

‘ಎಲ್ಲ ಕ್ಷೇತ್ರಗಳಲ್ಲಿರುವಂತೆ ಕೋಸ್ಟ್ ಗಾರ್ಡ್ ಕ್ಷೇತ್ರದಲ್ಲೂ ಚಿಕ್ಕ ಪುಟ್ಟ ರಿಸ್ಕ್ ಇವೆ. ಹಾಗೆ ನೋಡಿದರೆ ರಿಸ್ಕ್ ಇಲ್ಲದ ಜಾಗವೇ ಇಲ್ಲ. ಕೆಲವು ಕ್ಷೇತ್ರಗಳಲ್ಲಿ ರಜೆ ಸಿಗುವುದಿಲ್ಲ ಎಂಬ ಆರೋಪವೂ ಇದೆ. ಆದರೆ ನನ್ನ ಪ್ರಕಾರ ಹೆಚ್ಚು ಒತ್ತಡವಿಲ್ಲದ, ಅಧಿಕ ವೇತನ ಪಡೆಯಬಹುದಾದ ಕ್ಷೇತ್ರವಿದು. ಇದೊಂದು ರೀತಿ ಸಾಹಸಿ ವೃತ್ತಿಯಾಗಿದೆ. ವೃತ್ತಿ ಜೀವನ, ವೈಯಕ್ತಿಕ ಜೀವನ ಎರಡೂ ಚೆನ್ನಾಗಿರುತ್ತದೆ’ ಎಂದು ಕೋಸ್ಟ್ ಗಾರ್ಡ್ ಸೇರಲು ಬಯಸುವ ಅಭ್ಯರ್ಥಿಗಳಿಗೆ ಸೂಚಿಸಿರುವ ಮನೋಜ್ ಬಾಡ್ಕರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮೂಲತಃ ಕಾರವಾರ. ಕಾರವಾರದಲ್ಲಿಯೇ ಪ್ರೌಢ, ಪದವಿ ಮತ್ತು ಪಿಯು ಶಿಕ್ಷಣ ಮುಗಿಸಿದೆ. ಇದೇ ಸಮಯದಲ್ಲಿ NCC Navyಯಲ್ಲಿದ್ದೆ. ಆಗ ನನಗೆ ಕೋಸ್ಟ್ ಗಾರ್ಡ್ ಸೇರಬೇಕೆಂದು ಸ್ಫೂರ್ತಿಯಾಯಿತು. ಆ ನಂತರ ಬಾಂಬೆಗೆ ತೆರಳಿದೆ. ಅಲ್ಲಿಂದ ಕೋಸ್ಟ್ ಗಾರ್ಡ್ ಸೇವೆಗೆ ಆಯ್ಕೆಯಾದೆ. ಕೋಸ್ಟ್ ಗಾರ್ಡ್‌ನಲ್ಲಿ ಪದವಿ ಅಥವಾ ಪಿಯುಸಿ ಆಧಾರದ ಮೇಲೆ ವಿವಿಧ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆಯಾದರೂ, ನಾನು ಪದವಿ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡೆ.
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಕಡ್ಡಾಯ ವಿಷಯಗಳು) ಕನಿಷ್ಠ 60 ಅಂಕ, ಪದವಿಯಲ್ಲಿ ಯಾವುದೇ ವಿಷಯದಲ್ಲಿ 60 ಅಂಕ ಪಡೆದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಮಾಧ್ಯಮದಲ್ಲಿ ಓದಿದರೂ ಡಿಟರ್ಮಿನೇಷನ್ ಇರುವವರು ಈ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಒಳ್ಳೆಯದು. ಕಾಲೇಜು ದಿನಗಳಲ್ಲಿಯೇ ಸಂವಹನ, ಗುಂಪು ಚರ್ಚೆ, ಮಾತುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಕ್ಷೇತ್ರಕ್ಕೆ ಬಂದಾಗ ಸಲೀಸು ಎನಿಸುತ್ತದೆ. ಚೆನ್ನಾಗಿ ಕೆಲಸ ನಿರ್ವಹಿಸಬಹುದು. ಟೀಂ ವರ್ಕ್ ಕೂಡ ಬಹಳ ಮುಖ್ಯಪಾತ್ರವಹಿಸುತ್ತದೆ. ಶಾಲಾ, ಕಾಲೇಜು ದಿನಗಳಲ್ಲಿಯೇ ನಾಯಕತ್ವ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಇಂತಹ ಹುದ್ದೆಗಳನ್ನು ಅಲಂಕರಿಸಲು ಸಹಕಾರಿಯಾಗುತ್ತದೆ.
ಕೋಸ್ಟ್ ಗಾರ್ಡ್ ಕ್ಷೇತ್ರದಲ್ಲಿ ಕರ್ನಾಟಕದವರು ಇಲ್ಲವೇ ಇಲ್ಲ. ಕರ್ನಾಟಕದಲ್ಲಿ ಬೆಂಗಳೂರು, ಕೂರ್ಗ್ ಭಾಗದವರು ಕೂಡ ಈ ಕ್ಷೇತ್ರಕ್ಕೆ ಬರಲು ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಬಹುತೇಕರಿಗೆ ಇಂತದ್ದೊಂದು ಕ್ಷೇತ್ರವಿದೆ ಎಂಬುದೇ ಗೊತ್ತಿಲ್ಲ. ಆದರೆ ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಅತ್ಯಗತ್ಯವಾಗಿದೆ. ಯಾರೇ ಆಗಲಿ ಕೋಸ್ಟ್ ಗಾರ್ಡ್‌ಗೆ ಸೇರಲು ಹೆಚ್ಚಿನ ಆಸಕ್ತಿ ತೋರದಿರುವುದಕ್ಕೆ ಬಹುಮುಖ್ಯ ಕಾರಣವಿದೆ. ಅವರಿಗೆ ವೇತನ, ಕೆಲಸದ ಸ್ವರೂಪದ ಬಗ್ಗೆಯಾಗಲೀ ತಿಳಿದಿಲ್ಲ. ಡಿಫೆನ್ಸ್ ಸರ್ವೀಸ್‌ಗೆ ಹೋದರೆ ಹೆಚ್ಚಿನ ರಿಸ್ಕ್ ಎಂದು ಜನರು ಭಾವಿಸುತ್ತಾರೆ. ಹಾಗೆ ನೋಡಿದರೆ ಎಲ್ಲ ಕ್ಷೇತ್ರಗಳಲ್ಲಿರುವಂತೆ ಇಲ್ಲೂ ಚಿಕ್ಕ ಪುಟ್ಟ ರಿಸ್ಕ್ ಇವೆ. ಕಾರ್ಪೋರೆಟ್ ವಲಯಕ್ಕಿಂತ ವಿಭಿನ್ನವಾಗಿರುವ ಈ ವೃತ್ತಿ ಆಯ್ಕೆ ಮಾಡಿಕೊಂಡರೆ ಜೀವನದಲ್ಲೂ ಒಂದು ರೀತಿ ಸಂತೋಷವಾಗಿರಬಹುದು. ಆದ್ದರಿಂದ ಯಾವುದೇ ಅಂಜಿಕೆಯಿಲ್ಲದೆ ಮಕ್ಕಳು ಈ ಸರ್ವಿಸ್ ಆಯ್ಕೆ ಮಾಡಿಕೊಳ್ಳಬಹುದು.
ಕಾರವಾರ ಮೂಲದ ಮನೋಜ್ ಬಾಡ್ಕರ್ ಭಾರತೀಯ ಕೋಸ್ಟ್ ಗಾರ್ಡ್‌ನ ಪಶ್ಚಿಮ ವಲಯದ ನೂತನ ಕಮಾಂಡರ್. ಮಹಾರಾಷ್ಟ್ರ, ಗೋವಾ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಕರ್ನಾಟಕ ಪಶ್ಚಿಮ ಪ್ರದೇಶ ವ್ಯಾಪ್ತಿಯಲ್ಲಿ ಬರಲಿದ್ದು, ಈ ವ್ಯಾಪ್ತಿಗೆ ಈಗ ಮನೋಜ್ ಬಾಡ್ಕರ್ ಮುಖ್ಯಸ್ಥರಾಗಿದ್ದಾರೆ.
ಕಾರವಾರ ಮೂಲದ ಸುಸಂಸ್ಕೃತ ಕುಟುಂಬದ ಹಿನ್ನೆಲೆಯ ಮನೋಜ್ ಕಾರವಾರದ ಸೇಂಟ್ ಜೋಸೆಫ್ ಹೈಸ್ಕೂಲ್ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆಯ ವಿದ್ಯಾರ್ಥಿ. 2006ರಿಂದ 2008ರವರೆಗೆ ಕೋಸ್ಟ್ ಗಾರ್ಡ್‌ನ ಕರ್ನಾಟಕ ಮತ್ತು ಗೋವಾ ರಾಜ್ಯದ ಮುಖ್ಯಸ್ಥರಾಗಿದ್ದರು. 2013ರಿಂದ 2018ರವರೆಗೆ ದೆಹಲಿಯ ಕೋಸ್ಟ್ ಗಾರ್ಡ್ ನೇಮಕಾತಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು, 2018ರಲ್ಲಿ ಇನ್ಸ್ಪೆಕ್ಟರ್ ಜನರಲ್ ಶ್ರೇಣಿಗೆ ಬಡ್ತಿ ಪಡೆದರು. 36 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಹಲವಾರು ಕೋಸ್ಟ್ ಗಾರ್ಡ್ ಹಡಗುಗಳು ಮತ್ತು ನಿಲ್ದಾಣಗಳಿಗೆ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.