ಭಯ ಮತ್ತು ಅಭಯದ ಅಧಿಪತಿ ಶನೈಶ್ಚರ

Shani Shinganapura 2
Published on

ದೇವರನ್ನು ಭಯ ಮತ್ತು ಭಕ್ತಿ ಎಂಬ ಎರಡು ಮಾರ್ಗದಲ್ಲಿ ಆರಾಧಿಸಲಾಗುತ್ತದೆ. ಕೆಲವು ದೇವತೆಗಳ ಅರ್ಚನೆಗಂತೂ ಭಯವೇ ಆಧಾರ. ಅದರಲ್ಲಿ ಪ್ರಮುಖವಾದ ದೈವವೆಂದರೆ ಶನೈಶ್ಚರಸ್ವಾಮಿ. ಇಂದು (ಮೇ 22) ಶನೈಶ್ಚರಸ್ವಾಮಿ ಜಯಂತಿ. ಆ ಹಿನ್ನೆಲೆಯಲ್ಲಿ ಶನೈಶ್ಚರಸ್ವಾಮಿ ನೆಲೆಸಿರುವ ಪ್ರಸಿದ್ಧ ಶನಿಶಿಂಗಣಾಪುರ ಕ್ಷೇತ್ರದ ಕುರಿತ ಲೇಖನ ಇಲ್ಲಿದೆ.

ಪ್ರಶಾಂತ ರಿಪ್ಪನ್​ಪೇಟೆ

ದೇವರು, ಧರ್ಮದ ವಿಷಯದಲ್ಲಿ ಹಲವರು ಹಲವು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಆತನ ಒಲುಮೆಗಾಗಿ ಭಕ್ತಿಗಿಂತಲೂ, ಭಯದಿಂದ ಅರ್ಚಿಸುವವರೇ ಹೆಚ್ಚು. ಅದರಲ್ಲೂ ನವಗ್ರಹಗಳಲ್ಲೇ ಅತ್ಯಂತ ಶಕ್ತಿಶಾಲಿ ಆಗಿರುವ ಸೂರ್ಯಪುತ್ರ ಶನೈಶ್ಚರನನ್ನು ಪೂಜಿಸುವವರಲ್ಲಿ ಭಕ್ತಿಗಿಂತ ಭಯವೇ ಹೆಚ್ಚಾಗಿರುತ್ತದೆ. ಆದರೆ ಮಹಾರಾಷ್ಟ್ರದ ಶನಿಶಿಂಗಣಾಪುರ ಕ್ಷೇತ್ರದೊಡೆಯ ಶ್ರೀಶನೈಶ್ಚರಸ್ವಾಮಿಯು ಭಯ ಮತ್ತು ಅಭಯದ ಅಧಿಪತಿ ಎಂಬುದು ಅಚ್ಚರಿಯಾದರೂ ಸತ್ಯ. ಈತನ ಅಭಯದ ಸಾಕ್ಷಾತ್ಕಾರವನ್ನು ಇಂದಿಗೂ ಇಲ್ಲಿ ಕಾಣಬಹುದು. ಶನೈಶ್ಚರ ಹೆಗಲೇರಿದರೆ ಕಷ್ಟಗಳ ಮೇಲೆ ಕಷ್ಟಗಳನ್ನು ನೀಡುತ್ತಾನೆ ಎಂಬ ಮಾತಿದೆ. ಆದರೆ ಶನೈಶ್ಚರಸ್ವಾಮಿ ಕೇವಲ ಕಷ್ಟ ಕೊಡುವವನಲ್ಲ, ಆತ ಕಷ್ಟ ಕಳೆಯುವವನೂ ಕೂಡ ಹೌದು. ಶನೈಶ್ಚರನು ಯಾರ ತಪ್ಪನ್ನೂ ಮನ್ನಿಸುವುದಿಲ್ಲ. ಹುಟ್ಟಿದ ಕೂಡಲೇ ತನ್ನ ತಂದೆಯ ತೇಜಸನ್ನೇ ನಿಸ್ತೇಜಗೊಳಿಸಿದವನು. ಜಗತ್ತನ್ನೇ ಪಾಲಿಸುವ ಪರಮೇಶ್ವರನನ್ನೇ ಬಿಡದ ಶನೈಶ್ಚರನಿಗೆ ಸಾಮಾನ್ಯ ಮಾನವರು ಯಾವ ಲೆಕ್ಕ? ಈ ಕಾರಣದಿಂದಲೇ ಬೇರೆಲ್ಲ ದೇವತೆಗಳಿಗಿಂತ ಶನೈಶ್ಚರನ ಬಗ್ಗೆ ಸಾಮಾನ್ಯರಲ್ಲಿ ಒಂದು ಭಯ ಇದ್ದೇ ಇದೆ. ಅಂತಹ ಶನೈಶ್ಚರ ಸ್ವಾಮಿ ನ್ಯಾಯ-ನೀತಿಯಿಂದ ನಡೆದುಕೊಳ್ಳುವವರ, ಪ್ರಾಮಾಣಿಕವಾಗಿ ವ್ಯವಹರಿಸುವವರ ಪಾಲಿಗೆ ಅಭಯದಾಯಕನೂ ಆಗಿದ್ದಾನೆ. ಇದಕ್ಕೊಂದು ಉತ್ತಮ ಉದಾಹರಣೆ ಶನಿಶಿಂಗಣಾಪುರ ಕ್ಷೇತ್ರ. ಇಲ್ಲಿ ಇಂದಿಗೂ ಶನೈಶ್ಚರ ಸ್ವಾಮಿಯ ಆ ದಿವ್ಯಶಕ್ತಿ ಜಾಗೃತವಾಗಿದೆ.

ಕ್ಷೇತ್ರದ ಇತಿಹಾಸ: ಶನೈಶ್ಚರನ ಕ್ಷೇತ್ರಗಳು ದೇಶದಾದ್ಯಂತ ಇವೆ. ಆದರೆ ಶನಿಶಿಂಗಣಾಪುರ ಕ್ಷೇತ್ರ ಎಲ್ಲಕ್ಕಿಂತ ಭಿನ್ನ; 450 ವರ್ಷಗಳ ಹಿಂದೆ ಸಾಮಾನ್ಯ ಕುಗ್ರಾಮವಾಗಿದ್ದ ಶಿಂಗಣಾಪುರದಲ್ಲಿ ಶನೈಶ್ಚರಸ್ವಾಮಿ ಸ್ವತಃ ಇಚ್ಛೆಪಟ್ಟು ನೆಲೆನಿಂತಿರುವುದರ ಹಿಂದೆ ಕುತೂಹಲಕಾರಿ ಕತೆಯಿದೆ. ಒಮ್ಮೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಯಲ್ಲಿ ದೊಡ್ಡದೊಂದು ಕಲ್ಲು ತೇಲಿ ಬಂತು. ಅಲ್ಲೇ ಆಟವಾಡುತ್ತಿದ್ದ ಮಕ್ಕಳು ಆಶ್ಚರ್ಯದಿಂದ ಆ ಕಲ್ಲನ್ನು ಎತ್ತುವುದಕ್ಕಾಗಿ ಕಬ್ಬಿಣದ ಸಲಾಕೆಯಿಂದ ಒತ್ತಿದರು. ಆಗ ಆ ಕಲ್ಲಿನಿಂದ ರಕ್ತ ಸುರಿಯಲು ಆರಂಭವಾಯಿತು. ಗಾಬರಿಯಿಂದ ಗ್ರಾಮದ ಹಿರಿಯರಿಗೆ ವಿಷಯ ತಿಳಿಸಿದರು. ಗ್ರಾಮಸ್ಥರು ಆ

ಕಲ್ಲನ್ನು ಅಲ್ಲಿಂದ ಸಾಗಿಸಲು ಬಹಳ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಕತ್ತಲಾಗಿದ್ದರಿಂದ ಅಲ್ಲಿಗೇ ಬಿಟ್ಟು ಹೋದರು. ಅಂದು ರಾತ್ರಿ ಹಿರಿಯರ ಕನಸಿನಲ್ಲಿ ಬಂದು; ‘ನಾನು ಶನೈಶ್ಚರ ಸ್ವಾಮಿ, ಈ ಗ್ರಾಮದಲ್ಲಿ ನೆಲೆನಿಂತು ಭಕ್ತರ ಸಂಕಷ್ಟಗಳನ್ನು ನಿವಾರಿಸುವುದಕ್ಕಾಗಿ ಬಂದಿದ್ದೇನೆ, ನನ್ನ ಮೂರ್ತಿಯನ್ನು ಮಾವ-ಅಳಿಯ ಜೋಡಿಯಾಗಿ ಎತ್ತಬೇಕು’ ಎಂದು ಸ್ವಾಮಿ ವಿವರಿಸಿದ. ಅದರಂತೆ ಮರುದಿನ ಬೆಳಗ್ಗೆ ಮಾವ-ಅಳಿಯರ ಜೋಡಿ ಆ ಶಿಲೆಯನ್ನು ಎತ್ತಿ ತಂದರು. ಹಾಗೆ ತಂದ ಸ್ವಯಂಭೂ ಶನೈಶ್ಚರ ಮೂರ್ತಿಯು ಈಗಿರುವ ಸ್ಥಳಕ್ಕೆ ಬಂದು ನಿಂತಿತು. ಅಲ್ಲಿಂದ ಎಷ್ಟೇ ಮಾಡಿದರೂ ಮುಂದೆ ಸರಿಯುವುದಿಲ್ಲ. ಅಂದು ರಾತ್ರಿ ಮತ್ತೆ ಗ್ರಾಮದ ಹಿರಿಯರ ಕನಸಿನಲ್ಲಿ ಬಂದ ಸ್ವಾಮಿ; ‘ನಾನು ಈಗಿರುವ ಜಾಗದಲ್ಲಿಯೇ ನೆಲೆ ನಿಲ್ಲುವುದಾಗಿಯೂ, ನನಗೆ ಯಾವುದೇ ಗುಡಿ, ಹೊದಿಕೆ, ಕಟ್ಟಡಗಳನ್ನು ಕಟ್ಟಿಸಬಾರದು’ ಎಂದು ಸೂಚಿಸುತ್ತಾನೆ. ಹೀಗೆ ಸ್ಥಾಪನೆಗೊಂಡ ಸ್ವಾಮಿಯ ಪವಾಡ-ಲೀಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತ ಹೋದವು. 1963ರಲ್ಲಿ ಗ್ರಾಮದ ಹಿರಿಯರಾದ ಬಾಬುರಾವ್ ಬಾನ್ಕರ್ ಎಂಬುವವರು ಟ್ರಸ್ಟ್ ಸ್ಥಾಪನೆ ಮಾಡಿದ್ದು, ಸದ್ಯ ಆ ಟ್ರಸ್ಟ್ ಮೂಲಕ ದೇವಾಲಯದ ಆಡಳಿತ ವ್ಯವಸ್ಥೆ ನಡೆಯುತ್ತಿದೆ.

ಉತ್ತಮ ವ್ಯವಸ್ಥೆ: ಶನಿವಾರ-ಭಾನುವಾರದಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗೆ ಬರುವ ಭಕ್ತರಿಗೆ ಉಚಿತ ವಸತಿ, ಪ್ರಸಾದದ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಿದೆ. ಮಹಾರಾಷ್ಟ್ರದ ಅಹ್ಮದ್​ನಗರ ಜಿಲ್ಲಾಕೇಂದ್ರದಿಂದ 35 ಕಿ.ಮೀ. ದೂರವಿರುವ ಶನಿಶಿಂಗಣಾಪುರವು ಔರಂಗಾಬಾದ್ ವಿಮಾನ ನಿಲ್ದಾಣದಿಂದ 80 ಕಿ.ಮೀ. ದೂರದಲ್ಲಿದೆ. ಪ್ರತಿವರ್ಷ ಶನಿ ಅಮಾವಾಸ್ಯೆಯಂದು ಶನಿಶಿಂಗಣಾಪುರದಲ್ಲಿ ಬೃಹತ್ ವಾರ್ಷಿಕ ಉತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ.

