More

    ಪುತ್ತೂರಿಗೆ ಯಾರಾಗುವರು ಮುತ್ತು?: ಸಂಘಪರಿವಾರದ ಭದ್ರ ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸದ್ದು

    ಬಿಜೆಪಿ ಹಾಗೂ ಸಂಘ ಪರಿವಾರ ಭದ್ರ ನೆಲೆ ಹೊಂದಿರುವ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಈ ಬಾರಿ ಬಿಜೆಪಿ ನಡೆಸಿರುವ ಕೆಲ ಅಚ್ಚರಿ ಪ್ರಯೋಗಗಳು ಯಾವ ರೀತಿ ಫಲ ನೀಡುತ್ತವೆ ಎಂದು ಕಾದು ನೋಡಬೇಕಿದೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದೆ.

    | ಪ್ರಕಾಶ್ ಮಂಜೇಶ್ವರ ಮಂಗಳೂರು

    ದಕ್ಷಿಣ ಕನ್ನಡ ಸಂಘಪರಿವಾರದ ಭದ್ರ ನೆಲೆ ಹೊಂದಿದ ಜಿಲ್ಲೆ. ಅದರಲ್ಲೂ ಪುತ್ತೂರು ಕೇಂದ್ರವಿದ್ದಂತೆ. ಅಂಥ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ. ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಅದೇ ಸಮುದಾಯದ (ಒಕ್ಕಲಿಗ ಗೌಡ) ಮಹಿಳೆಯನ್ನು ಕಣಕ್ಕಿಳಿಸಲಾಗಿದೆ. ಇದರಿಂದ ಮುನಿಸಿಕೊಂಡಿರುವ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಸಂಘ ಪರಿವಾರ, ಬಿಜೆಪಿ ಮನವೊಲಿಸಲು ನಡೆಸಿದ ಯತ್ನಗಳು ಫಲ ಕೊಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಕುರಿತು ಅತೃಪ್ತಿ ಇರುವ ಒಂದು ಗುಂಪು, ಪ್ರವೀಣ್ ನೆಟ್ಟಾರ್ ಹತ್ಯೆ ಸಂದರ್ಭ ರೊಚ್ಚಿಗೆದ್ದ ಕೇಸರಿ ಯುವ ಪಡೆ ಪುತ್ತಿಲರ ಹಿಂದಿರುವ ಶಕ್ತಿ. ಇದು ಅಲ್ಲಿನ ಚಿತ್ರಣವನ್ನು ಬದಲಾಯಿಸುತ್ತದೆಯೇ ಎನ್ನುವುದು ಈಗಿನ ಪ್ರಶ್ನೆ.

    ಕಾಂಗ್ರೆಸ್ ಅಳೆದೂತೂಗಿ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಿದೆ. ಅವರು ಬಿಜೆಪಿಯಲ್ಲಿದ್ದವರು. ಹಿಂದು ವಿಚಾರಧಾರೆಯ ಮೂವರು ಸ್ಪರ್ಧೆಯಲ್ಲಿ ಇರುವುದರಿಂದ ಮತ ವಿಭಜನೆ ಸಾಧ್ಯತೆಯ ನಿರೀಕ್ಷೆ ಇದೆ.

    ಇನ್ನು, ಎಸ್​ಡಿಪಿಐನಿಂದ ಜೈಲಿನಲ್ಲಿರುವ ಶಾಫಿ ಬೆಳ್ಳಾರೆ ಸ್ಪರ್ಧೆ ಮುಸ್ಲಿಮರ ಒಂದಷ್ಟು ಮತ ಪಡೆಯಬಹುದು. ಉಳಿದಂತೆ, ಜೆಡಿಎಸ್, ಆಪ್ ಅಭ್ಯರ್ಥಿಗಳು ಹೆಚ್ಚಿನ ಪರಿಣಾಮ ಬೀರಲಾರರು. ದಕ್ಷಿಣ ಕನ್ನಡ ಜಿಲ್ಲೆ 8 ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಶಾಸಕರಿದ್ದು, ಒಬ್ಬರು ಮಾತ್ರ ಕಾಂಗ್ರೆಸ್ ಶಾಸಕ. ಈ ಬಾರಿ ಹೇಗಾಗಬಹುದು ಎಂಬ ಲೆಕ್ಕಾಚಾರಗಳಿಗಿಂತಲೂ ಹೆಚ್ಚಾಗಿ ಪುತ್ತೂರು ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಕುತೂಹಲ.

    ಮಂಗಳೂರು ಖಾದರ್ ಖದರ್

    ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 1994ರ ಬಳಿಕ ಬಿಜೆಪಿ ಗೆಲುವಿನ ರುಚಿ ಸವಿದಿಲ್ಲ. ಇಲ್ಲಿ ಸತತ ಗೆಲುವು ಸಾಧಿಸುತ್ತಿರುವ ಹಾಲಿ ಶಾಸಕ ಕಾಂಗ್ರೆಸ್​ನ ಯು.ಟಿ.ಖಾದರ್ ಪ್ರತಿಸ್ಪರ್ಧಿಯಾಗಿರುವವರು ಬಿಜೆಪಿ ಯಿಂದ ಸತೀಶ್ ಕುಂಪಲ. ಕ್ಷೇತ್ರದಲ್ಲಿ ಎಸ್​ಡಿಪಿಐನಿಂದ ರಿಯಾಜ್ ಫರಂಗಿಪೇಟೆ ಸ್ಪರ್ಧೆಯಲ್ಲಿರುವುದು ಕಾಂಗ್ರೆಸ್​ಗೆ ಸಣ್ಣ ಮಟ್ಟಿಗಾದರೂ ಹೊಡೆತ. ಬಿಲ್ಲವ ಸಮುದಾಯ ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿರುವುದೂ ತಂತ್ರಗಾರಿಕೆ. ಇವೆಲ್ಲ ಕಾರಣಗಳಿಂದ ಈ ಬಾರಿ ಪೈಪೋಟಿ ಏರ್ಪಡಬಹುದು ಎಂಬ ನಿರೀಕ್ಷೆಗಳಿವೆ. ಯಾರೇ ಎದುರಾಳಿಗಳಿದ್ದರೂ, ನಾನು ಜಾತಿ, ಮತ ಭೇದವಿಲ್ಲದೆ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನತೆ ಮರೆಯುವುದಿಲ್ಲ ಎನ್ನುವುದು ಶಾಸಕ ಖಾದರ್ ನಂಬಿಕೆ.

    ಬಂಟ್ವಾಳ ಕುತೂಹಲ

    ಬಂಟ್ವಾಳ ಕ್ಷೇತ್ರದಲ್ಲಿ ಮತ್ತೆ ಬಂಟ ಸಮುದಾಯದ ಅಭ್ಯರ್ಥಿಗಳ ನಡುವೆಯೇ ನೇರ ಸ್ಪರ್ಧೆ. ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯ್್ಕ 2ನೇ ಬಾರಿ ಆಯ್ಕೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಬಿ.ರಮಾನಾಥ ರೈ ಎದುರಾಳಿ. ಗಲಭೆಗಳಿಂದ ಹೆಸರು ಪಡೆದಿದ್ದ ಬಂಟ್ವಾಳ ರಾಜೇಶ್ ನಾಯ್್ಕ ಅವಧಿಯಲ್ಲಿ ಶಾಂತವಾಗಿತ್ತು ಎಂಬುದು ಧನಾತ್ಮಕ ಅಂಶ. ಅಭಿವೃದ್ಧಿ ಆಧಾರದಲ್ಲಿ ಅವರಿಗೆ ಗೆಲುವಿನ ನಂಬಿಕೆ. ಅತ್ತ ರಮಾನಾಥ ರೈ ಇದು ತನ್ನ ಕೊನೆ ಚುನಾವಣೆ ಎಂಬ ದಾಳ ಉರುಳಿಸಿದ್ದಾರೆ. ಈ ಸಿಂಪಥಿ ನೆರವಿಗೆ ಬರಬಹುದು ಎಂಬ ಲೆಕ್ಕಾಚಾರ. ಎಸ್​ಡಿಪಿಐ ಸ್ಪರ್ಧೆ ಕಾಂಗ್ರೆಸ್​ಗೆ ಹೊಡೆತ. ಕೈ-ಕಮಲ ಯಾರಿಗೂ ಸುಲಭದ ಜಯವಿಲ್ಲ ಎಂಬುದು ಸದ್ಯದ ಸ್ಥಿತಿ.

    ಮಂಗಳೂರು ಉತ್ತರ ಕಾಂಗ್ರೆಸ್ ತತ್ತರ

    ಮಂಗಳೂರು ಉತ್ತರ (ಸುರತ್ಕಲ್) ನಾಮಪತ್ರ ಸಲ್ಲಿಸುವ ಕೊನೆವರೆಗೆ ಕುತೂಹಲ ಕೆರಳಿಸಿದ್ದ ಕ್ಷೇತ್ರ. ಹಾಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಗೆ ಬಿಜೆಪಿ ಮೊದಲ ಪಟ್ಟಿಯಲ್ಲೇ ಟಿಕೆಟ್ ಪ್ರಕಟಿಸಿತ್ತು. ಆದರೆ, ಕಾಂಗ್ರೆಸ್​ನಿಂದ ಇನಾಯತ್ ಅಲಿ ಮತ್ತು ಮೊಹಿಯುದ್ದೀನ್ ಬಾವ ಪೈಪೋಟಿ ವರಿಷ್ಠರಿಗೆ ತಲೆನೋವಾಗಿತ್ತು. ಅಂತಿಮವಾಗಿ ಇನಾಯತ್ ಅಲಿಗೆ ಟಿಕೆಟ್ ಘೊಷಿಸುತ್ತಿದ್ದಂತೆ ಮೊಹಿಯುದ್ದೀನ್ ಬಾವ ಜೆಡಿಎಸ್​ನಿಂದ ಅಖಾಡಕ್ಕಿಳಿದಿದ್ದಾರೆ. ಒಂದೇ ಸಮುದಾಯದ ಇಬ್ಬರು ಕಣಕ್ಕಿಳಿದಿರು ವುದರಿಂದ ಮತ ವಿಭಜನೆ ಖಚಿತ. ಇದರ ಲಾಭ ಬಿಜೆಪಿಗೆ. ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಕೈಬಿಡುವುದಿಲ್ಲ ಎನ್ನುವುದು ಶಾಸಕ ಭರತ್ ಶೆಟ್ಟಿ ವಿಶ್ವಾಸ.

    ಮೂಡುಬಿದಿರೆ ಯಾರ ಹಿರಿಮೆ?

    ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಾಂಗ್ರೆಸ್​ನಿಂದ ಮಿಥುನ್ ರೈ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಮೋದಿ ಅಲೆ, ಹಿಂದುತ್ವ, ಸಂಘರ್ಷಗಳು, ಅಭಯಚಂದ್ರ ಜೈನ್ ಮೇಲಿನ ಮತದಾರರ ಅಸಮಾಧಾನಗಳೂ ಬಿಜೆಪಿಗೆ ಪ್ಲಸ್ ಆಗಿತ್ತು. ಈ ಬಾರಿ ಕ್ಷೇತ್ರದಾದ್ಯಂತ ತಾರತಮ್ಯವಿಲ್ಲದೆ ನಡೆಸಿರುವ ಅಭಿವೃದ್ಧಿ ಕಾರ್ಯ ಗೆಲುವಿನತ್ತ ಮುನ್ನಡೆಸಲಿದೆ ಎನ್ನುತ್ತಿದ್ದಾರೆ ಶಾಸಕ ಕೋಟ್ಯಾನ್. ಅತ್ತ ಮಿಥುನ್ ರೈ ಯುವಕರನ್ನು ಸೆಳೆಯಲುಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದಾರೆ.

    ಬೆಳ್ತಂಗಡಿ ಜನರ ಒಲವು ಎತ್ತ?

    ಅಭಿವೃದ್ಧಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ಶಾಸಕ ಹರೀಶ್ ಪೂಂಜ ಈ ಬಾರಿ ನಿರಾಳರಾಗಿದ್ದಾರೆ. ಕಾಂಗ್ರೆಸ್​ನಿಂದ ರಕ್ಷಿತ್ ಶಿವರಾಂ ಹೊಸ ಮುಖ. 2ನೇ ಬಾರಿ ಆಯ್ಕೆ ಬಯಸಿರುವ ಪೂಂಜ ಹಿಂದೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಕಾಂಗ್ರೆಸಿನ ರಕ್ಷಿತ್ ಶಿವರಾಂ ಸ್ವಪಕ್ಷೀಯರಿಂದಲೇ ವಿರೋಧ ಎದುರಿಸಿದವರು. ವಸಂತ ಬಂಗೇರ ಸಹಿತ ಇತರರಿಂದ ಟಿಕೆಟ್ ಘೊಷಣೆ ಬಳಿಕ ಬೆಂಬಲ ದೊರೆತರೂ ಮಾಜಿ ಸಚಿವ ಗಂಗಾಧರ ಗೌಡ ಇನ್ನೂ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದೊಳಗೆ ಬಿಲ್ಲವ-ಗೌಡ ಚರ್ಚೆಗಳಿದ್ದು, ಇದು ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

    ಕಾಮತ್-ಲೋಬೊ ಫೈಟ್

    ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ 2ನೇ ಬಾರಿ ಸ್ಪರ್ಧೆಯಲ್ಲಿದ್ದಾರೆ. ಅವರಿಗೆ ಎದುರಾಗಿ ಕಾಂಗ್ರೆಸ್​ನಿಂದ ಕಣದಲ್ಲಿರುವವರು ಮಾಜಿ ಶಾಸಕ ಜೆ.ಆರ್.ಲೋಬೊ. ಕ್ಷೇತ್ರ ಕಾರ್ಯ, ಪ್ರಚಾರ ಗಳಲ್ಲಿ ಮುಂದಿರುವ ಕಾಮತ್, ಅಭಿವೃದ್ಧಿ ಹಾಗೂ ಜನರಿಗೆ ಸ್ಪಂದಿಸಿರುವ ವಿಚಾರದಲ್ಲಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದಾರೆ. ಪಕ್ಷದೊಳಗೆ ಪ್ರತಿಸ್ಪರ್ಧಿಗಳೂ ಇಲ್ಲ. ಕಾಂಗ್ರೆಸ್​ನಲ್ಲಿ ಬಿಲ್ಲವರಿಗೆ ಟಿಕೆಟ್ ನೀಡುವ ಪ್ರಯತ್ನ ನಡೆಯಿತಾದರೂ ಅಂತಿಮವಾಗಿ ಕ್ರೖೆಸ್ತ ಧರ್ವಿುಯರ ಕ್ಷೇತ್ರವಾಗಿಯೇ ಉಳಿಯಿತು. ಟಿಕೆಟ್ ಅಂತಿಮವಾಗುತ್ತಿದ್ದಂತೆ ಕಾಂಗ್ರೆಸ್​ನಲ್ಲೂ ಒಗ್ಗಟ್ಟು ಪ್ರದರ್ಶನ ನಡೆದರೂ, ಅದು ಇನ್ನೂ ಅಬ್ಬರ ಕಂಡಿಲ್ಲ. ವಾಸ್ತವ ಚಿತ್ರಣ ಬೇರೆಯಾಗಿರುವ ಕಾರಣ ಬಿಜೆಪಿ ಹೆಚ್ಚಿನ ಚಿಂತೆ ಮಾಡಿಕೊಂಡಿಲ್ಲ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭರ್ಜರಿ ರೋಡ್ ಶೋ ಬಿಜೆಪಿಯಲ್ಲಿ ಹೊಸ ಜೋಶ್ ಮೂಡಿಸಿದೆ.

    ಸುಳ್ಯದಲ್ಲಿ ಪ್ರಯೋಗ

    ಸುಳ್ಯದಲ್ಲಿ ಆರು ಬಾರಿ ಶಾಸಕರಾಗಿದ್ದ ಸಚಿವ ಎಸ್.ಅಂಗಾರ ಬದಲು ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಎಲ್ಲೇ ಸೋತರೂ ಇಲ್ಲಾಗದು ಎಂಬುದು ಬಿಜೆಪಿ ನಂಬಿಕೆ. ಅತ್ತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಡವಿದಂತೆ ಕಾಣುತ್ತಿದೆ. ನಂದಕುಮಾರ್ ಕೆಲವರ್ಷಗಳಿಂದ ಕಾರ್ಯಕರ್ತರ ಜತೆ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಸ್ಪರ್ಧೆಗೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಜಿ.ಕೃಷ್ಣಪ್ಪ ಅವರಿಗೆ ಪಕ್ಷ ಟಿಕೆಟ್ ಪ್ರಕಟಿಸಿದ್ದು ಸ್ಥಳೀಯ ಕೆಲ ಮುಖಂಡರನ್ನೂ ಕೆರಳಿಸಿತ್ತು. ಎಷ್ಟೇ ಪ್ರಯತ್ನಿಸಿದರೂ ಟಿಕೆಟ್ ಬದಲಾವಣೆ ಸಾಧ್ಯವಾಗಲಿಲ್ಲ. ನಂದಕುಮಾರ್ ಪಕ್ಷೇತರರಾಗಿ ಸ್ಪರ್ಧಿಸದಿದ್ದರೂ, ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿಲ್ಲ. ಇಲ್ಲಿ ಪಕ್ಷ ಹೋಳಾಗಿರುವುದು ಸ್ಪಷ್ಟ.

    ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts