More

    Success Story | ಚಾಕ್​ಪೀಸ್​ ಹಿಡಿದ ಕೈಯಲ್ಲೀಗ ಬ್ಯಾಟನ್; ವಿದ್ಯಾರ್ಥಿಗಳ ಬದಲಿಗೆ ಸಮಾಜ ಘಾತಕರಿಗೆ ಕ್ಲಾಸ್​!

    ಈ ಮೊದಲು ಕೆ.ಪರಶುರಾಮ್​ ಹಾಸನ ಜಿಲ್ಲೆಯಲ್ಲಿ ಹೈಸ್ಕೂಲ್​ ಶಿಕ್ಷಕರಾಗಿದ್ದವರು. ಅಸೆಂಬ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ವೇಳೆ ಚುನಾವಣೆಗೆ ಸಂಬಂಧಿಸಿದ ತರಬೇತಿ ಸಮಯದಲ್ಲಿ ಐಎಎಸ್​ ಅಧಿಕಾರಿಯೊಬ್ಬರ ಮಾತುಗಳಿಂದ ದೊರೆತ ಪ್ರೇರಣೆಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ. ಹೌದು, ಚಾಕ್​ಪೀಸ್​ ಹಿಡಿದಿದ್ದ ಅವರ ಕೈಯಲ್ಲೀಗ ಬ್ಯಾಟೆನ್​ ಇದೆ. ವಿದ್ಯಾರ್ಥಿಗಳ ಬದಲಿಗೆ, ಸಮಾಜಘಾತಕರಿಗೆ “ಕ್ಲಾಸ್​’ ತೆಗೆದುಕೊಳ್ಳುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಜವಾಬ್ದಾರಿ ಹೊತ್ತಿದ್ದಾರೆ. ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಎಸ್​ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಪರಶುರಾಮ್​ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕೆಲವು ಮುಖ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

    > ಡಿಪಿಎನ್​ ಶ್ರೇಷ್ಠಿ, ಚಿತ್ರದುರ್ಗ

    ಪರಶುರಾಮ್​ ಅವರಿಗೆ ದುರ್ಗ ಹೊಸದಲ್ಲ. ಈ ಹಿಂದೆ ಅವರು ಇಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಎಸ್​ಪಿಯಾಗಿ ಹಾವೇರಿ, ಮಂಡ್ಯ ಹಾಗೂ ಡಿಸಿಆರ್​ಇ ಬಳಿಕ ದುರ್ಗದಲ್ಲಿ ಎಸ್​ಪಿಯಾಗಿದ್ದಾರೆ. ಮೂಲತ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮುಟುಗುಪ್ಪೆ ಗ್ರಾಮದ ಕೃಷಿಕ ಕುಟುಂಬದ ಪರಶುರಾಮ್​ ವಿದ್ಯಾರ್ಥಿ ದಿಸೆಯಲ್ಲಿ ಇಂಥದ್ದೇ ವೃತ್ತಿ ಆರಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರಲ್ಲ.

    ಇದನ್ನೂ ಓದಿ: Success Story | ಇವರು 100ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾರೆ; ಅಂತಿಮವಾಗಿ ಆಯ್ಕೆ ಆಗಿದ್ದು ಕರ್ನಾಟಕ ಫಾರೆಸ್ಟ್​ ಸರ್ವಿಸ್​ಗೆ!

    ತಿರುವಿಗೆ ಮತ್ತೊಂದು ಕಾರಣ

    ಗ್ರಾಮದ ಸರ್ಕಾರಿ ಪ್ರಾಥಮಿಕ, ಗ್ರಾಮೀಣ ಖಾಸಗಿ ಹೈಸ್ಕೂಲ್​, ಪಿಯು ಮತ್ತು ಪದವಿಯನ್ನು ಸರ್ಕಾರಿ ಕಾಲೇಜುಗಳಲ್ಲಿ ಓದಿದ್ದ ಪರಶುರಾಮ್​ ಕನ್ನಡದಲ್ಲೇ ಕೆಎಎಸ್​ ಬರೆದು ಪಾಸ್​ ಮಾಡಿದ್ದಾರೆ. ವೃತ್ತಿ ಬದಲಾವಣೆಗೆ ಚುನಾವಣೆ ತರಬೇತಿ ವೇಳೆ ದೊರೆತ ಪ್ರೇರಣೆ ಒಂದು ಕಾರಣವಾದರೆ, ಕುವೆಂಪು ವಿಶ್ವವಿದ್ಯಾಲಯದ ಎಂಎ. ಅಧ್ಯಯನದ ವೇಳೆ ಯುಜಿಸಿ ಜೂನಿಯರ್​ ಫೆಲೋಶಿಪ್​ ದೊರೆತಿದ್ದರೂ ಪಿಎಚ್​.ಡಿ ಅಧ್ಯಯನದಿಂದ ಹಿಂದೆ ಸರಿದಿದ್ದು ಮತ್ತೊಂದು ಕಾರಣವಾಯಿತು. ತಾವು ಆರಿಸಿಕೊಂಡಿದ್ದ ವಿಷಯದ ಅಧ್ಯಯನ ಮುನ್ನವೇ ಮತ್ತೊಬ್ಬರು ಅದೇ ವಿಚಾರದಲ್ಲಿ ಪ್ರಬಂಧ ಮಂಡಿಸಿದ್ದರಿಂದಾಗಿ ಪಿಎಚ್​.ಡಿಯಿಂದ ಪರಶುರಾಮ್​ ಹಿಂದೆ ಸರಿದರು. ಇಲ್ಲವಾದಲ್ಲಿ ಬಹುಶಃ ಅವರಿವತ್ತು ಬೋಧನಾ ವೃತ್ತಿಯಲ್ಲೇ ಮುಂದುವರಿಯುತ್ತಿದ್ದರು.

    ಪ್ರತಿಭಾವಂತ ವಿದ್ಯಾರ್ಥಿ

    ವಿದ್ಯಾಭ್ಯಾಸದ ವೇಳೆ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಿಎ ಪದವಿಯಲ್ಲಿ 8ನೇ, ಬಿಇಡಿಯಲ್ಲಿ ಕರ್ನಾಟಕ ವಿವಿಗೆ 10 ನೇ ಹಾಗೂ ಕುವೆಂಪು ವಿವಿ ಎಂಎ ಕನ್ನಡದಲ್ಲಿ ಮೊದಲ ರ್ಯಾಂಕ್​ ಪಡೆದಿದ್ದಾರೆ.

    ಇದನ್ನೂ ಓದಿ: Success Story | ಯುಪಿಎಸ್​ಸಿ ಪಾಸ್ ಆಗಲು ತರಬೇತಿ ಮಹತ್ವದ್ದಲ್ಲ! ಸ್ವಯಂ ಅಧ್ಯಯನವೇ ಅಂತಿಮ

    ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿ?

    ನಮ್ಮೂರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಮುಟುಗುಪ್ಪೆ. ಅಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ಹಾಗೂ ಸೊರಬದ ನಿಸ್ರಾಣಿ ವಿದ್ಯಾವರ್ಧಕ ಸಂದಲ್ಲಿ ಹೈಸ್ಕೂಲ್​ ವಿದ್ಯಾಭ್ಯಾಸದ ನಂತರ ಸೊರಬದ ಸರ್ಕಾರಿ ಪಿಯು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಬಿ.ಎ ಪದವಿ ಹಾಗೂ ಹಾನಗಲ್​ ಕುಮಾರೇಶ್ವರ ಕಾಲೇಜಿನಲ್ಲಿ ಬಿಇಡಿ ಮಾಡಿದ್ದೇನೆ.

    ವೃತ್ತಿಯ ಬಗ್ಗೆ ಮೊದಲೇ ಪ್ಲಾನ್​ ಇತ್ತೇ?

    ಇಲ್ಲ. ನಮ್ಮದು ಸಾಮಾನ್ಯ ಕೃಷಿಕ ಕುಟುಂಬ. ಪಾಲಕರು ಕೂಡ ನಾನು ಇದೇ ಕೆಲಸ ಮಾಡಬೇಕೆಂದೂ ಯೋಚಿಸಿದವರಲ್ಲ. ಪ್ರಾಧ್ಯಾಪಕ ಕುಂಸಿ ಉಮೇಶ್​ ಅವರ ಪ್ರೋತ್ಸಾಹ ನನ್ನ ಓದಿನ ಹವ್ಯಾಸಕ್ಕೆ ನೆರವಾಯಿತು. ಪೊಲೀಸ್​ ಅಧಿಕಾರಿಯಾಗಿ ಈಗ ಓದಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾದರೂ, ಹವ್ಯಾಸದಿಂದ ಹಿಂದೆ ಸರಿದಿಲ್ಲ.

    ಇದನ್ನೂ ಓದಿ: Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ಪೊಲೀಸ್​ ಸೇವೆಗೆ ಹೇಗೆ ಬಂದಿದ್ದು?

    ನಾನು 2006ರಲ್ಲಿ ಕೆಎಎಸ್​ ಪಾಸ್​ ಮಾಡಿ ಕೆಎಸ್​ಪಿಎಸ್​ ಸರ್ವಿಸ್​ಗೆ ಆಯ್ಕೆಯಾದೆ. ಒಂದು ವರ್ಷ ಮೈಸೂರಲ್ಲಿ ಪೊಲೀಸ್​ ತರಬೇತಿ ಬಳಿಕ ಪ್ರೊಬೇಷನರಿ ಡಿವೈಎಸ್​ಪಿಯಾಗಿ ಕೊಪ್ಪಳ, ಒಂದು ವರ್ಷದ ಬಳಿಕ ಹೊಳೆನರಸೀಪುರ ಡಿವೈಎಸ್​ಪಿಯಾಗಿ ನೇಮಕಗೊಂಡೆ. 2011 ರಿಂದ 13 ರವರೆಗೆ ಮೈಸೂರು ಲೋಕಾಯುಕ್ತ ಡಿವೈಎಸ್​ಪಿ, ಧಾರವಾಡ ಲೋಕಾಯುಕ್ತ ಎಸ್​ಪಿಯಾಗಿ ಹಾಗೂ 2015 ರಿಂದ 17 ರವರೆಗೆ ದುರ್ಗದಲ್ಲಿ ಅಡಿಷನಲ್​ ಎಸ್​ಪಿಯಾಗಿ ಕೆಲಸ ಮಾಡಿದ್ದೆ.

    ಐಪಿಎಸ್​ ಆವಾರ್ಡ್​

    2017ರಲ್ಲಿ ನನಗೆ ಐಪಿಎಸ್​ ಆವಾರ್ಡ್​ ಆಯಿತು. ಕೆಎಎಸ್​ ಉತ್ತೀರ್ಣವಾಗುವ ಮುನ್ನ ನಾನು 2002 ರಿಂದ 2006 ವರೆಗೆ ಹಾಸನ ಜಿಲ್ಲೆ ಕಬ್ಬತ್ತಿ ಕ್ರಾಸ್​ ಸರ್ಕಾರಿ ಹೈಸ್ಕೂಲ್​ನಲ್ಲಿ ಶಿಕ್ಷಕನಾಗಿದ್ದೆ. ಶಿಕ್ಷಕನಾಗುವ ಮುನ್ನ ಎಸ್​ಡಿಎ ಪರೀಕ್ಷೆ ಪಾಸಾಗಿದ್ದರೂ, ಶಿಕ್ಷಕನಾದ ಬಳಿಕ ಎಸ್​ಡಿಎ ನೇಮಕ ಪತ್ರ ಬಂದಿತ್ತು. 2009 ರಲ್ಲಿ ಕೆಎಎಸ್​ ಬರೆದಿದ್ದರು, ಐದು ಅಂಕಗಳ ಕೊರತೆಯಿಂದ ಪಾಸಾಗಲಿಲ್ಲ.

    ಶಿಕ್ಷಕನಾಗಿದ್ದಾಗ 2004ರ ವಿಧಾನಸಭಾ ಚುನಾವಣೆ ತರಬೇತಿಗೆಂದು ಬಂದಿದ್ದ ಐಎಎಸ್​ ಅಧಿಕಾರಿಯೊಬ್ಬರು ಆಡಿದ ಮಾತು ನನ್ನ ಈ ಸಾಧನೆಗೆ ಮೂಲ ಪ್ರೇರಣೆ. ಅಲ್ಲಿವರೆಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದರೂ ಅದಕ್ಕೊಂದು ಗಂಭೀರತೆ ಇರಲಿಲ್ಲ. ಅದೇ ಸಮಯಕ್ಕೆ ಕೆಎಎಸ್​ ಪರೀಕ್ಷೆಗೆ ಅಧಿಸೂಚನೆ ಪ್ರಕಟವಾಗಿತ್ತು. ಇದಕ್ಕೆ ಸಿರಿಯಸ್ಸಾಗಿ ನಡೆಸಿದ್ದ ಸಿದ್ಧತೆ ಫಲ ನೀಡಿತು.

    ಇದನ್ನೂ ಓದಿ: Success Story: ಕಾರ್ಪೊರೇಟ್​ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಸಾಧಕ!

    ವಿದ್ಯಾರ್ಥಿಗಳಿಗೆ ಏನು ಹೇಳ ಬಯಸುತ್ತೀರಿ

    ಕೀಳರಿಮೆ ಇದ್ದರೆ ಮೊದಲು ತೊಡೆದು ಹಾಕಿ. ಭಾಷೆ, ಪ್ರದೇಶ, ಬಡತನ ಇತ್ಯಾದಿ ನಿಮ್ಮಲ್ಲಿರುವ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ಎರಡನೇಯದು ನಿಮಗೆ ನೀವೇ ಮಾಡೆಲ್​ ಆಗಬೇಕು. ಸಾಧಕರು ಮಾದರಿ ಆಗಬಾರದು ಎಂದಲ್ಲ, ಆದರೆ ಮಾಡೆಲ್​ಗಳನ್ನು ಅರಸುತ್ತಾ ಗುರಿ ಮರೆಯುವ ಸಾಧ್ಯತೆ ಅಧಿಕವಿರುತ್ತದೆ. ಸಾಧಕರ ಪ್ರೋತ್ಸಾಹದ ಮಾತುಗಳನ್ನು ಅವಕಾಶಗಳನ್ನಾಗಿ ಬಳಸಿಕೊಳ್ಳುವ ಜಾಣ್ಮೆ ನಿಮ್ಮದಾಗಿರಲಿ. ವಿದ್ಯಾಭ್ಯಾಸದ ಸಮಯದಲ್ಲಿ ವ್ಯರ್ಥ ಕಾಲಹರಣ ಖಂಡಿತಾ ಬೇಡ.

    ಐಚ್ಛಿಕ ವಿಷಯಗಳನ್ನು ಬದಲಾಯಿಸಬೇಡಿ

    ಕೆಎಎಸ್​, ಐಎಎಸ್​ನಂಥ ಪರೀಕ್ಷೆಗಳನ್ನು ಎದುರಿಸುವಾಗ ಯಾವುದೇ ಕಾರಣಕ್ಕೂ ಐಚ್ಛಿಕ ವಿಷಯಗಳನ್ನು ಬದಲಿಸಬೇಡಿ. ನಾನು 2 ಬಾರಿ ಪರೀಕ್ಷೆ ಎದುರಿಸಿದಾಗಲೂ ಐಚ್ಛಿಕ ವಿಷಯ ಕನ್ನಡ ಮತ್ತು ಇತಿಹಾಸವಾಗಿತ್ತು. ವಿಷಯದ ಆಯ್ಕೆ ಬಗ್ಗೆಯೂ ಕೀಳರಮೆ ಬೇಡ. ಓದಿದ ವಿಷಯವನ್ನು ಮನನ ಮಾಡಿಕೊಳ್ಳಬೇಕು.

    ಪ್ರಚಲಿತ ವಿದ್ಯಾಮಾನಗಳೆಡೆ ಅಪ್​ಡೇಟ್​ ಆಗಿರಿ

    ಪ್ರಚಲಿತ ವಿದ್ಯಾಮಾನಗಳರಿವು ಖಂಡಿತಾ ಬೇಕು. ಒಂದೆಡೆ ನೋಟ್​ ಮಾಡಿಟ್ಟುಕೊಂಡು ಪದೇ ಪದೆ ಅವುಗಳನ್ನು ಮನನ ಮಾಡಿ ಕೊಳ್ಳುತ್ತಿರಬೇಕು. ಹಾಗೇ ಮಾಡುವ ಸಂದರ್ಭದಲ್ಲಿ ಪ್ರಚಲಿತ ವಿಷಯಗಳ ಅಪಡೇಟ್​ಗಳ ಬಗ್ಗೆ ಕೂಡ ಗಮನ ಇರಬೇಕು.

    ಇದನ್ನೂ ಓದಿ: Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಚೆನ್ನಾಗಿ ನಿದ್ರೆ ಮಾಡಿ

    ಕನ್ನಡ, ಇಂಗ್ಲಿಷ್​ ಮಾಧ್ಯಮ ಎಂದೆಲ್ಲ ಗೊಂದಲಗಳಿಗೆ ಒಳಗಾಗಬೇಡಿ. ಪರೀಕ್ಷೆ ಸಮಯದಲ್ಲಿ ಖಂಡಿತಾ ಆರೋಗ್ಯದೆಡೆ ವಿಶೇಷ ನಿಗಾವಹಿಸಿ ನಿದ್ರೆ ಕೂಡ ಚೆನ್ನಾಗಿ ಮಾಡಿ. ಅಧ್ಯಯನ ನೆಪದಲ್ಲಿ ನಿದ್ರಾಹಿನತೆ ಸಲ್ಲದು.

    ಗ್ರಂಥಾಲಯದ ಪ್ರಯೋಜನ ಪಡೆಯಿರಿ

    ಗ್ರಂಥಾಲಯದ ಬಳಕೆ ಬಗ್ಗೆ ಉದಾಸೀನ ಬೇಡ. ನಾನು ಹೊಸಬಾಳೆಯಲ್ಲಿರುವ ಗ್ರಾಪಂ ಗ್ರಂಥಾಲಯದಿಂದ ಸಾಕಷ್ಟು ಪ್ರಯೋಜನ ಪಡೆದುಕೊಂಡಿದ್ದೇನೆ. ಓದಿನ ಹವ್ಯಾಸ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಖಂಡಿತಾ ನೆರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts