More

    ಬಿಜೆಪಿ ಸೋಲಿಗೆ ಒಳೇಟು ಕಾರಣ; ವರಿಷ್ಠರಿಗೆ ಪ್ರಭಾರಿಗಳ ವಿಶ್ಲೇಷಣಾತ್ಮಕ ವರದಿ

    ಮೃತ್ಯುಂಜಯ ಕಪಗಲ್
    ಬೆಂಗಳೂರು: ಆಡಳಿತ ವಿರೋಧಿ ಅಲೆ, ಬೆಲೆ ಏರಿಕೆ, ಕಾಂಗ್ರೆಸ್​ನ ಗ್ಯಾರಂಟಿಗಳು ಬಿಜೆಪಿ ಸೋಲಿಗೆ ಮೇಲ್ನೋಟಕ್ಕೆ ಬಿಂಬಿತ ಕಾರಣಗಳು. ನಿರೀಕ್ಷೆೆಗೂ ಮೀರಿದ ಕಳಪೆ ಸಾಧನೆಗೆ ‘ಒಳೇಟು’ ಕೊಟ್ಟ ಪೆಟ್ಟು ಗಮನಾರ್ಹವಾಗಿದೆ. ರಣವ್ಯೂಹಗಳ ಅನುಷ್ಠಾನದ ಮೇಲ್ವಿಚಾರಣೆಗೆ ವಿಧಾನಸಭೆ ಕ್ಷೇತ್ರವಾರು ನಿಯೋಜಿತರಾಗಿದ್ದ ಪ್ರವಾಸಿ ಪ್ರಭಾರಿಗಳು ವರಿಷ್ಠರಿಗೆ ಸಲ್ಲಿಸಿದ ವಿಶ್ಲೇಷಣಾತ್ಮಕ ವರದಿಯ ಮುಖ್ಯಾಂಶವಿದು.

    ಚುನಾವಣೆ ಪ್ರಚಾರದಲ್ಲಿ ಅಭಿವೃದ್ಧಿ ವಿಚಾರಗಳು ಅಬ್ಬರಿಸಿದವು. ಆದರೆ, ಸ್ಪರ್ಧಾ ಅಖಾಡದಲ್ಲಿ ಜಾತಿ, ಉಪಜಾತಿ, ಪಂಗಡ, ಒಳಪಂಗಡಗಳ ಅತಿರೇಕದ ಚರ್ಚೆ, ತಂತ್ರಗಾರಿಕೆಯು ಹಿನ್ನಡೆಗೆ ಮತ್ತೊಂದು ಕಾರಣವೆಂದು ಗಮನಸೆಳೆಯಲಾಗಿದೆ. ಅಭಿವೃದ್ಧಿಗಳ ಕೆಲಸಗಳನ್ನು ಭ್ರಷ್ಟಾಚಾರದ ಆರೋಪ ನುಂಗಿ ಹಾಕಿತು. ಡಬಲ್ ಇಂಜಿನ್ ಸರ್ಕಾರದ ಫಲಗಳು ಜನರ ಮನೆ ಬಾಗಿಲಿಗೆ ತಲುಪಿದ್ದರೂ ಜಾತಿ ಲೆಕ್ಕಾಚಾರ ದಲ್ಲಿ ಮರೆಯಾಯಿತು. ಅಭ್ಯರ್ಥಿಗಳ ಆಯ್ಕೆ ನಂತರ ರಣಕಣದ ಚಿತ್ರಣವೇ ಬದಲಾಯಿತು. ಎದುರಾಳಿಗಳು ಸೃಷ್ಟಿಸಿದ ಅಪ ನಂಬಿಕೆ, ಅನುಮಾನಗಳನ್ನು ಕಡಿಮೆ ಅಂದಾಜಿಸಿದ್ದೂ ಮುಳುವಾಯಿತು.

    ಸಮುದಾಯಕ್ಕೆ ನಷ್ಟ

    ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿದ್ದರಿಂದ ಪಕ್ಷಕ್ಕೆ ಹಿನ್ನಡೆಯಾದದ್ದಲ್ಲ. ಆ ರೀತಿ ಹೇಳುವ ಮೂಲಕ ಹಿರಿಯ ನಾಯಕನ ಬಗ್ಗೆ ‘ನೆಗೆಟಿವ್ ಷೇಡ್’ ಮೂಡಿಸುವ ಪ್ರಯತ್ನಗಳಾಗುತ್ತಿವೆ. ವೀರಶೈವ-ಲಿಂಗಾಯತ ಸಮುದಾಯ ಒಮ್ಮನಸ್ಸಿನಿಂದ ಕಾಂಗ್ರೆಸ್​ಗೆ ಶಿಫ್ಟ್ ಆಗಿಲ್ಲ. ಪಕ್ಷದಿಂದ ಸ್ಪರ್ಧಿಸಿದ್ದ ಸಮುದಾಯದ 56 ಅಭ್ಯಥಿಗಳಲ್ಲಿ 38 ಜನರು ಸೋಲುಂಡಿದ್ದಾರೆ. ವಿಜಯಪುರ, ಬಾಗಲಕೋಟೆ, ಗದಗ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳು ಸೇರಿ 18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಒಳ ಏಟುಗಳಿಂದ ಸೋತಿದ್ದಾರೆ. ಸಮುದಾಯದಲ್ಲಿ ರೆಡ್ಡಿ, ಬಣಜಿಗ, ಸಾದರ, ಗಾಣಿಗ, ಪಂಚಮಸಾಲಿ ಹೀಗೆ ಆಂತರಿಕ ವಿಭಜನೆಯ ಪರಿಣಾಮ ಪಕ್ಷಕ್ಕೆ ಮಾತ್ರವಲ್ಲ, ರಾಜಕೀಯವಾಗಿ ಬಹುದೊಡ್ಡ ನಷ್ಟ ಅನುಭವಿಸಿದೆ ಎಂದು ಮೂಲಗಳು ವ್ಯಾಖ್ಯಾನಿಸಿವೆ.

