ಸನಾತನಧರ್ಮದಲ್ಲಿ ಸಮಾಜವಾದದ ಸ್ಥಾನ

vivekadhare feb 29 2020
Published on

ವಿಶ್ವವಿಖ್ಯಾತ ಇತಿಹಾಸಜ್ಞ ವಿಲ್​ಡ್ಯೂರೆಂಟ್ ಹೇಳುತ್ತಾನೆ: ‘ನಾಗರಿಕತೆಯು ಕ್ರಮಬದ್ಧವಾಗಿ ಪ್ರಾರಂಭವಾಗುತ್ತದೆ, ನಿರಂಕುಶವಾಗಿ ಇಷ್ಟಬಂದಂತೆ ಬೆಳೆಯುತ್ತದೆ; ಅವ್ಯವಸ್ಥೆಯಲ್ಲಿ ಪರ್ಯವಸಾನವಾಗುತ್ತದೆ’. ಇಂತಹ ಚಿತ್ರಣ ಮೂಡಲು ಕಾರಣಗಳನ್ನು ಪರಾಂಬರಿಸಿದಾಗ ನಮಗೆ ಅರಿವಾಗುವ ಸತ್ಯವೆಂದರೆ, ನಾಗರಿಕತೆಗಳು ಅಥವಾ ಸಾಮಾಜಿಕ ವ್ಯವಸ್ಥೆಗಳು ರಕ್ಷಿಸಲ್ಪಡುವುದು ಸಾರ್ವಕಾಲಿಕ ಜಾಗತಿಕ ಸತ್ಯದ ಆಧಾರದ ಮೇಲೆಯೇ ಹೊರತು ಇಡೀ ಜಗತ್ತಿಗೇ ಅನ್ವಯವಾಗಲು ಸಾಧ್ಯವಿಲ್ಲದ ಪ್ರಾದೇಶಿಕ ಬಣಗಳ ಶಾಸನಗಳಿಂದಲ್ಲ ಎಂಬುದು.

ಸನಾತನಧರ್ಮದ ಆಶಯವಾದ ‘ಸರ್ವಜನರ, ಸರ್ವಜೀವಿಗಳ, ಸರ್ವವಿಧದ ಹಿತವನ್ನು ಹಾರೈಸುವುದು’ ಎಂಬುದೊಂದು ಅಪೂರ್ವ ಆದರ್ಶವಲ್ಲವೆ? ರಾಮಾಯಣ-ಮಹಾಭಾರತಗಳು ಈ ಮಹಾನ್ ಆದರ್ಶಗಳನ್ನು ಸಾಕ್ಷಾತ್ತಾಗಿ ನಮ್ಮ ಮುಂದೆ ಪ್ರಚುರಪಡಿಸುತ್ತವೆ.

ಭಗವದ್ಗೀತೆ ಹೀಗೆ ಪ್ರಸ್ತಾಪಿಸುತ್ತದೆ:

ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ|

ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ||

ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಯ ಮಾಂಸವನ್ನು ತಿನ್ನುವವನು-ಇವರೆಲ್ಲರಲ್ಲಿ ಜ್ಞಾನಿಗಳು ಸಮದರ್ಶಿಗಳಾಗಿರುತ್ತಾರೆ.

ಭಾಗವತವು ಉದ್ಘೋಷಿಸುತ್ತದೆ:

ಅಥ ಮಾಂ ಸರ್ವಭೂತೇಷು ಭೂತಾತ್ಮಾನಂ ಕೃತಾಲಯಂ|

ಅರ್ಹಯೇತ್ ದಾನಮಾನಾಭ್ಯಾಂ ಮೈತ್ರಿ ಅಭಿನ್ನೇನ ಚಕ್ಷುಷ||

ಭಗವಂತನೇ ಸರ್ವಜೀವಿಗಳ ಆಂತರ್ಯವನ್ನು ತನ್ನ ಆವಾಸಸ್ಥಾನ ಆಗಿಸಿಕೊಂಡಿರುವುದರಿಂದ ಪ್ರತಿಯೊಂದು ಜೀವಿಯನ್ನು ಅದರ ಅರ್ಹತೆಗೆ ತಕ್ಕಂತೆ, ಅದರ ಗೌರವಕ್ಕೆ ಚ್ಯುತಿಬಾರದಂತೆ, ಸ್ನೇಹಭಾವದಿಂದ, ತರತಮ ಭಾವನೆಗೆ ಆಸ್ಪದವೀಯದೆ ಸೇವೆಗೈಯಬೇಕು-ಇದು ಸಾರಾಂಶ.

‘ಗೀತೆ ಮತ್ತು ಸಹಸ್ರನಾಮಗಳನ್ನು ಹಾಡಬೇಕು, ಶ್ರೀಪತಿಯ ರೂಪವನ್ನು ನಿರಂತರವೂ ಧ್ಯಾನಿಸಬೇಕು, ಸಜ್ಜನರ ಸಂಗದಲ್ಲಿ ಸರ್ವದಾ ಮನಸ್ಸನ್ನಿಡಬೇಕು, ದೀನದುರ್ಬಲರಿಗೆ ಹಣ ಮೊದಲಾದವುಗಳನ್ನಿತ್ತು ಸೇವೆ ಮಾಡಬೇಕು’ ಎಂದಿದ್ದಾರೆ ಶ್ರೀ ಶಂಕರ ಭಗವತ್ಪಾದರು. ಇತರರ ಪತ್ನಿಯರಲ್ಲಿ ಮಾತೃವನ್ನು, ಇತರರ ಸಂಪತ್ತಿನಲ್ಲಿ ಅಸಡ್ಡೆಯನ್ನು, ಸಕಲರಲ್ಲಿ ತನ್ನನ್ನು ನೋಡುವವನನ್ನು ‘ವಿದ್ಯಾವಂತ’ ಎಂದು ಘೊಷಿಸುತ್ತಿದೆ ಸುಭಾಷಿತ.

ಪ್ರಸ್ತಾಪಿತವಾದ ಮೇಲಿನ ಎಲ್ಲ ವಿಚಾರಗಳೂ ಭಾರತೀಯ ಸನಾತನ ಪರಂಪರೆಯು ವ್ಯಕ್ತಿಯನ್ನು ಕೇಂದ್ರವಾಗಿ ಇರಿಸಿಕೊಂಡು ಸಮಸ್ತ ವಿಶ್ವವನ್ನೇ ಹೇಗೆ ಪೂಜ್ಯಭಾವದಿಂದ ಕಂಡು ವ್ಯವಹರಿಸಬೇಕೆಂಬ ಜೀವನ ದೃಷ್ಟಿಕೋನವನ್ನಿತ್ತು ನಮ್ಮನ್ನು ಮುನ್ನಡೆಸಿದೆ ಹಿಂದೂಧರ್ಮ. ಅದರ ಬಂಡಾಯ ಶಿಶುಗಳೆನಿಸಿದ ಬೌದ್ಧಧರ್ಮ ಹಾಗೂ ಜೈನಧರ್ಮಗಳು ಮೊದಲ್ಗೊಂಡು ಸೆಮಿಟಿಕ್ ಧರ್ಮಗಳೆನಿಸಿದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳೂ ಮಾನವರ ನಡುವೆ ಮೂಡುವ ಮೇಲು-ಕೀಳುಗಳನ್ನು ನಿವಾರಿಸಲು ಶ್ರಮಿಸುತ್ತ ಬಂದಿವೆ.

ಶೋಷಿತರನ್ನು ಮೊದಲ್ಗೊಂಡು ಸರ್ವರ ಅಭ್ಯುದಯಕ್ಕೆ ಪರಿಣಾಮಕಾರಿ ಕಾರ್ಯವೈಖರಿ ಸೂತ್ರವನ್ನು ಅನುಗ್ರಹಿಸಿದ ಕೀರ್ತಿ ಸನಾತನ ಹಿಂದೂ ಪರಂಪರೆಗೆ ಸಲ್ಲುತ್ತದೆ. ಅದು, ‘ಹೊಟ್ಟೆ ತುಂಬಿಸಿಕೊಳ್ಳಲು ಅಕ್ಷರ ಶಿಕ್ಷಣ ಸಾಕು, ಆದರೆ ಎದುರಾದ ಕಷ್ಟಗಳ ಕಂಡು ಎದೆ ಬಡಿದುಕೊಂಡು ಶೋಕಿಸುವುದಕ್ಕಿಂತ ಎದೆಗಾರಿಕೆಯಿಂದ ಎದುರಿಸಬೇಕೆಂದು, ಸುಖವನ್ನು ಯೋಗ್ಯ ಹಾಗೂ ಅರ್ಥಪೂರ್ಣ ರೀತಿಯಲ್ಲಿ ನಿರ್ವಹಿಸಲು ಜೀವನ ಶಿಕ್ಷಣ ಬೇಕು, ದಾರಿದ್ರ್ಯಗಳಲ್ಲಿ ‘ಬುದ್ಧಿದಾರಿದ್ರ್ಯ’ ಅತಿ ಭಯಂಕರ! ಕಷ್ಟಗಳನ್ನು ಕಂಡು ಗೊಣಗುಟ್ಟದೆ, ದೇವರು ನಿರ್ದಯಿಯೆಂದು ಅವನನ್ನು ಬಿರುದಾಂಕಿತನಾಗಿಸದೆ, ಕೊರಗದೆ ಸಂಯಮಪೂರ್ವಕರಾಗಿ, ದೈವವನ್ನು ಪ್ರಾರ್ಥಿಸುತ್ತ ಸಾಗಿದಂತೆ ಆತ್ಮಶಕ್ತಿಯೂ ಊರ್ಜಿತಗೊಳ್ಳುತ್ತದೆ’ ಎಂಬ ನಿಖರ ಸತ್ಯವನ್ನು ಸಾರಿ ಉತ್ಸಾಹ-ಭರವಸೆಗಳನ್ನು ಮೂಡಿಸುತ್ತದೆ. ಇತಿಹಾಸ ಅವಲೋಕಿಸಿದಾಗ ಚೀನಾದೇಶದ ಆಡಳಿತದಲ್ಲಿ ಬುದ್ಧನ ಸಮಾನತೆಯ ತತ್ತ್ವವು

ಹಾಗೂ ಕನ್​ಫ್ಯೂಷಿಯಸ್​ನ ಸಮಾಜ ಪರಿಕಲ್ಪನೆಯ ವಿಚಾರಗಳು ಕಣ್ಮರೆಯಾದವು. ಇಸ್ಲಾಂಧರ್ಮವು ಸಾಮಾಜಿಕ ಸಮಾನತೆಯನ್ನು ಆಧರಿಸಿದ ಅದ್ಭುತ ಸಮಾಜವಾದವನ್ನು ಬೋಧಿಸಿ ತ್ತಾದರೂ ಈ ಧರ್ಮದ ಆಧಾರಿತ ರಾಷ್ಟ್ರಗಳ ಜನಜೀವನದಲ್ಲಿ ಈ ಆದರ್ಶವು ನಿರೀಕ್ಷಿತ ಮಟ್ಟದಲ್ಲಿ ಕಾಣದಾಯಿತು. ಆದರೆ ವೇದಾಂತ ಸನಾತನಧರ್ಮದ ಪರಿಣಾಮಕಾರಿ ಅನುಷ್ಠಾನವು ಹಿಂದೂಗಳಿಗೆ ಜಗತ್ತಿನಾದ್ಯಂತ ಸ್ನೇಹ ಬಾಂಧವ್ಯದ ಜೀವನ ಯಜಮಾನಿಕೆಯನ್ನು ದೊರಕಿಸಿಕೊಟ್ಟಿತು.

