Baba Vanga Prediction : ರಾಶಿಫಲವನ್ನು ಗ್ರಹಗಳ ಸಂಚಾರಕ್ಕೆ ಅನುಗುಣವಾಗಿ ಊಹಿಸುವ ನಂಬಿಕೆಯನ್ನಾಗಿ ನೋಡಲಾಗುತ್ತದೆ. ಈ ವ್ಯವಸ್ಥೆಯಿಂದ ಒಬ್ಬನ ಭವಿಷ್ಯವನ್ನು ನಿರ್ಧರಿಸಬಹುದು ಎಂದು ನಂಬಲಾಗಿದೆ. ಕೇವಲ ಒಂದು ತಿಂಗಳಲ್ಲಿ 2024 ಮುಗಿದು 2025ರ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ತಮ್ಮ ಅದೃಷ್ಟ ಬದಲಾಗುತ್ತಾ ಎಂದು ಯೋಚನೆ ಮಾಡುವವರು ಕೂಡ ಇದಾರೆ. ಅದಕ್ಕಾಗಿ ತಮ್ಮ ರಾಶಿಭವಿಷ್ಯ ತಿಳಿದುಕೊಳ್ಳಲು ತೀವ್ರ ಕುತೂಹಲವನ್ನು ಹೊಂದಿರುತ್ತಾರೆ.
2025ರಲ್ಲಿ ಯಾವ ರಾಶಿಯವರು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುತ್ತಾರೆ ಎಂಬುದನ್ನು ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಬಹಳ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ. ಯಾವ ರಾಶಿಯವರಿಗೆ ಹೊಸ ವರ್ಷ ಅದೃಷ್ಟ ತರಲಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ಬಾಬಾ ವಂಗಾರ ಕಿರು ಪರಿಚಯ ಮಾಡಿಕೊಳ್ಳೋಣ.
ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.
ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ.
ಮೇಷ: 2025ರ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಮೇಷ ರಾಶಿ ಚಿಹ್ನೆಯಡಿಯಲ್ಲಿ ಜನಿಸಿದವರ ಜೀವನದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಸಂಪತ್ತನ್ನು ಗಳಿಸುವ ಅವಕಾಶವನ್ನು ಪಡೆಯುತ್ತಾರೆ. 2024ರಲ್ಲಿ ಮೇಷ ರಾಶಿಯವರಿಗೆ ಯಾವುದೇ ಅದೃಷ್ಟ ಇರಲಿಲ್ಲ. ಆದರೆ, ಈ ವರ್ಷ ಜೀವನದಲ್ಲಿ ಯಶಸ್ಸು ಕೂಡಿಬರುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಒಟ್ಟಾರೆಯಾಗಿ, ಮೇಷ ರಾಶಿಯವರಿಗೆ 2025 ವರ್ಷವು ಶ್ರೀಮಂತವಾಗಿರುತ್ತದೆ.
ವೃಷಭ: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ, ವೃಷಭ ರಾಶಿಯವರಿಗೆ 2025 ಕಠಿಣ ಪರಿಶ್ರಮದ ವರ್ಷವಾಗಿರುತ್ತದೆ. ನಿಮ್ಮ ಕೆಲಸಕ್ಕೆ ತಕ್ಕಂತೆ ಉತ್ತಮ ವೇತನ ಸಹ ಸಿಗಲಿದೆ. ವೈವಾಹಿಕ ಸಂಬಂಧವು ಉತ್ತಮವಾಗಿರುತ್ತದೆ ಮತ್ತು ಕೆಲವರಿಗೆ ಪ್ರೇಮ ವೈಫಲ್ಯವಾಗಬಹುದು. ಕೆಲಸದಲ್ಲಿ ಕೆಲವು ಸಮಸ್ಯೆಗಳ ಸಂಭವವಿದೆ. ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
ಮಿಥುನ: ಇತರ ರಾಶಿಗಳಿಗಿಂತ ಭಿನ್ನವಾಗಿ ಉತ್ತಮ ವರ್ಷವಾಗಿರುತ್ತದೆ. ದೇವರ ಮೇಲಿನ ನಿಮ್ಮ ಭಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಕಠಿಣ ಪ್ರಯತ್ನ ವಹಿಸಬೇಕಾಗುತ್ತದೆ ಮತ್ತು ಹಣದ ಒಳಹರಿವು ಕೂಡ ಅನಿಯಮಿತವಾಗಿರುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಕರ್ಕಾಟಕ: 2025ರಲ್ಲಿ ಬಾಬಾ ವಂಗಾ ಅವರ ಪ್ರಕಾರ, ಕರ್ಕಾಟಕ ರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದವರಿಗೆ ಪ್ರಗತಿಗೆ ವಿವಿಧ ಅವಕಾಶಗಳು ಬರುತ್ತವೆ. ಹಿಂದಿನ ಶ್ರಮದ ಫಲ ಈ ವರ್ಷ ಖಂಡಿತ ಸಿಗಲಿದೆ. ಎಲ್ಲ ಗ್ರಹಗಳು ಅನುಕೂಲಕರ ಸ್ಥಾನದಲ್ಲಿರುವುದರಿಂದ, ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೊಸ ವ್ಯಾಪಾರ ಆರಂಭಿಸಲು ಅವಕಾಶವಿರುತ್ತದೆ. ನೀವಿರುವಲ್ಲಿ ಧ್ವಜ ಹಾರಿಸುತ್ತೀರಿ ಎಂದು ಬಾಬಾ ವಂಗ ಭವಿಷ್ಯ ನುಡಿದಿದ್ದಾರೆ.
ಸಿಂಹ: ಈ ರಾಶಿಯವರಿಗೆ 2025 ಮಿಶ್ರ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಗಮನ ನೀಡಬೇಕು. ಕೆಲಸದಲ್ಲಿ ಸಮಸ್ಯೆಗಳ ಸಂಭವವಿದೆ. ಎಷ್ಟೇ ಸಮಸ್ಯೆಗಳಿದ್ದರೂ ಕೆಲಸದಲ್ಲಿ ಜಾಗರೂಕರಾಗಿರಿ.
ಇದನ್ನೂ ಓದಿ: ಉಗುರುಗಳೇ ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು: ಈ ರೀತಿ ಇದ್ರೆ ಯಾವ ಸಮಸ್ಯೆ ಇದೆ ಎಂದರ್ಥ? Fingernailsಕನ್ಯಾ: ಶನಿಯ ಸಂಚಾರವು ದುರ್ಬಲ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ದೀರ್ಘಕಾಲದ ವೈವಾಹಿಕ ಅಡೆತಡೆಗಳು ನಿವಾರಣೆಯಾಗುವುದರಿಂದ ಈ ರಾಶಿಯವರು 2025ರಲ್ಲಿ ಮಿಶ್ರ ಪ್ರಯೋಜನಗಳನ್ನು ಅನುಭವಿಸಬಹುದು.
ತುಲಾ: ಶನಿಯ ಸಂಚಾರವು ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರದಲ್ಲಿ ದುಪ್ಪಟ್ಟು ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಗುರು ಭಗವಾನರ ಕೃಪೆಗೆ ಪಾತ್ರರಾಗುವ ಅವಕಾಶವಿದೆ. ಗುರು ಭಗವಾನ್ ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡಲಿದ್ದಾರೆ.
ವೃಶ್ಚಿಕ: ಗುರು ಮತ್ತು ಶನಿಯ ಸಂಕ್ರಮಣದಿಂದ ಈ ರಾಶಿಯವರಿಗೆ ಲಾಭವಾಗುವ ಸಾಧ್ಯತೆ ಇದೆ. ರಾಹು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಕೌಟುಂಬಿಕ ಜೀವನದಲ್ಲಿ ಬಹಳ ದಿನಗಳಿಂದ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರೀತಿ ಮತ್ತು ಮದುವೆಯ ವಿಷಯಗಳಲ್ಲಿ ಈ ರಾಶಿಯವರು 2025ರಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಧನುಸ್ಸು: ಹಳೆಯ ಸಮಸ್ಯೆಗಳು ನಿವಾರಣೆಯಾಗಲಿವೆ. ಉದ್ಯೋಗ ಬದಲಾವಣೆಗೆ ಅವಕಾಶವಿರುತ್ತದೆ. ದೂರದಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ಸಣ್ಣಪುಟ್ಟ ತೊಂದರೆಯಾದರೆ ಅದನ್ನು ಸ್ವೀಕರಿಸಿ ನೆಮ್ಮದಿಯಿಂದ ಬಾಳಬೇಕು. ಕೌಟುಂಬಿಕ ವಿಷದ ಬಗ್ಗೆ ಎಚ್ಚರದಿಂದಿರುವುದು ಉತ್ತಮ ಎಂದು ಬಾಬಾ ವಂಗಾ ಹೇಳಿದ್ದಾರೆ.
ಮಕರ: ಈ ರಾಶಿಯವರಿಗೆ ಮುಂದಿನ ವರ್ಷ ಮಿಶ್ರ ಫಲಿತಾಂಶಗಳನ್ನು ನೀಡಬಹುದು. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಪ್ರೇಮ ಸಂಬಂಧ ಉತ್ತಮವಾಗಿರುತ್ತದೆ. ದಾಂಪತ್ಯ ಸಂಬಂಧದಲ್ಲಿ ಆಗಾಗ ಸಮಸ್ಯೆಗಳಿರುತ್ತವೆ. ಸಮಸ್ಯೆಗಳನ್ನು ಎದುರಿಸುವ ಪ್ರಬುದ್ಧತೆಯನ್ನು ನೀವು ಪಡೆಯುತ್ತೀರಿ.
ಕುಂಭ: ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2025ರ ವರ್ಷವು ಕುಂಭ ರಾಶಿ ಚಿಹ್ನೆಯಡಿಯಲ್ಲಿ ಜನಿಸಿದವರಿಗೆ ಅದೃಷ್ಟವನ್ನು ತರುತ್ತದೆ. ಈ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿಯು ಕುಟುಂಬ ಚಿಹ್ನೆಯ ಅಧಿಪತಿಯಾಗಿರುವುದರಿಂದ ಬಲವಾದ ಪ್ರಭಾವವನ್ನು ತೋರಿಸುತ್ತದೆ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಶನಿಯು ವಿವಿಧ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತಾನೆ. ನೀವು ಯಾವುದೇ ಕೆಲಸವನ್ನು ಧೈರ್ಯದಿಂದ ಕೈಗೊಂಡರೆ ನೀವು ಯಶಸ್ವಿಯಾಗುತ್ತೀರಿ. ಹೊಸ ವರ್ಷ 2025 ರಲ್ಲಿ ಎಲ್ಲ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸುತ್ತದೆ.
ಮೀನ: ಗುರು ಮತ್ತು ಶನಿಯ ಸಂಕ್ರಮಣದಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ರಾಹು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ಕೌಟುಂಬಿಕ ಜೀವನದಲ್ಲಿ ಬಹಳ ದಿನಗಳಿಂದ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಪ್ರೀತಿ ಮತ್ತು ಮದುವೆಯ ವಿಷಯಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ ಮುಂಬರುವ ವರ್ಷದಲ್ಲಿ ಅಂದರೆ, 2025ರಲ್ಲಿ ಯುರೋಪಿನಲ್ಲಿ ಭಾರಿ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಈ ಯುದ್ಧದಿಂದ ವ್ಯಾಪಕ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯಷ ನಷ್ಟಕ್ಕೆ ಕಾರಣವಾಗುತ್ತದೆಯಂತೆ. ಈ ಯುದ್ಧವು ಯುರೋಪ್ ಖಂಡವನ್ನೇ ಧ್ವಂಸಗೊಳಿಸುತ್ತದೆಯಂತೆ. 2025ರಲ್ಲಿ ನಡೆಯುವ ಘಟನೆಗಳು ಜಾಗತಿಕ ವಿನಾಶದ ಆರಂಭಕ್ಕೆ ಕಾರಣವಾಗಿ, 5079ಕ್ಕೆ ವಿಶ್ವವೇ ಅಂತ್ಯವಾಗಲಿದೆ. ಅಂದರೆ, 2025ರಿಂದ ಜಗತ್ತಿನ ವಿನಾಶ ಆರಂಭವಾಗಲಿದೆ ಎಂದು ಬಾಂಬಾ ವಂಗಾ ಭಯಾನಕ ಭವಿಷ್ಯ ನುಡಿದಿದ್ದಾರೆ.
ಇನ್ನು 2025ರಲ್ಲಿ ಸೈಬರ್ ದಾಳಿಯ ಮುನ್ಸೂಚನೆ ನೀಡಲಾಗಿದೆ. ನೀರು, ಶಕ್ತಿ ಮತ್ತು ಸಂವಹನ ವ್ಯವಸ್ಥೆಗಳನ್ನು ಒಳಗೊಂಡಂತೆ ಅಗತ್ಯ ಜಾಗತಿಕ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಸಂಘಟಿತ ಸೈಬರ್ ದಾಳಿ ನಡೆಯಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಜಾಗತಿಕವಾಗಿ ಹೆಚ್ಚುತ್ತಿರುವ ಸೈಬರ್ ದೋಷಗಳಿಂದ ಭವಿಷ್ಯದಲ್ಲಿ ಸೈಬರ್ ವಾರ್‌ಫೇರ್ ಮತ್ತು ಡಿಜಿಟಲ್ ಮೂಲಸೌಕರ್ಯದ ದುರ್ಬಲತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇನ್ನು ಹವಾಮಾನ ಬದಲಾವಣೆಗಳಿಗೆ ಸಂಬಂಧಿಸಿದ ಪರಿಸರ ವಿಪತ್ತುಗಳು ಕೂಡ ಬಾಬಾ ವಂಗಾರ 2025ರ ಮುನ್ಸೂಚನೆಯ ಭಾಗವಾಗಿದೆ. ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಲಿದ್ದು, ವಿನಾಶಕಾರಿ ಬರಗಳು, ಕಾಡ್ಗಿಚ್ಚುಗಳು ಮತ್ತು ಬಿರುಗಾಳಿಗಳಿಗೆ ಕಾರಣವಾಗುತ್ತದೆ ಎಂದು ವಂಗಾ ಹೇಳಿದ್ದಾರೆ. ಇದೆಲ್ಲದರ ನಡುವೆ ಪಾಸಿಟಿವ್ ಅಂಶವೇನೆಂದೆರೆ, 2025ರಲ್ಲಿ ವೈದ್ಯಕೀಯ ಪ್ರಗತಿಯನ್ನು ಬಾಬಾ ವಂಗಾ ಊಹಿಸಿದ್ದಾರೆ. ನಿರ್ದಿಷ್ಟವಾಗಿ ಲ್ಯಾಬ್ನಲ್ಲಿ ಬೆಳೆದ ಮಾನವ ಅಂಗಗಳಿಂದ ಜೀವಿತಾವಧಿಯನ್ನು ತೀವ್ರವಾಗಿ ಸುಧಾರಿಸಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ.
ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.