ಬಾಗಿಲು, ಬೀಗವಿಲ್ಲದ ಗ್ರಾಮ: ಹಿಂದೂ ದೇವತೆಗಳ ಕೋಟ್ಯಂತರ ಕ್ಷೇತ್ರಗಳು ಜಗತ್ತಿನಾದ್ಯಂತ ಇವೆ. ಅಂಥ ಎಲ್ಲ ಕ್ಷೇತ್ರಗಳೂ ತನ್ನದೇ ಆದ ವಿಶಿಷ್ಟ ಹಿನ್ನೆಲೆಯನ್ನು ಹೊಂದಿದ್ದು, ಇಂದಿಗೆ ಕೇವಲ ದಂತಕತೆ ಆಗಿರುತ್ತವೆ. ಆದರೆ ಶನಿಶಿಂಗಣಾಪುರ ಕ್ಷೇತ್ರದ ಹಿನ್ನೆಲೆಗೆ ಇಂದಿಗೂ ಸಾಕ್ಷಿ ಇದೆ. ಅಂದು ಗ್ರಾಮದ ಹಿರಿಯರ ಕನಸಿನಲ್ಲಿ ಬಂದ ಸ್ವಾಮಿ ತಾನು ಈ ಗ್ರಾಮದಲ್ಲಿ ನೆಲೆ ನಿಂತಿರುವುದಕ್ಕೆ ಸಾಕ್ಷಿಯಾಗಿ-‘ಇಲ್ಲಿರುವ ಪ್ರತಿಯೊಂದು ಮನೆಯ ರಕ್ಷಣೆ ನನ್ನ ಹೊಣೆ. ಇಂದಿನಿಂದ ಈ ಗ್ರಾಮದಲ್ಲಿ ಯಾವುದೇ ಮನೆಗಳಿಗೆ ಬಾಗಿಲುಗಳನ್ನಾಗಲಿ, ಬೀಗಗಳನ್ನಾಗಲಿ ಹಾಕುವ ಅಗತ್ಯವಿಲ್ಲ’ ಎಂದು ಅಭಯ ನೀಡಿದ. ಸ್ವಾಮಿ ನೀಡಿದ ಅಭಯದಂತೆ ಶತಮಾನಗಳಿಂದಲೂ ಯಾವುದೇ ಮನೆಗಳಿಗೂ ಇಲ್ಲಿ ಬಾಗಿಲು-ಬೀಗವಿಲ್ಲ. ಮಾತ್ರವಲ್ಲ ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಪೊಲೀಸ್ ಠಾಣೆಗೂ ಇಲ್ಲಿ ಬೀಗ ಹಾಕುವುದಿಲ್ಲ. ಸಾಮಾನ್ಯವಾಗಿ ಬಂಗಾರ, ಆಭರಣಗಳನ್ನು ಭದ್ರತೆಗಾಗಿ ಬ್ಯಾಂಕಿನಲ್ಲಿ ಇಡುವುದು ವಾಡಿಕೆ. ಆದರೆ ಜಗತ್ತಿನಲ್ಲೇ ಬೀಗವಿಲ್ಲದ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಶನಿಶಿಂಗಣಾಪುರದಲ್ಲಿದೆ. ಹಿಂದೂ ಪರಂಪರೆಯಲ್ಲಿ ಪವಾಡ, ಲೀಲೆ, ಅವತಾರ ಇತ್ಯಾದಿ ಪಾರಿಭಾಷಿಕ ಶಬ್ದಗಳಿವೆ. ಅದನ್ನು ಒಂದು ವರ್ಗ ದವರು ಟೀಕಿಸುತ್ತಾರೆ. ಆದರೆ ಶನಿಶಿಂಗಣಾಪುರದಲ್ಲಿ ನಡೆಯುವ ಈ ಪವಾಡವನ್ನು ಪರೀಕ್ಷೆ ಮಾಡಲು ಹೋದವರು ಅಲ್ಲಿಂದ ಒಂದು ಹುಲ್ಲುಕಡ್ಡಿಯನ್ನು ತೆಗೆದುಕೊಂಡು ಹೋಗಲೂ ಸಾಧ್ಯವಾಗದೆ ಸ್ವಾಮಿಗೆ ಶರಣಾದ ಅದೆಷ್ಟೋ ಉದಾಹರಣೆಗಳಿವೆ. ಒಟ್ಟಿನಲ್ಲಿ ಯಾವುದೇ ವ್ಯಕ್ತಿ, ಎಲ್ಲಿ ಬೇಕಾದರೂ ಏನೇ ಬೆಲೆಬಾಳುವ ವಸ್ತುವನ್ನಿಟ್ಟರೂ ಇಲ್ಲಿ ಕಳ್ಳತನ ಆಗುವುದಿಲ್ಲ. ನಿತ್ಯ ಸಾವಿರಾರು ಭಕ್ತರು ಸ್ವಾಮಿಗೆ ತೈಲಾಭಿಷೇಕ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net