    ಷಡ್ಯಂತ್ರಗಳು ವರ್ಕೌಟ್: ಜಾತಿ, ಉಪಜಾತಿ ಒಳಸುಳಿಗಳು, ಅಪನಂಬಿಕೆಯೊಂದಿಗೆ ಮುಂದೆ ಅಡ್ಡಗಾಲು ಹಾಕಬಹುದು ಎಂದು ‘ಭವಿಷ್ಯ’ದ ನಾಯಕರನ್ನು ಸೋಲಿಸುವಲ್ಲಿ ವ್ಯವಸ್ಥಿತ ಚಿತಾವಣೆಯಿದೆ. ಬೆಂಗಳೂರು ನಗರ, ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಆಯ್ದ ಕ್ಷೇತ್ರಗಳಲ್ಲಿ ಇಂತಹ ಷಡ್ಯಂತ್ರಗಳು ವರ್ಕೌಟ್ ಆಗಿವೆ. ಕಾರ್ಯಕರ್ತರ ಅಭಿಪ್ರಾಯ, ಕೋರ್ ಕಮಿಟಿ ಶಿಫಾರಸುಗಳ ಪ್ರಕಾರ ಬಹುತೇಕ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಸೋತ ಹಾಗೂ ಬದಲಾವಣೆ ಬಯಸಿದ ಕ್ಷೇತ್ರಗಳಲ್ಲಿ ವರಿಷ್ಠರು ಸೂಚಿಸಿದ ಉಮೇದುವಾರರು ಸ್ಪರ್ಧಿಸಿದ್ದರು. ಕೆಲವು ‘ಶಕ್ತಿ’ಗಳ ಮೇಲಾಟ, ಪಾರಮ್ಯ ಮೆರೆಯುವ ಹಪಾಹಪಿಗೆ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಪಕ್ಷದ ಪ್ರಬಲ ಹಿಡಿತವುಳ್ಳ ಕ್ಷೇತ್ರಗಳಲ್ಲಿ ಸೋಲಿಸುವ ಪ್ರಯತ್ನಗಳು ಫಲಿಸಿಲ್ಲ ಎಂಬ ಮಾಹಿತಿ ವರಿಷ್ಠರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

    158 ಅಭ್ಯರ್ಥಿಗಳು ಪರಾಭವ

    ಸ್ಪರ್ಧಿಸಿದ್ದ 224ರಲ್ಲಿ 158 ಅಭ್ಯರ್ಥಿಗಳು ಪರಾಭವ ಗೊಂಡಿದ್ದಾರೆ. ಇದರಲ್ಲಿ 30 ಉಮೇದು ವಾರರ ಠೇವಣಿ ನಷ್ಟವಾಗಿದೆ. ಹಿಂದಿನ ಎರಡು ಚುನಾವಣೆಗೆ ಹೋಲಿಸಿದರೆ ಸೋತವರು, ಠೇವಣಿ ಕಳೆದುಕೊಂಡವರ ಸಂಖ್ಯೆ ಹೆಚ್ಚಿದೆ. ಒಟ್ಟು ಮೂರು ಅವಧಿಯ ಲೆಕ್ಕಾಚಾರದ ಪ್ರಕಾರ 2008ರಲ್ಲಿ ಶೇ. 36.86 ಮತ ಗಳಿಕೆ, 110ರಲ್ಲಿ ಗೆಲುವು, 2018ರಲ್ಲಿ ಶೇ.36.30 ಮತ ಗಳಿಕೆ, 104 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 2023ರಲ್ಲಿ ಶೇ.36 ಮತ ಗಳಿಕೆಯೊಂದಿಗೆ 66 ಸ್ಥಾನಗಳಲ್ಲಿ ಗೆದ್ದಿದೆ. ಪ್ರಸಕ್ತ ವರ್ಷದ ಪ್ರಯತ್ನ, ಪರಿಶ್ರಮಕ್ಕೆ ತುಲನೆ ಮಾಡಿದರೆ 2004ರದು ಕಡಿಮೆಯೇ. ಆದರೂ ಆ ಚುನಾವಣೆಯಲ್ಲಿ ಶೇ.28.33 ಮತಗಳಿಕೆಯೊಂದಿಗೆ 79 ಸ್ಥಾನ ಗೆದ್ದಿದ್ದೆವು. 2023ರ ಮತ ಗಳಿಕೆ ಹಿಂದಿನ ಚುನಾವಣೆಯಷ್ಟೇ ಇದ್ದರೂ ಸ್ಥಾನಗಳು ಕುಸಿತದ ಕೆಲವು ನಾಯಕರು ನಂಬಿಕೆ ಉಳಿಸಿಕೊಂಡಿಲ್ಲ ಎಂಬುದು ವೇದ್ಯವಾಗುತ್ತದೆ ಎಂಬ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts