More

    Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

    ರುದ್ರಯ್ಯ ಎಸ್​. ಎಸ್​. ಬೆಂಗಳೂರು

    “ಹೆಣ್ಣು ಮಕ್ಕಳು ನಗರದಲ್ಲಿದ್ದು, ಹೆಚ್ಚಿಗೆ ಓದಿದರೆ ಮಾತು ಕೇಳುವುದಿಲ್ಲ. ಸುಮ್ನೆ ಮದುವೆ ಮಾಡಿ’ ಎಂಬ ಸಂಬಂಧಿಕರ ಋಣಾತ್ಮಕ ಮಾತುಗಳ ನಡುವೆಯೂ ತಂದೆ&ತಾಯಿಯರ ಸಂಪೂರ್ಣ ಸಹಕಾರದಿಂದ 3ನೇ ಪ್ರಯತ್ನದಲ್ಲಿ ಐಎಎಸ್​ ಕ್ಲಿಯರ್​ ಮಾಡಿ, 2016ರ ಬ್ಯಾಚ್​ನಲ್ಲಿ 175ನೇ ರ‍್ಯಾಂಕ್​ ಪಡೆದು ಪ್ರಸ್ತುತ ಚಾಮರಾಜನಗರದ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಯಾಗಿರುವ ಎಸ್​. ಪೂವಿತಾ ಅವರು ವಿಜಯವಾಣಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್​ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಅಧಿಕಾರಿಯಾಗುವ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಲಹೆ ನೀಡಿದ್ದಾರೆ.

    ಕಾಲೇಜಿಗೆ ಮೊದಲನೇ ರ‍್ಯಾಂಕ್​
    ಮೂಲತಃ ತಮಿಳುನಾಡಿನ ಕರೂರ್​ ಜಿಲ್ಲೆಯವರಾದ ಎಸ್​. ಪೂವಿತಾ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಜಿಲ್ಲೆಯ ಚೆರನ್​ ಮೆಟ್ರಿಕ್ಯುಲೆಷನ್​ ಶಾಲೆಯಲ್ಲಿ ಮುಗಿಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.93.6 ಅಂಕ, ಪಿಯುಸಿಯಲ್ಲಿ ಶೇ.96.3 ಅಂಕ ಗಳಿಸಿದರು. ಒಂದು ವೇಳೆ ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಬೇಕೆಂಬ ಕಾರಣದಿಂದ ಕೊಯಮತ್ತೂರಿನ ಕುಮಾರಗುರು ಕಾಲೇಜಿನಲ್ಲಿ ಟೆಕ್ಸ್​ಟೈಲ್​ ಟೆಕ್ನಾಲಜಿಯಲ್ಲಿ ಬಿ.ಟೆಕ್​ ಪದವಿ ಪಡೆಯುವುದರೊಂದಿಗೆ ವಿಶ್ವವಿದ್ಯಾಲಯಕ್ಕೆ 3ನೇ ಹಾಗೂ ಕಾಲೇಜಿಗೆ ಮೊದಲ ರ‍್ಯಾಂಕ್​ ಬಂದರು.

    ವಿ.ಇರೈ ಅನ್ಬು ಪ್ರೇರಣೆ

    ಕೃಷಿ ಹಿನ್ನೆಲೆಯುಳ್ಳ ಮಧ್ಯಮ ವರ್ಗ ಕುಟುಂಬದಿಂದ ಬಂದಿರುವ ಪೂವಿತಾ, ತಮ್ಮ ಕುಟುಂಬದಲ್ಲಿಯೇ ಮೊದಲ ಪದವಿಧರೆ. ತಂದೆ ಕೃಷಿ ಜತೆಗೆ ಹಾಲು ವ್ಯಾಪಾರ ಮಾಡುತ್ತಿದ್ದರು. ತಾಯಿ ಗೃಹಿಣಿ. ಪ್ರತಿವಾರ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಪ್ರಸ್ತುತ ತಮಿಳುನಾಡು ಸರ್ಕಾರದ ಸಿಎಸ್​ ಆಗಿರುವ ವಿ.ಇರೈ ಅನ್ಬು ಅವರ “ನೀವು ಆಗಬಹುದು ಐಎಎಸ್​’ ಎಂಬ ಬರಹಗಳನ್ನು ಓದಿ ಸ್ಪೂರ್ತಿ ಪಡೆದ ಪೂವಿತಾ ಅವರಿಗೆ ಈಗಲೂ ಅವರೇ ಪ್ರೇರಣೆಯಾಗಿದ್ದಾರೆ.

    ಪದವಿ ಮುಗಿದ ಕೂಡಲೇ ಕೋಚಿಂಗ್​ ತೆರಳಬೇಕೆಂದು ತಿರ್ಮಾನಿಸಿದ್ದರು. ಆದರೆ ಕುಂಟುಬದಲ್ಲಿದ್ದ ಆರ್ಥಿಕ ಸಮಸ್ಯೆ ಸರಿದೂಗಿಸಲು ಚೆನ್ನೈನಲ್ಲಿರುವ ಇನ್ಫೋಸಿಸ್​ನಲ್ಲಿ ಕೆಲಸಕ್ಕೆ ಸೇರಿದರು. ಕುಟುಂಬದ ಸ್ಥಿತಿ ಸುಧಾರಿಸಿದ ನಂತರ ಒಂದು ವರ್ಷ ವಿಶ್ರಾಂತಿ ರಜೆ ತೆಗೆದುಕೊಂಡು 2011&12 ರಿಂದ ಯುಪಿಎಸ್​ಸಿಗೆ ಸಿದ್ಧತೆ ನಡೆಸಿದರು. ಡೇ ಆ್ಯಂಡ್​ ನೈಟ್​ ಶಿಫ್ಟ್ ಕೆಲಸ ಇದ್ದಿದ್ದುರಿಂದ ಕೆಲಸ ಮಾಡುತ್ತಾ ಪರೀಕ್ಷೆ ತಯಾರಿ ಸುಲಭವಾಗಿರಲಿಲ್ಲ ಎಂದು ಕಷ್ಟದ ದಿನಗಳನ್ನು ಇದೇ ಸಂದರ್ಭದಲ್ಲಿ ಪೂವಿತಾ ನೆನೆದರು.

    ಪರೀಕ್ಷೆ ಪೂರ್ವ ಸಿದ್ಧತೆ ಹೇಗಿತ್ತು?
    2012ರಲ್ಲಿ ದೆಹಲಿಗೆ ತೆರಳಿದೆ. ಕೋಚಿಂಗ್​ ಸೆಂಟರ್​ನಲ್ಲಿ ನೀಡಿದ ಪುಸ್ತಕಗಳ ಜತೆಗೆ ಆನ್​ಲೈನ್​ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡುತ್ತಿದ್ದೆ. ಒಂದು ವಿಷಯಕ್ಕೆ 1 ರಿಂದ 2 ಪುಸ್ತಕ ಮಾತ್ರ ಓದುತ್ತಿದ್ದೆ. ಪ್ರಿಲಿಮ್ಸ್​ ನಂತರ ಮೆನ್ಸ್​ ಸಿದ್ಧತೆಗೆ ಕಡಿಮೆ ಕಾಲವಕಾಶ ಇರುವುದರಿಂದ ಪುನರ್ಮನನ ಮಾಡಲು ಸುಲಭವಾಗುತ್ತಿತ್ತು ಎಂದು ಉತ್ತರಿಸಿದ ಪೂವಿತಾ ಅವರು, ಒಂದೇ ವಿಷಯಕ್ಕೆ ಸಂಬಂಧಿಸಿದ ಹೆಚ್ಚಿನ ಪುಸ್ತಕಗಳ ಅಧ್ಯಯನದಿಂದ ಅಂತಿಮ ಹಂತದಲ್ಲಿ ಗೊಂದಲ ಸೃಷ್ಟಿಯಾಗುತ್ತದೆಂದು ಅಭಿಪ್ರಾಯಪಟ್ಟರು. 2013ರಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್​ ಹಂತದಲ್ಲಿಯೇ ಹಿನ್ನಡೆಯಾಯಿತು. ಇದರಿಂದ ನಿರುತ್ಸಾಹಿಯಾದಾಗ ಪೂವಿತಾ ಅವರಿಗೆ ತಂದೆ&ತಾಯಿ ಧೈರ್ಯ ತುಂಬಿದರು. 2014ರಲ್ಲಿ ಪರೀಕ್ಷೆ ತೆಗೆದುಕೊಳ್ಳದೆ ಒಂದು ವರ್ಷ ಓದಿದೆ. ಪ್ರತಿಲವಾಗಿ 2015ರಲ್ಲಿ IRPS ಪರೀಕ್ಷೆ ಪಾಸ್​ ಆಯ್ತು. 2016ರಲ್ಲಿ ಐಎಎಸ್​ ಕ್ಲಿಯರ್​ ಆಯ್ತು ಎಂದು ಪೂವಿತಾ ತಮ್ಮ ಯಶೋಗಾಥೆ ನೆನೆದರು.

    ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು
    ಯಾವುದೇ ಒಂದು ವಿಷಯದ ಕುರಿತು ನೇರ ಪ್ರಶ್ನೆಗಳಿರುವುದಿಲ್ಲ. ಟ್ವಿಸ್ಟ್​ ಮಾಡಿರುವ ಪ್ರಶ್ನೆಗಳಿಗೆ ಸ್ವಂತ ವಿಚಾರದ ಮೇಲೆ ಯೋಚಿಸಿ ಉತ್ತರಿಸಬೇಕಾಗುತ್ತದೆ. ನನ್ನ ಆಯ್ಕೆ ವಿಷಯವಾಗಿದ್ದ ಪಬ್ಲಿಕ್​ ಅಡ್ಮಿನಿಸ್ಟ್ರೆಷನ್​ನ ಪೇಪರ್​ 1ರಲ್ಲಿ ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದವು. 2ರಲ್ಲಿ ಪ್ರಸ್ತುತ ಸಮಸ್ಯೆಗಳ ಕುರಿತು ಕೆಳಿದ್ದರು. ಮೆನ್ಸ್​ನಲ್ಲಿ 20 ಪ್ರಶ್ನೆಗಳಿರುತ್ತವೆ ಕೆಲವು ಟಾಪಿಕ್​ ಅರ್ಥವಾಗುವುದಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರಿಸದೆ, ಸ್ಪಷ್ಟ ಮಾಹಿತಿ ಗೊತ್ತಿರುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರಿಸಬೇಕು. ನಾನು 15 ಪ್ರಶ್ನೆಗಳಿಗೆ ಸಮಯ ವಿಗಂಡಿಸಿಕೊಂಡು ಉತ್ತರಿಸಿದ್ದೆ ಎಂದು ಪೂವಿತಾ ಮೆಲಕು ಹಾಕಿದರು.

    ಕಟ್​ಆಫ್ ತಿಳಿದುಕೊಳ್ಳಿ
    ಕಳೆದ ಪರೀಕ್ಷೆಯಲ್ಲಿ ಯಾವ್ಯಾವ ವರ್ಗದವರಿಗೆ ಎಷ್ಟೇಷ್ಟು ಕಟ್​ಆಫ್​ ಎಂದು ತಿಳಿದು ನಿರ್ದಿಷ್ಟ ಅಂಕ ಗಳಿಸುವ ಗುರಿ ಇಟ್ಟುಕೊಳ್ಳಿ. ಉದಾಹರಣೆಗೆ ಹಿಂದಿನ ವರ್ಷ 110 ಕಟ್​ಆಫ್​ ಇದ್ದರೆ ಈ ವರ್ಷ 120 ಅಂಕ ಗಳಿಸಿಯೇ ತೀರುತ್ತೇನೆಂದು ತಯಾರಿ ನಡೆಸಿ ಎಂದು ಸಲಹೆ ನೀಡಿದ ಪೂವಿತಾ, ನಾನು ಸ್ಪಷ್ಟವಾಗಿ ಗೊತ್ತಿರುವ 50 ಪ್ರಶ್ನೆಗಳಿಗೆ ಮೊದಲು ಉತ್ತರ ಬರೆದು. ನಂತರ ಯೋಚನೆ ಮಾಡಿ ಬರೆಯಲು ಸಾಧ್ಯವಾಗುವ 25 ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ಉತ್ತರಿಸಿದೆ. ಸ್ವಲ್ಪ ಮಾಹಿತಿ ಗೊತ್ತಿರುವ 5 ರಿಂದ 6 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದೆ. ನೆಗೆಟಿವ್​ ಮಾರ್ಕ್ಸ್​ ಇರುವುದರಿಂದ ಮಾಹಿತಿ ಗೊತ್ತಿರದ ಪ್ರಶ್ನೆಗಳನ್ನು ಟಚ್​ ಸಹ ಮಾಡಲಿಲ್ಲ. ಇದು ಸತತ ಪ್ರಯತ್ನದಿಂದ ಮಾತ್ರ ಸಾಧ್ಯ ಎಂದರು.