ಇತಿಹಾಸಚಕ್ರ ಉರುಳಿದಂತೆ, ಆಸ್ತಿಕ್ಯಭಾವ ಕ್ಷೀಣಿಸುತ್ತ ಸಾಗಿ, ನಾಸ್ತಿಕ್ಯದ ವೃದ್ಧಿಗೆ ದಾರಿಯಾಯಿತು. ಸಮಾಜವಾದದ ಚಿಂತನೆಗಳು ಕೈಗಾರಿಕಾಕ್ರಾಂತಿಯ ನಂತರ ಚಿಗುರೊಡೆದು ವೃದ್ಧಿಸುತ್ತ ಸಾಗಿತು. ಇದು ಯಾವ ಮಟ್ಟಕ್ಕೆ ಬೆಳೆಯುತ್ತ ಹೋಯಿತೆಂದರೆ ಅಮೆರಿಕದ ನಾಟಕಕಾರ ಜಾನ್ ವ್ಯಾನ್​ಡ್ರೂಟೆನ್ ಹೇಳುತ್ತಾರೆ: ‘ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪ್ರಾರಂಭಕಾಲದ ಜಗತ್ತಿನ ಮಾನಸಿಕ ಸ್ಥಿತಿಯನ್ನು ವಿಶ್ಲೇಷಿಸಿದಾಗ ನನಗನ್ನಿಸುತ್ತದೆ, ಗುರುತ್ವಾಕರ್ಷಣ ನಿಯಮದ ಆವಿಷ್ಕಾರದೊಡನೆ ಐಸಾಕ್ ನ್ಯೂಟನ್ ಭೌತಜಗತ್ತಿನಿಂದ ದೇವರನ್ನು ಉಚ್ಛಾಟಿಸಿ ಆ ಸ್ಥಾನವನ್ನು ಭೌತನಿಯಮಗಳಿಂದ ತುಂಬಿದ. ಚಾರ್ಲ್ಸ್ ಡಾರ್ವಿನ್ನನು ಜೈವಿಕ ಜಗತ್ತಿನಿಂದ ದೇವರನ್ನು ಹೊಡೆದೋಡಿಸಿ ಆ ಸ್ಥಾನವನ್ನು ಪ್ರಾಕೃತಿಕ ವರಣ (ನ್ಯಾಚುರಲ್ ಸೆಲೆಕ್ಷನ್) ಸಾಮರ್ಥ್ಯಾನುಗುಣ ಊರ್ಜಿತತೆ (ಸರ್ವೆವಲ್ ಆಫ್ ದಿ ಫಿಟ್ಟೆಸ್ಟ್) ಮುಂತಾದ ನಿಯಮಗಳಿಂದ ತುಂಬಿದ. ಆನಂತರ ಬಂದ ಸಿಗ್ಮಂಡ್ ಫ್ರಾಯ್ಡ್ ತನ್ನ ಮನೋವೈಜ್ಞಾನಿಕ ಸಿದ್ಧಾಂತಗಳ ಮೂಲಕ ಮನುಷ್ಯನ ಮಿದುಳು-ಅಂತರಂಗಗಳಿಂದ ಭಗವಂತನನ್ನು ಉಚ್ಛಾಟಿಸಿದ’. ಅಲ್ಲದೆ ಚೀನಾ ರಾಷ್ಟ್ರನಾಯಕರೊಬ್ಬರು ಘೊಷಿಸಿದ್ದುಂಟು-‘ಚೀನಾದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಹಸಿವೆಯಿಂದ ಸತ್ತರೂ ಪರವಾಗಿಲ್ಲ, ನಮ್ಮ ಮಹಾನಾಯಕನ ಸಮಾಜವಾದಿ ಕ್ರಾಂತಿಯನ್ನು ಉಳಿದ ಅರ್ಧದಷ್ಟು ಜನರು ಕಾರ್ಯಗತಗೊಳಿಸುತ್ತಾರೆ...’ ಸಮಾಜವಾದದ ಶೀರ್ಷಿಕೆಯಲ್ಲಿ ಮೂಡಿ ಬಂದ ಬಾಲಿಶ ಹಾಗೂ ಸತ್ತ್ವಹೀನವಾದ ಇಂಥ ಕಲ್ಪನೆಗಳು ಜಗತ್ತಿನ ಇತಿಹಾಸದಲ್ಲಿ ದಾಖಲಾದವು.

ಭಗವಾನ್ ಶ್ರೀರಾಮಕೃಷ್ಣರ ಹಾಗೂ ಸ್ವಾಮಿ ವಿವೇಕಾನಂದರ ಆಗಮನವು ಜಗತ್ತಿನಲ್ಲಿ ಉತ್ಕ್ರಾಂತಿಯನ್ನೇ ಮೂಡಿಸಿತು. ‘ಎಷ್ಟು ಮತಗಳೋ ಅಷ್ಟು ಪಥಗಳು... ಕಣ್ಣುಮುಚ್ಚಿ ದೇವರನ್ನು ನೋಡುವುದಕ್ಕಿಂತ ಕಣ್ಣು ತೆರೆದು ಆತನ ವಿರಾಟ್ ಸ್ವರೂಪವನ್ನು ನೋಡುವುದು ಮತ್ತು ಅವಶ್ಯಕತೆಗೆ ತಕ್ಕಂತೆ ಸಹಮಾನವರ ಅಭ್ಯುದಯಕ್ಕೆ ಮಾನವೀಯ ದೃಷ್ಟಿಕೋನದಿಂದ ಸ್ಪಂದಿಸುವುದು’ ಎಂದು ಯುವಕ ನರೇಂದ್ರನಾಥನನ್ನು ಮುಂದಿರಿಸಿಕೊಂಡು ಶ್ರೀರಾಮಕೃಷ್ಣರು ಇತ್ತ ಶ್ರೇಷ್ಠ ಸಂದೇಶವು ಜಗತ್ತಿನ ಸರ್ವಜನರಲ್ಲಿ ಧರ್ಮನಿಷ್ಠೆಯನ್ನು ಪುನಃಪ್ರತಿಷ್ಠಾಪಿಸಿತು.

ಸ್ವಾಮಿ ವಿವೇಕಾನಂದರು ಹೇಳಿದ್ದು-‘ವ್ಯಕ್ತಿಯ ಹಾಗೂ ಸಮಾಜದ ದೀನಸ್ಥಿತಿಗೆ ಅಜ್ಞಾನವೇ ಮೂಲ ಕಾರಣ. ಈ ಜಗತ್ತಿಗೆ ಬೆಳಕು ನೀಡುವವರ್ಯಾರು? ಹಿಂದೆ ತ್ಯಾಗವೇ ಜೀವನಧರ್ಮವಾಗಿತ್ತು. ಆದರದು ಈಗ ಅದೃಶ್ಯವಾದಂತಿದ್ದು ಮತ್ತೆ ಯಾವಾಗ ಜೀವಂತಗೊಳ್ಳುವುದೆಂಬುದು ತಿಳಿಯದಾಗಿದೆ. ಜಗತ್ತಿನ ಹಿತ ಹಾಗೂ ಕಲ್ಯಾಣಕ್ಕೆ ತ್ಯಾಗಿಗಳ ಅವಶ್ಯಕತೆ ಇದೆ’.

ಸ್ವಾಮೀಜಿಯವರಿಗೆ ಹಿಂದೂಧರ್ಮದ ಬಗ್ಗೆ ಇದ್ದ ಶ್ರದ್ಧೆ, ವಿಶ್ವಾಸ ನಿಜಕ್ಕೂ ಪ್ರಶ್ನಾತೀತ. ಕಾಲಚಕ್ರ ಉರುಳಿದಂತೆ, ಗಂಗೋತ್ರಿಯಿಂದ ಪ್ರಾರಂಭವಾದ ತಮ್ಮ ಧರ್ಮ ಮಹಾಗಂಗೆಯಂತೆ ವಿಸõತವಾಗಿ ಹರಿಯಹೊರಟಾಗ ಅದರೊಳಕ್ಕೆ ಹೊಕ್ಕಿದ ಲೋಪದೋಷಗಳನ್ನು ನಿಷ್ಠುರವಾಗಿ ಪತ್ತೆ ಹಚ್ಚಿದರು. ನಿರ್ಭಿಡೆಯ ಸತ್ಯಶೋಧಕರೂ ಆಗಿದ್ದ ಅವರು ಮಾಡುತ್ತಿದ್ದ ಟೀಕೆಗಳು ನಾಸ್ತಿಕರ ಟೀಕೆಗಳನ್ನು ಮೀರಿಸುವಂತಿದ್ದವು. ‘ಮನುಷ್ಯನ ಘನತೆಯನ್ನು ಹಿಂದೂಧರ್ಮದಷ್ಟು ಉತ್ತಮವಾಗಿ ಪ್ರತಿಪಾದಿಸಿದ ಧರ್ಮ ಮತ್ತೊಂದಿಲ್ಲ, ಆದರೆ ದೀನದುರ್ಬಲರ ಬಗ್ಗೆ ಇಷ್ಟು ಅನುದಾರವಾಗಿ ನಡೆದುಕೊಂಡ ಧರ್ಮವೂ ಮತ್ತೊಂದಿಲ್ಲ! ಆದರೆ ನನಗೆ ಸತ್ಯದರ್ಶನವಾಗಿದೆ, ಇದು ಜನರ ದೋಷವೇ ಹೊರತು ಧರ್ಮದ್ದಲ್ಲ’. ಜನರನ್ನು ಅಂಧಶ್ರದ್ಧೆಯಿಂದ ಮುಕ್ತಗೊಳಿಸಲು ಅಹರ್ನಿಶಿ ಶ್ರಮಿಸಿ, ‘ಮೊದಲು ಅನ್ನ, ಆಮೇಲೆ ಧರ್ಮ’ ಎಂಬ ಅದ್ಭುತ ಆದರ್ಶವನ್ನು ಮುಂಚೂಣಿಯಲ್ಲಿ ಇರಿಸಿದರು.

‘ರಾಜಕೀಯಕ್ಕಿಂತ ಧರ್ಮವು ಹೆಚ್ಚಿನ ಪ್ರಾಮುಖ್ಯ ಉಳ್ಳದ್ದಾಗಿದೆ, ಏಕೆಂದರೆ ನಮ್ಮ ನಡತೆಯ ಮೂಲಕ್ಕೆ ಹೋಗಿ ತಿದ್ದಲು ಧರ್ಮವು ಶಕ್ತವೇ ಹೊರತು ರಾಜಕೀಯವಲ್ಲ’ ಎಂದ ಸ್ವಾಮೀಜಿ, ‘ಮಾನವಸಮಾಜವನ್ನು ಬ್ರಾಹ್ಮಣ, ಕ್ಷತ್ರಿಯ, ವರ್ತಕರು ಅದಾಗಲೇ ಆಳಿದ್ದಾರೆ. ಪ್ರತಿಯೊಂದು ಆಳ್ವಿಕೆಯೂ ವೈಭವ ಹಾಗೂ ನ್ಯೂನತೆಗಳ ಮಿಶ್ರಣವೇ ಆಗಿದೆ. ಈಗ ಕಾರ್ವಿುಕರ ಆಡಳಿತ ಪ್ರಾರಂಭವಾಗಲಿದೆ. ಕಾರ್ವಿುಕ ಪ್ರಭುತ್ವವು ಭೌತಭೋಗಭಾಗ್ಯಗಳ ಸಮಾನ ವಿತರಣೆಯನ್ನು ಬೆಂಬಲಿಸುವುದು ಅನುಕೂಲಕರ ಅಂಶವೆನಿಸಿದರೂ ಇದು ಅತಿ ಸಾಮಾನ್ಯ ಮಟ್ಟದ ಕಲಿಕೆಯು ವ್ಯಾಪಿಸುವಂತೆ ಮಾಡಿ ಅಸಾಧಾರಣ ಮೇಧಾವಿಗಳ ಸಂಖ್ಯೆಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಇದು ಸಂಸ್ಕೃತಿಯ ಅಧಃಪತನಕ್ಕೆ ಎಡೆಮಾಡಿಕೊಡುತ್ತದೆ’ ಎಂದಿದ್ದಾರೆ.

ಚಿಂತಕ ಕೋನ್​ರಾಡ್ ಲಾರೆನ್ಸ್ ಹೇಳಿದ್ದು- ‘ಸಮಾಜವಾದ ಜೀವನಶೈಲಿಯ ಬೆಳಕಿನಲ್ಲಿ ಸಾಗಲು ಬಯಸಿರುವ ನಮಗೆ ನಮ್ಮ ಶ್ರೇಷ್ಠ ಆಧ್ಯಾತ್ಮಿಕ ಪ್ರೇರಣಾ ಅಂಶಗಳು ಹಾಗೂ ಶ್ರೇಷ್ಠವೂ ಉನ್ನತವೂ ಆದ ನಮ್ಮ ಹತ್ತಾರು ಗುಣವಿಶೇಷಗಳು ಬಲಿಕೊಡಲೇಬೇಕಾದ ಅನಿವಾರ್ಯತೆ ಮೂಡುತ್ತದೆ’.

ಸ್ವಾಮಿ ವಿವೇಕಾನಂದರು, ‘ಬಲಾಢ್ಯನಿಗೆ ಬಲಹೀನನ ಮೇಲಿರುವ ಹಕ್ಕು, ಶ್ರೀಮಂತನಿಗೆ ಬಡವನ ಮೇಲಿನ ಹಕ್ಕು, ಬುದ್ಧಿವಂತನಿಗೆ ಸಾಮಾನ್ಯನ ಮೇಲಿರುವ ಹಕ್ಕು... ಅಂತಿಮವಾಗಿ ಆಧ್ಯಾತ್ಮಿಕ ಹಕ್ಕುಗಳು- ಇವು ದೊಡ್ಡ ಪಿಡುಗುಗಳಾಗಿದ್ದು ಇವ್ಯಾವುವೂ ವೇದಾಂತದಲ್ಲಿ ಪ್ರತಿಪಾದಿತವಾಗಿಲ್ಲ. ವ್ಯಕ್ತಿಗಳ ನಡುವಿನ ಅಥವಾ ಜನಾಂಗಗಳ ನಡುವಿನ ತರತಮ ಭಾವನೆಗಳು ಅನರ್ಥಕಾರಿ’ ಎಂದಿದ್ದಾರೆ. ಸಾಮಾಜಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯಗಳ ಬಗ್ಗೆ, ‘ಸಾಮಾಜಿಕ ಆದರ್ಶಕ್ಕೆ ಸಮಾಜವಾದವು ಶ್ರಮಿಸಬಯಸುವುದಾದರೆ ಅದು ಅದ್ವೈತದಿಂದಲೇ ಸ್ಪೂರ್ತಿ ಪಡೆಯಬೇಕು. ಅದ್ವೈತತತ್ತ್ವ ಅನುಸಾರ ಜೀವನಕ್ರಮವು ನಾವು ನಿರಪೇಕ್ಷ ಬ್ರಹ್ಮನಿಂದ ಪ್ರತ್ಯೇಕವಲ್ಲ, ಅಭಿನ್ನ. ನಿಜವಾದ ಕ್ರಾಂತಿಯೆಂದರೆ ಮಾನಸಿಕ ಕ್ರಾಂತಿಯಿಂದ ಆತ್ಮಜಾಗೃತಿ ಸಾಧಿಸುವುದು, ನೈತಿಕ ಹಾಗೂ ಆಧ್ಯಾತ್ಮಿಕ ತತ್ತ್ವಅನುಷ್ಠಾನಗಳಿಂದ ಮಾನವ ಸಂಬಂಧಗಳ ಹಾಗೂ ಸಂಸ್ಥೆಗಳ ನಿಯಂತ್ರಣ ಸಾಧಿಸಲು ಸಾಧ್ಯ’ ಎಂದಿದ್ದಾರೆ ಸ್ವಾಮೀಜಿ.

ವೇದಾಂತವು ಪ್ರತಿಪಾದಿಸುವ ಸಾರ್ವಕಾಲಿಕ ಸತ್ಯವೆಂದರೆ ಮಾನವನ ಸ್ವಭಾವದಲ್ಲಿ ನೈತಿಕ-ಆಧ್ಯಾತ್ಮಿಕ ಕ್ರಾಂತಿಯನ್ನು ಮೂಡಿಸುವ ಮೊದಲು ಆರ್ಥಿಕ ಅಥವಾ ಸಾಮಾಜಿಕ ಕ್ರಾಂತಿಯನ್ನು ಹುಟ್ಟುಹಾಕಿದ್ದೇ ಆದರೆ ನಾಗರಿಕತೆಗಳು ನಿರರ್ಥಕತೆಯಲ್ಲಿ ಪರ್ಯವಸಾನಗೊಳ್ಳುತ್ತವೆ! ಅದ್ವೈತದ ಪ್ರಭೆಯಲ್ಲಷ್ಟೇ ಸಮಾಜವಾದವು ತಾಜಾನಾಣ್ಯವಾಗಬಲ್ಲದು, ತಬ್ಬಲಿತನದಿಂಧ ಮುಕ್ತಗೊಂಡು, ಸ್ಥಾನ ಮತ್ತು ಮಾನಗಳಿಂದ ಸಮ್ಮಾನಿತಗೊಳ್ಳಬಹುದಷ್ಟೇ.

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net