ಹೊನ್ನಾಳಿ: ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಾತೃಪೂರ್ಣ, ಮಾತೃವಂದನ, ಮಾತೃಶ್ರೀ ಮತ್ತಿತರ ದಾಖಲಾತಿಗಳನ್ನು ನಿತ್ಯವೂ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಸರ್ಕಾರ ಸ್ಮಾರ್ಟ್‌ಫೋನ್ ವಿತರಿಸಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ತಾಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಶನಿವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ವಿತರಿಸಿ ಮಾತನಾಡಿದರು.
ಸ್ಮಾರ್ಟ್‌ಫೋನ್ ಬಳಕೆಯಿಂದ ಕಾರ್ಯ ಸುಲಭವಾಗುತ್ತದೆ. ಇಲಾಖೆ ಆಯೋಜಿಸುವ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಾಗೂ ಸಭೆಗಳಲ್ಲಿ ಭಾಗವಹಿಸಲು ಇವು ಸಹಕಾರಿಯಾಗಿವೆ. ಸ್ಮಾರ್ಟ್‌ಫೋನ್‌ಗಳನ್ನು ಸದ್ಬಳಕೆ ಮಾಡಿಕೊಂಡು ಇಲಾಖೆ ವಹಿಸಿದ ಮಾಹಿತಿಯನ್ನು ಸಕಾಲದಲ್ಲಿ ಅಪ್‌ಲೋಡ್ ಮಾಡಿ ಅರ್ಹರಿಗೆ ಸೌಲಭ್ಯ ಒದಗಿಸುವಂತಾಗಲಿ ಎಂದು ತಿಳಿಸಿದರು.
ಯಾವುದೇ ಸಮೀಕ್ಷೆ ನಡೆಸಿದರೂ ಆನ್‌ಲೈನ್ ಮೂಲಕವೇ ಮಾಡಬೇಕು. ಮೊಬೈಲ್ ಅವಶ್ಯಕತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ 90 ಕೋಟಿ ವೆಚ್ಚದಲ್ಲಿ 75,938 ಸ್ಮಾರ್ಟ್‌ಫೋನ್ ಖರೀದಿಗೆ ಅನುದಾನ ಮೀಸಲಿರಿಸಿದ್ದರು. ಈಗ ಅದೇ ಅನುದಾನದಲ್ಲಿ ಹೊನ್ನಾಳಿ- ನ್ಯಾಮತಿ ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡಲಾಗುತ್ತಿದೆ ಎಂದರು.
ಸಿಡಿಪಿಒ ಜ್ಯೋತಿ ಮಾತನಾಡಿ, ಎಲ್ಲ ಮಾಹಿತಿಗಳನ್ನು ನಿಗದಿತ ಸಮಯದಲ್ಲಿ ಅಪ್‌ಲೋಡ್ ಮಾಡುವುದನ್ನು ಕೇಂದ್ರ ಸರ್ಕಾರ ಸದಾ ನಿಗಾ ವಹಿಸುತ್ತದೆ. ಪ್ರತಿ ದತ್ತಾಂಶವನ್ನು ಅಧಿಕಾರಿಗಳು ಕುಳಿತಲ್ಲೇ ಪರಾಮರ್ಶಿಸಬಹುದು ಎಂದರು.
ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಹೊನ್ನಾಳಿ ಗ್ರೇಡ್ 2 ತಹಸೀಲ್ದಾರ್ ಸುರೇಶ್, ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ, ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ, ನವೀನ್‌ಕುಮಾರ್ ಇತರರಿದ್ದರು.