More

  ಆತ್ಮಸ್ಥೈರ್ಯ ಬೆಳೆಸದ ಶಿಕ್ಷಣ ವ್ಯರ್ಥ    ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ  ಎಸ್ಪಿ ಉಮಾ ಪ್ರಶಾಂತ್ ಅಭಿಪ್ರಾಯ

  ದಾವಣಗೆರೆ: ಮಕ್ಕಳ ಸಮಗ್ರ ಅಭಿವೃದ್ಧಿಯೇ ಶಿಕ್ಷಣವಾಗಿದೆ. ಬದಲಾಗಿ ಕೇವಲ ಅಂಕಗಳು, ರ‌್ಯಾಂಕ್ ಗಳಿಕೆಯಷ್ಟೇ ಅಲ್ಲ. ಇಂದಿನ ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸದ ಶಿಕ್ಷಣ ವ್ಯರ್ಥ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
  ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಷೇರುದಾರ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣ ಬೆಳೆಸುವ ಶಿಕ್ಷಣ ಬೇಕಿದೆ ಎಂದರು.
  ಪಾಲಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಆಗ ಅವರು ಭಾವನಾತ್ಮಕವಾಗಿಯೂ, ಬೌದ್ಧಿಕವಾಗಿ ಬಲಿಷ್ಠರಾಗಲು ಸಾಧ್ಯವಿದೆ. ಅವರ ಬುದ್ಧಿಮತ್ತೆಗೆ ತಕ್ಕಂತೆ ಓದಿನ ಆಯ್ಕೆ ಅವರಿಗೇ ಬಿಡಬೇಕು. ನಮ್ಮ ಮಕ್ಕಳು ಏನಾಗಬೇಕೆಂಬುದನ್ನು ಪಾಲಕರೇ ಒಮ್ಮುಖವಾಗಿ ನಿರ್ಧರಿಸಬಾರದು ಎಂದೂ ಕಿವಿಮಾತು ಹೇಳಿದರು.
  ವಾಲಿಬಾಲ್ ಆಟಗಾರ್ತಿಯಾಗಿದ್ದ ರುಣಿಮಾ ಸಿನ್ಹಾ ಕೃತಕ ಕಾಲು ಅಳವಡಿಸಿಕೊಂಡಿದ್ದೂ ಛಲ ಬಿಡದೆ ಹಿಮಾಲಯ ಪರ್ವತಾರೋಹಣ ಮಾಡಿದರು. ಇಂದಿನ ವಿದ್ಯಾರ್ಥಿಗಳಲ್ಲೂ ಶಕ್ತಿ, ಸಾಮರ್ಥ್ಯ ಇದೆ. ತಮ್ಮೊಳಗೆ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು.  ತಮಗೆ ತಾವೇ ಪ್ರೇರಣದಾಯಕರಾಗಬೇಕು ಎಂದೂ ಹೇಳಿದರು.
  ಅಬ್ದುಲ್ ಕಲಾಂ, ಕೆ.ಆರ್.ನಾರಾಯಣನ್ ಬಡತನದಲ್ಲೂ ಓದಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗೇರಿದರು. ಹೀಗಾಗಿ ಸಾಧನೆ ಮಾಡಲು ಮಕ್ಕಳಲ್ಲಿ ಬಡತನ, ಆರ್ಥಿಕ ಹಿಂಜರಿತದ ನೆವ ಬೇಡ. ಅಗತ್ಯಕ್ಕೆ ತಕ್ಕಷ್ಟು ಮೊಬೈಲ್ ಬಳಸುವ ಎಚ್ಚರಿಕೆಯೂ ಬೇಕು ಎಂದು ಹೇಳಿದರು.
  ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಹೆಚ್ಚಿನ ಸಾಧನೆಗೆ ಉತ್ತೇಜನ ನೀಡಿದಂತಾಗಲಿದೆ. ಇದರ ಜತೆಗೆ ಐಎಎಸ್, ಕೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉತ್ತೇಜನ ನೀಡಿದಲ್ಲಿ ಸಮಾಜದಲ್ಲಿ ಹೆಚ್ಚಿನ ಅಧಿಕಾರಿಗಳು ಬರಲಿದ್ದಾರೆ. ಗ್ರಾಮಾಂತರ ಹಾಗೂ ಮಧ್ಯಮ ವರ್ಗದ ಮಕ್ಕಳಲ್ಲಿ ಇದರ ಬಗ್ಗೆ ಪರಿಚಯ ನೀಡಬೇಕು ಎಂದೂ ಆಶಿಸಿದರು.
  ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಬಿ.ಜಿ. ಸಿದ್ದಲಿಂಗಮ್ಮ, ಎಸ್ಸೆಸ್ಸೆಲ್ಸಿ ಮತ್ತು ಪಿಯು ಹಂತಗಳು ವಿದ್ಯಾರ್ಥಿ ಜೀವನದ ದಿಕ್ಕು ಬದಲಿಸುವ ಕಾಲವಾಗಿದ್ದು ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಸಂಕುಚಿತತೆ ಬಿಟ್ಟು ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪಾಲಕರಿಗೆ ಎಂದಿಗೂ ನಂಬಿಕೆ ದ್ರೋಹ ಮಾಡಬಾರದು ಎಂದರು.
  ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುನ 47 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೀರಶೈವ ಲಿಂಗಾಯತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲೋಕಣ್ಣ ಮಾಗೋಡ್ರ,ಸಂಸ್ಥಾಪಕ ಅಧ್ಯಕ್ಷ ಕೆ. ಶಿವಶಂಕರ್, ಉಪಾಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಡಿಡಿಪಿಐ ಜಿ. ಕೊಟ್ರೇಶ್,ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ,   ಕಾರ್ಯಾಧ್ಯಕ್ಷ ಬಿ. ಪಾಲಾಕ್ಷಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸಿ. ಅರುಣ್, ಎಂ. ಸಿದ್ದೇಶ್, ಎನ್. ಓಹಿಲೇಶ್ವರ ಇತರರಿದ್ದರು

  See also  ಹೊಸ ಮತದಾರರ ಹೆಚ್ಚಳಕ್ಕೆ ಜಾಗೃತಿ ಮೂಡಿಸಿ: ವಸ್ತ್ರದ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts