕಿದ ನೋವಿನಿಂದಾಗಿ ಜೆಜಿಯಾಂಗ್​ ಯೂನಿವರ್ಸಿಟಿ ಸ್ಕೂಲ್​ ಆಫ್ ಮೆಡಿಸಿನ್​ ಆಸ್ಪತ್ರೆಗೆ ಚಿಕಿತ್ಸೆಗೆಂದು ಭೇಟಿ ನೀಡಿದ್ದಳು. ಇದೇ ವೇಳೆ ಎಕ್ಷ್​ ರೇ ತೆಗೆದ ವೈದ್ಯರಿಗೆ ಆಕೆಯ ದೇಹದಲ್ಲಿ ಮೂಳೆಗಳು ಬೆಳವಣಿಗೆ ಆಗಿಲ್ಲದಿರುವುದನ್ನು ಗಮನಿಸಿದ್ದಾರೆ. ಬಳಿಕ ಮತ್ತಷ್ಟು ಪರೀಕ್ಷಿಸಿದಾಗ​ ಆಕೆಗೆ ಗರ್ಭಾಶಯ ಅಥವಾ ಅಂಡಾಶಯ ಇಲ್ಲದಿರುವುದು ತಿಳಿದಿದೆ. ಇತ್ತ ತನ್ನ ದೈಹಿಕ ಸ್ಥಿತಿಯ ಸತ್ಯಾಂಶ ತಿಳಿದ ಯುವತಿ ಶಾಕ್​ಗೆ ಒಳಗಾಗಿದ್ದಾಳೆ.

ಮಹಿಳೆಗೆ ಅಪಕ್ವವಾದ ಸ್ತ್ರೀ ಲೈಂಗಿಕ ಅಂಗಗಳಿವೆ. ಆದರೆ, ಆಕೆಯ ದೇಹದಲ್ಲಿ ಪುರುಷರ ವೈ (Y) ಕ್ರೋಮೋಸೊಮ್​ ಇರುವುದು, ಆಕೆಯನ್ನು ಜೈವಿಕವಾಗಿ ಪುರುಷನನ್ನಾಗಿಸಿದೆ.

ಯುವತಿಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ದೇಹದಲ್ಲಿ ಗುಪ್ತ ವೃಷಣಗಳನ್ನು ಕಂಡುಹಿಡಿಯಲು ವಿಫಲವಾದ ಕಾರಣ, ಅವು ಕುಗ್ಗಿರಬಹುದು ಎಂದು ಹೇಳಿದ್ದಾರೆ. ಬಹುಶಃ ಪಾಲಕರು ರಕ್ತ ಸಂಬಂಧದಲ್ಲಿ ಮದುವೆಯಾಗಿದ್ದರ ಪರಿಣಾಮ ಈ ರೀತಿ ಆಗಿರಬಹುದೆಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಯುವತಿಯ ಮುಂದಿನ ಭವಿಷ್ಯದ ದೃಷ್ಟಿಯಿಂದಾಗಿ ಮನೋತಜ್ಞರ ಸಲಹೆ ಪಡೆಯಲು ಸೂಚಿಸಿದ್ದಾರೆ.

ಎಂಡೋಕ್ರೈನಾಲಜಿಸ್ಟ್ (ಅಂತಃಸ್ರಾವಶಾಸ್ತ್ರಜ್ಞ) ಡಾಂಗ್ ಫೆಂಗ್ಕಿನ್ ಅವರ ಪ್ರಕಾರ, ಯುವತಿಯ ಈ ವೈದ್ಯಕೀಯ ಸ್ಥಿತಿಯನ್ನು 46 XY ಎಂದು ಕರೆಯಲಾಗಿದೆ. ಇದು ಸಾಮಾನ್ಯವಾಗಿ ಪುರುಷ ಅಥವಾ ಸ್ತ್ರೀಯರಲ್ಲದ ಜನನಾಂಗಗಳನ್ನು ಹೊಂದಿರುವ ಪುರುಷರಲ್ಲಿ ಕಂಡುಬರುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net