    ಕೋಚಿಂಗ್​ಗಿಂತ ಸ್ಟಡಿ ಸರ್ಕಲ್​ ಮುಖ್ಯ
    10 ವರ್ಷಗಳ ಹಿಂದೆ ತರಬೇತಿ ಅವಶ್ಯಕತೆ ಇತ್ತು. ಪ್ರಸ್ತುತ ಆನ್​ಲೈನ್​ನಲ್ಲಿಯೇ ಕ್ಲಾಸ್​ಗಳು ಲಭ್ಯವಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ದೊರೆಯುತ್ತದೆ. ಸಾಧಿಸುವ ಬದ್ಧತೆ ಇದ್ದರೆ ಮನೆಯಲ್ಲಿದ್ದು ತಯಾರಿ ನಡೆಸಬಹುದು. ಆದರೆ ಇದಕ್ಕೆ ಪೂರಕವಾಗುವಂತೆ ಸಮಾನಮನಸ್ಕರು ಒಗ್ಗೂಡಿ ಸ್ಟಡಿ ಸರ್ಕಲ್​ ನಿರ್ಮಿಸಿಕೊಳ್ಳಬೇಕು. ಹೀಗಾದಲ್ಲಿ ತಾವು ತಿಳಿದ ವಿಷಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹದ ಜತೆಗೆ ಜ್ಞಾನವೃದ್ಧಿಯಾಗುತ್ತದೆ ಎಂದು ಪೂವಿತಾ ಸಲಹೆ ನೀಡಿದರು.

    ಸಂದರ್ಶನದಲ್ಲಿ ಉತ್ತರಿಸುವ ರೀತಿ…
    ಕೊಠಡಿಯಲ್ಲಿ ಒಬ್ಬ ಚೇರ್​ಮನ್​ ಹಾಗೂ ಸದಸ್ಯರು ಸೇರಿ ಒಟ್ಟು 5 ರಿಂದ 6 ಜನ ಸಂದರ್ಶಕರಿದ್ದು, ಒಬ್ಬರ ನಂತರ ಮತ್ತೊಬ್ಬರು ಪ್ರಶ್ನೆ ಕೇಳುತ್ತಿರುತ್ತಾರೆ. ಉತ್ತರದೊಂದಿಗೆ ಯಾವ ರೀತಿ ಉತ್ತರಿಸುತ್ತೇವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಭ್ಯರ್ಥಿಯ ಹಾವ&ಭಾವ, ನಡತೆಯನ್ನು ಪರೋಕ್ಷವಾಗಿ ಗಣನೆಗೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ ಪೂವಿತಾ, ಮೊದಲ ಪ್ರಯತ್ನದಲ್ಲಿ 140 ಹಾಗೂ 2ನೇ ಬಾರಿ 210 ಅಂಕ ಬಂದಿದ್ದವು ಎಂದು ನೆನೆದರು.

    ಸೇವಾ ಅನುಭವ
    ಉಡುಪಿ ಜಿಲ್ಲೆಯಲ್ಲಿ ಪ್ರೊಬೇಷನರಿ ಕೆಲಸ ಪ್ರಾರಂಭಿಸಿದ್ದು, ಕನ್ನಡ ಕಲಿಯಲು ಸಹಾಯವಾಯಿತು. ನಂತರ ತಿಪಟೂರಿಗೆ ಎಸಿ ಆಗಿ ನೇಮಕಗೊಂಡೆ. ಅಲ್ಲಿಂದ ಹುಣಸೂರು ಉಪಚುನಾವಣೆ ಒಂದೊಳ್ಳೆ ಅನುಭವ ಒದಗಿಸಿತು. ಆನಂತರ ಚಿಕ್ಕಮಗಳೂರು ಸಿಇಒ ಆಗಿ ಒಂದುವರೇ ವರ್ಷ ಸೇವೆ ಸಲ್ಲಿಸಿದ್ದು, ಇತ್ತೀಚೆಗೆ ಚಾಮರಾಜನಗರ ಸಿಇಒ ಆಗಿ ವರ್ಗಾವಣೆಯಾಗಿದೆ ಎಂದು ಪೂವಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts