

ತಮಿಳುನಾಡು: ಬಿಗ್ ಬಾಸ್ ತಮಿಳು ಸೀಸನ್ 08ರ (Bigg Boss 08) ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಮನೆಯೊಳಗೆ ಬಿಗ್ ಸ್ಪರ್ಧಿಗಳೇ ಎಂಟ್ರಿ ಕೊಟ್ಟಿದ್ದಾರೆ. ಈ ಪೈಕಿ ಕಿರುತೆರೆ ನಟಿ ಅನ್ಶಿತಾ ಅಕ್ಬರ್ಷಾ (Anshita Akbarshah) ಕೂಡ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಪ್ರವೇಶಿಸಿರುವುದು ಇದೀಗ ಅನೇಕರ ಹುಬ್ಬೇರಿಸಿದೆ. ಒಂದು ಸಮಯದಲ್ಲಿ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಸಿಲುಕಿದ್ದ ಈ ನಟಿ, ಸಾವಿಗೆ ಶರಣಾಗಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಮನಬಿಚ್ಚಿ ಮಾತನಾಡಿದ್ದು, ಅಂದು ನನ್ನನ್ನು ಬದುಕುಳಿಸಿದ್ದು ಯಾರು ಎಂಬುದನ್ನು ರಿವೀಲ್ ಮಾಡಿದ್ದಾರೆ.
"ಕೇರಳದಲ್ಲಿ ಹುಟ್ಟಿದ ನಾನು ತಂದೆ-ತಾಯಿ ಪ್ರೀತಿಯನ್ನು ಕಾಣಲಿಲ್ಲ. ಬಾಲ್ಯದಲ್ಲಿದ್ದಾಗಲೇ ನನ್ನ ಪೋಷಕರು ಡಿವೋರ್ಸ್ ಪಡೆದರು. ಇಂತಹ ಕಷ್ಟಕರ ಸಮಯದಲ್ಲಿ ನನ್ನನ್ನು ನೋಡಿಕೊಂಡಿದ್ದು ಅಮ್ಮ ಬಿಟ್ಟರೆ ಬೇರಾರೂ ಅಲ್ಲ. ಇವತ್ತು ನಾನು ಏನೇ ಆಗಿದ್ದರೂ ಅದಕ್ಕೆಲ್ಲ ಕಾರಣ ನನ್ನಮ್ಮ ಮತ್ತು ಆಪ್ತ ಸ್ನೇಹಿತರಷ್ಟೇ. 27 ವರ್ಷದ ನಾನು, ಅಂದು ಅದೊಂದು ಘಟನೆಯಿಂದ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದೆ" ಎಂದಿದ್ದಾರೆ.
"ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಯಾವುದನ್ನು ಮಾಡಬಾರದಿತ್ತೋ ಅದನ್ನೆಲ್ಲ ಮಾಡಿಬಿಟ್ಟಿದ್ದೇನೆ. ಆ ಸಮಯದಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ತಲುಪಿದ್ದೆ. ಇನ್ನೇನು ಸಾವಿಗೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಆ ಹಂತದಿಂದ ಪಾರು ಮಾಡಿದ್ದೇ ನನ್ನ ಸ್ನೇಹಿತರು. ಇಂದು ನಾನು ಬದುಕಿದ್ದೇನೆ, ಖುಷಿಯಿಂದ ನಿಮ್ಮೊಟ್ಟಿಗೆ ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆಲ್ಲ ಆ ನಲ್ಮೆಯ ಜೀವಗಳೇ ಕಾರಣ. ಬಾಲ್ಯದಿಂದಲೂ ನಾನು ಪ್ರೀತಿಯಿಂದ ವಂಚಿತಳಾಗಿದ್ದೀನಿ. ಪ್ರೀತಿ ಸಂಪಾದಿಸುವುದೇ ನನ್ನ ದೊಡ್ಡ ಗುರಿ. ಪ್ರೀತಿಯ ಹುಡುಕಾಟದಲ್ಲಿರುವ ನನಗೆ, ನಿಮ್ಮ ಪ್ರೀತಿ, ಆಶೀರ್ವಾದ ಬಹಳ ಮುಖ್ಯ" ಎಂದು ಹೇಳಿದ್ದಾರೆ,(ಏಜೆನ್ಸೀಸ್).