ಕಾಫಿ ಮಂಡಳಿ ಮಾದರಿಯಲ್ಲಿ 'ರಾಜ್ಯ ಅಡಿಕೆ ಮಂಡಳಿ' ಸ್ಥಾಪನೆ; ಇದು ಬಿಜೆಪಿ ಚುನಾವಣಾ ಭರವಸೆ…

BJP Manifesto
Published on

ಬೆಂಗಳೂರು: ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಇಂದು ಬಿಜೆಪಿ ಪಕ್ಷ ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌ ‘ಗ್ಯಾರಂಟಿ’ ಯೋಜನೆಗಳಿಗೆ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದೆ.

6 ಲಕ್ಷ ಸಲಹೆ ಬಂದಿವೆ

ಖಾಸಗಿ ಹೋಟೆಲ್​​ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಸಚಿವ‌ ಸುಧಾಕರ್ ಮಾತನಾಡಿ, ಪ್ರಣಾಳಿಕೆ ‌ರಚನೆ‌ ವೇಳೆ 6 ಲಕ್ಷ‌ ಸಲಹೆಗಳು ಬಂದಿವೆ. ಪರಿಣಿತರ ಜೊತೆ ಚರ್ಚಿಸಿ‌ 900 ಸಲಹೆ‌ ಪಡೆಯಲಾಗಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ, ಪ್ರತಿಯೊಂದು ಕ್ಷೇತ್ರದಲ್ಲೂ‌ ಬದಲಾವಣೆ ತರುವ‌ ನಿಟ್ಟಿನಲ್ಲಿ ಪ್ರಣಾಳಿಕೆ ತಯಾರಿಕೆ ಮಾಡಲಾಗಿದೆ. ಸುಳ್ಳು ಭರವಸೆಗಳನ್ನು ಕೊಡದೇ ಈ‌ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 
ರಾಜ್ಯ ಅಡಿಕೆ ಮಂಡಳಿ

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಲೆನಾಡು ಕರ್ನಾಟಕವನ್ನು ಕೇಂದ್ರವಾಗಿರಿಸಿಕೊಂಡು ಅಡಿಕೆ ಬೆಳಗಾರರಿಗೆ ಭರವಸೆಯೊಂದನ್ನು ನೀಡಿದೆ. ಕಾಫಿ ಮಂಡಳಿ ಮಾದರಿಯಲ್ಲಿ ಸಂಶೋಧನಾ ಸಂಸ್ಥೆ ಸೇರಿದಂತೆ ರಾಜ್ಯ ಅಡಿಕೆ ಮಂಡಳಿ ಸ್ಥಾಪಿಸುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ.

ಮಿಷನ್ ಕನೆಕ್ಟ್ ಕರ್ನಾಟಕ

ಇದಲ್ಲದೆ 'ಮಿಷನ್ ಕನೆಕ್ಟ್ ಕರ್ನಾಟಕದ' ಅಡಿಯಲ್ಲಿ ಪ್ರಾದೇಶಿಕ ವಾಯುಯಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪಿಸಲು ಬಿಜೆಪಿ ಚಿಂತನೆ ನಡೆಸಿದ್ದು, ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಶಿವಮೊಗ್ಗದಲ್ಲಿ ಆಯುರ್ವೇದ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net