More

    ಸೆಪ್ಟೆಂಬರ್​ವರೆಗೂ ಶಾಲೆ, ಕಾಲೇಜು ಬೇಡ: ವಿವಿಗಳಿಗೆ ಯುಜಿಸಿ ಶಿಫಾರಸು, ಜುಲೈ-ಆಗಸ್ಟ್​ನಲ್ಲಿ ಎಸ್ಸೆಸ್ಸೆಲ್ಸಿ, ವೃತ್ತಿಪರ ಕೋರ್ಸ್ ಪರೀಕ್ಷೆ

    ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಈ ವರ್ಷ ಶೈಕ್ಷಣಿಕ ಚಟುವಟಿಕೆಗಳ ವೇಳಾಪಟ್ಟಿ ಬಹುತೇಕ ತಲೆಕೆಳಗಾಗಲಿದೆ. ಸೆಪ್ಟೆಂಬರ್​ವರೆಗೂ ಕಾಲೇಜುಗಳನ್ನು ತೆರೆಯದಿರಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಶಿಫಾರಸು ಮಾಡಿರುವ ಪರಿಣಾಮ ಎಸ್ಸೆಸ್ಸೆಲ್ಸಿ, ಪಿಯುಸಿ, ವೃತ್ತಿಪರ ಕೋರ್ಸ್​ಗಳವರೆಗೆ ಎಲ್ಲ ಪರೀಕ್ಷೆಗಳು ಜುಲೈ-ಆಗಸ್ಟ್ ಅವಧಿಯಲ್ಲಿ ನಡೆಯುವ ಸಾಧ್ಯತೆ ಇದೆ.

    ಕೋವಿಡ್-19 ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಕೇಂದ್ರಗಳ ತರಗತಿಗಳನ್ನು ಜುಲೈ ಬದಲಿಗೆ ಸೆಪ್ಟೆಂಬರ್​ನಲ್ಲಿ ಆರಂಭಿಸಬಹುದು ಮತ್ತು ಸಾಧ್ಯವಾದರೆ ಆನ್​ಲೈನ್ ಪರೀಕ್ಷೆಗಳನ್ನು ನಡೆಸಬಹುದು ಎಂದು ಯುಜಿಸಿ ನೇಮಿಸಿರುವ ಸಮಿತಿಗಳು ಶಿಫಾರಸು ಮಾಡಿವೆ. ಇದರಿಂದಾಗಿ ರಾಜ್ಯದಲ್ಲಿ ಬಾಕಿ ಇರುವ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ ಹಾಗೂ ರಾಷ್ಟ್ರಮಟ್ಟದಲ್ಲಿರುವ ಜೆಇಇ, ನೀಟ್ ಸೇರಿ ಬಹುತೇಕ ಎಲ್ಲ ಪರೀಕ್ಷೆಗಳು ಜುಲೈ ನಂತರವೇ ನಡೆಯಲಿದೆ.

    ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಆ.15 ಮತ್ತು ವೈದ್ಯಕೀಯ ಕೋರ್ಸ್​ಗಳ ಪ್ರವೇಶಕ್ಕೆ ಆ.31 ಕೊನೆಯ ದಿನವಾಗಿದೆ. ಆದರೆ, ಕರೊನಾ ವೈರಸ್ ವೇಗಗತಿಯಲ್ಲಿ ಹರಡುತ್ತಿರುವುದರಿಂದ ಈ ಎಲ್ಲ ಕೊನೆಯ ದಿನಾಂಕಗಳು ವರ್ಷದ ಮಟ್ಟಿಗೆ ವಿಸ್ತರಣೆಯಾಗಲಿವೆ. ದೇಶದಲ್ಲಿ ಎರಡನೇ ಹಂತದ ಲಾಕ್​ಡೌನ್ ಮೇ 3ರಂದು ಅಂತ್ಯಗೊಳ್ಳಲಿದ್ದು, ನಂತರದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಇಂಜಿನಿಯ

    ರಿಂಗ್ ಕೋರ್ಸ್​ಗಳ ಪರೀಕ್ಷೆಗಳ ದಿನಾಂಕವನ್ನು ನಿಗದಿ ಪಡಿಸಲು ಆಯಾ ಇಲಾಖೆಗಳು ನಿರ್ಧರಿಸಿದ್ದವು. ಆದರೀಗ ಯುಜಿಸಿಗೆ ಸಮಿತಿ ನೀಡಿರುವ ಶಿಫಾರಸು ನೋಡಿ ಇದೀಗ ಮತ್ತೆ ದಿನಾಂಕ ಮುಂಡೂಡಿಕೆ ಮಾಡಲು ಆಲೋಚಿಸಿವೆ. ಯುಜಿಸಿಯಿಂದ ಅಧಿಕೃತವಾಗಿ ಹೊರಡಿಸಲಿರುವ ಆದೇಶಕ್ಕಾಗಿ ವಿಶ್ವವಿದ್ಯಾಲಯಗಳು ಕಾಯುತ್ತಿವೆ.

    ಸಮಸ್ಯೆ ಇಲ್ಲ: ಒಂದು ವೇಳೆ ಜುಲೈ-ಆಗಸ್ಟ್ ಅಂತರದಲ್ಲಿ ಪರೀಕ್ಷೆ ಆಯೋಜನೆ ಮಾಡಿದರೂ ಹೆಚ್ಚಿನಂಶ ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ವೇಳಾಪಟ್ಟಿಗೆ ತೊಂದರೆ ಉಂಟಾಗುವುದಿಲ್ಲವೆಂದು ವಿವಿಯ ಕುಲಪತಿಗಳು ಅಭಿಪ್ರಾಯ ತಿಳಿಸಿದ್ದಾರೆ. ಏಕೆಂದರೆ, ಇಂಜಿನಿಯರಿಂಗ್ ಕಾಲೇಜುಗಳ ಶೈಕ್ಷಣಿಕ ಅವಧಿ ಮೇ ಗೆ ಅಂತ್ಯಗೊಳ್ಳುತ್ತಿತ್ತು. ಜೂನ್​ನಲ್ಲಿ ಪರೀಕ್ಷೆ ಆರಂಭಿಸಬೇಕಾಗಿತ್ತು. ಇದೀಗ ಜುಲೈ-ಆಗಸ್ಟ್ ಎಂದರೆ ಹೆಚ್ಚಿನ ಸಮಸ್ಯೆ ಉಂಟಾಗುವುದಿಲ್ಲವೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.

    ಆನ್​ಲೈನ್ ಕಷ್ಟ

    ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುತೇಕ ಕಾಲೇಜುಗಳು ಆನ್​ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಗ್ರಾಮೀಣ ಅಭ್ಯರ್ಥಿಗಳಿಗೆ ಫಲಕಾರಿಯಾಗುತ್ತಿಲ್ಲ. ಅವರು ಸಮರ್ಪಕವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂಬ ದೂರುಗಳು ಕೇಳಿ ಬಂದಿದೆ. ಪರಿಸ್ಥಿತಿ ಈ ರೀತಿ ಇರುವಾಗ ಆನ್​ಲೈನ್ ಪರೀಕ್ಷೆ ಮಾಡುವುದು ಕಷ್ಟ ಎಂದು ವಿವಿಯ ಕುಲಪತಿಗಳು ತಿಳಿಸಿದ್ದಾರೆ.

    ಯುಜಿಸಿ ಸಮಿತಿಯ ಶಿಫಾರಸುಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಆದ್ದರಿಂದ ಶಿಫಾರಸುಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಿ, ನಮ್ಮ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಆ ನಂತರ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯು ತರಗತಿಗಳ ಬಗ್ಗೆ ನಿರ್ಧಾರ ಮಾಡುತ್ತೇವೆ. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯ ಬಗ್ಗೆಯೂ ಮೇ 3 ರ ನಂತರ ನಿರ್ಧಾರ ಮಾಡುತ್ತೇವೆ.

    |ಎಸ್. ಸುರೇಶ್​ಕುಮಾರ್ ಶಿಕ್ಷಣ ಸಚಿವರು

    ಯುಜಿಸಿ ಸಮಿತಿ ಹೇಳಿದ್ದೇನು?

    ರಾಷ್ಟ್ರವ್ಯಾಪಿ ಲಾಕ್​ಡೌನ್​ನಿಂದಾಗಿ ಆಗಿರುವ ಶೈಕ್ಷಣಿಕ ನಷ್ಟ ಹಾಗೂ ಆನ್​ಲೈನ್ ಪರೀಕ್ಷೆಗೆ ಸಂಬಂಧಿಸಿ ಯುಜಿಸಿ ಎರಡು ಸಮಿತಿಗಳನ್ನು ನೇಮಿಸಿತ್ತು. ಹರಿಯಾಣ ವಿವಿ ಕುಲಪತಿ ಆರ್.ಸಿ. ಕುಹದ್ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುುಕ್ತ ವಿವಿ ಕುಲಪತಿ ನಾಗೇಶ್ವರ ರಾವ್ ಈ ಸಮಿತಿಗಳ ನೇತೃತ್ವ ವಹಿಸಿದ್ದು ಎರಡೂ ಸಮಿತಿಗಳು ಶುಕ್ರವಾರ ವರದಿ ಸಲ್ಲಿಸಿವೆ. ವರದಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಈ ವಿಚಾರದಲ್ಲಿ ಮುಂದಿನ ವಾರ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಚ್​ಆರ್​ಡಿ) ಅಧಿಕಾರಿಗಳು ತಿಳಿಸಿದ್ದಾರೆ.

    • ಎಲ್ಲ ಶಿಫಾರಸುಗಳನ್ನು ಅಂಗೀಕರಿಸಬೇಕೆಂದೇನೂ ಇಲ್ಲ. ವಿಷಯಗಳ ಕಾರ್ಯಸಾಧ್ಯತೆ ಹಾಗೂ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ರೂಪಿಸುವುದಾಗಿ ಹೇಳಿದ್ದಾರೆ.
    • ಪ್ರವೇಶ ಪರೀಕ್ಷೆಗಳನ್ನು ನಡೆಸುವಲ್ಲಿನ ವಿಳಂಬ ಹಾಗೂ ಬಾಕಿಯಿರುವ ಬೋರ್ಡ್ ಪರೀಕ್ಷೆಗಳು ಅಕಾಡೆಮಿಕ್ ತರಗತಿಗಳನ್ನು ಆರಂಭಿಸುವಲ್ಲಿ ಇರುವ ಇನ್ನೊಂದು ಅಡ್ಡಿ ಎಂದು ಸಮಿತಿ ಹೇಳಿದೆ.
    • ಸದ್ಯಕ್ಕೆ ನೀಟ್ ಮತ್ತು ಜೆಇಇಯಂಥ ಪ್ರವೇಶ ಪರೀಕ್ಷೆಗಳನ್ನು ಜೂನ್​ನಲ್ಲಿ ನಡೆಸುವ ಉದ್ದೇಶವಿದೆ. ಆದರೆ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಡುವುದು ತುಂಬಾ ಅಗತ್ಯವಾಗುತ್ತದೆ ಎಂದಿದ್ದಾರೆ.
    • ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ದೇಶದಾದ್ಯಂತ ಮಾರ್ಚ್ 16ರಿಂದ ವಿವಿ ಮತ್ತು ಶಾಲಾ- ಕಾಲೇಜ್​ಗಳನ್ನು ಮುಚ್ಚಲಾಗಿತ್ತು. ಆನಂತರ ರಾಷ್ಟ್ರವ್ಯಾಪಿ ಲಾಕ್​ಡೌನ್ ಘೊಷಿಸಲಾಗಿತ್ತು.
    ಮೇ 3 ರ ನಂತರ ಎಲ್ಲ ವಿಶ್ವವಿದ್ಯಾಲಯದ ಕುಲಪತಿಗಳ ಸಭೆ ಕರೆಯಲಾಗುತ್ತದೆ. ಬಾಕಿ ಉಳಿದಿರುವ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ನೀಡುವುದು ಮೊದಲು ಆಗಬೇಕಾಗಿದೆ. ಆ ನಂತರ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಮಾಡುತ್ತೇನೆ.
    | ಡಾ. ಸಿ.ಎನ್. ಅಶ್ವತ್ಥನಾರಾಯಣ್ ಉಪ ಮುಖ್ಯಮಂತ್ರಿ

    ರಾಜ್ಯದ ಪರೀಕ್ಷಾರ್ಥಿಗಳ ಮಾಹಿತಿ

    • ಎಸ್ಸೆಸ್ಸೆಲ್ಸಿ 8.4 ಲಕ್ಷ
    • ಪಿಯು 6.8 ಲಕ್ಷ
    • ಸಿಇಟಿ 1.91 ಲಕ್ಷ
    • ಅಂತಿಮ ಸೆಮಿಸ್ಟರ್ ಇಂಜಿನಿಯರಿಂಗ್ 70 ಸಾವಿರ

    ಪ್ರಶ್ನೆಯಾದ ಪುನಾರಂಭ; ಬದಲಾದ ಸ್ವರೂಪದಲ್ಲಿ ತೆರೆದುಕೊಳ್ಳಲು ಸಜ್ಜಾಗಿದೆ ಜಗತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts