ಕರೊನಾ ಸೋಂಕಿನಿಂದ ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ದಿಲೀಪ್​ ಗಾಂಧಿ ನಿಧನ

BJP Leader
Published on

ನವದೆಹಲಿ: ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ದಿಲೀಪ್ ಗಾಂಧಿ (70) ಅವರು ಬುಧವಾರ ಬೆಳಗ್ಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ದಿಲೀಪ್​ ಗಾಂಧಿ ಅವರಿಗೆ ಮಂಗಳವಾರ ಕರೊನಾ ಪಾಸಿಟಿವ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ದಿಲೀಪ್​ ಗಾಂಧಿ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಸಮುದಾಯ ಸೇವೆಗೆ ಮತ್ತು ಬಡವರಿಗೆ ಸಹಾಯ ಮಾಡಿದ್ದಕ್ಕಾಗಿ ದಿಲೀಪ್​ ಅವರನ್ನು ಸದಾ ಸ್ಮರಿಸಲಾಗುವುದು. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಬಲಪಡಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನೀಡಲಿ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

80ರ ದಶಕದಲ್ಲಿ ಕಾರ್ಪೊರೇಟರ್​ ಆಗಿ ರಾಜಕೀಯ ವೃತ್ತಿ ಆರಂಭಿಸಿದ ಗಾಂಧಿ, 1999ರಿಂದ ಮೂರು ಬಾರಿ ಮಹಾರಾಷ್ಟ್ರದ ಅಹ್ಮದ್​ನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್​ ನಿರಾಕರಿಸಲಾಗಿತ್ತು. 2003ರ ವಾಜಪೇಯಿ ಸರ್ಕಾರದಲ್ಲಿ ಹಡಗು ಸಚಿವಾಲಯದ ಸಚಿವರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net