

Wife Donate Liver : ಪ್ರಸ್ತುತ ಸಮಾಜದಲ್ಲಿ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಕೇಳುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಮದುವೆ ಅಂದರೆ ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ದಂಪತಿ ಕಿತ್ತಾಡಿಕೊಂಡು ಡಿವೋರ್ಸ್ ಪಡೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಂಸಾರವೆಂಬುದೇ ಒಂದು ದೊಡ್ಡ ಜವಬ್ದಾರಿ ಅಂದುಕೊಂಡು ಅದರಿಂದ ನುಣುಚಿಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ.
ಆದರೆ, ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು ಎಂಬುದನ್ನು ಮರೆಯಬಾರದು. ಮದುವೆ ಎಂಬುದು ಜೀವನದ ಒಂದು ಸುಮಧುರ ಕ್ಷಣ. ಇದನ್ನು ಮಿಸ್ ಮಾಡಿಕೊಂಡರೆ ಆ ನತದೃಷ್ಟನೇ ಸರಿ. ಏಕೆಂದರೆ, ಹೆಂಡತಿಯಾದವಳು ಜೀವನಕ್ಕೆ ಸಂಗಾತಿ ಮಾತ್ರವಲ್ಲದೆ ನಿಮ್ಮ ಅದೃಷ್ಟವನ್ನು ಬದಲಿಸುವ ದೇವತೆಯಾಗಿ ಬರುತ್ತಾಳೆ ಎಂಬುದು ನೆನಪಿರಲಿ. ಏಕೆಂದರೆ, ಹುಟ್ಟಿದ ಮನೆಯನ್ನು ತೊರೆದು ಗಂಡನನ್ನು ನಂಬಿ ಬಂದು ಆತನಿಗಾಗಿ ಪ್ರೀತಿ ಹಾಗೂ ವಾತ್ಸಲ್ಯವನ್ನು ಧಾರೆ ಎರೆಯುವ ಮೂಲಕ ಗಂಡನ ಜೀವನವನ್ನು ಸಾರ್ಥಕವಾಗಿಸುತ್ತಾಳೆ.
ಹೆಂಡತಿ ಎಂದರೆ ಜೀವನದ ಒಂದು ಪಾತ್ರವಲ್ಲ, ಗಂಡನ ಸುಖದ ಮೂಲ, ಅವನ ನೋವುಗಳನ್ನು ನಿವಾರಿಸುವ ಸಾಂತ್ವನ, ಪ್ರತಿ ಯಶಸ್ಸಿನ ಹಿಂದೆ ನಿಲ್ಲುವ ವ್ಯಕ್ತಿ. ಆಕೆ ಕುಟುಂಬವನ್ನು ನಿರ್ಮಿಸುವುದು ಮಾತ್ರವಲ್ಲ, ಸಂತೋಷದ ಜಗತ್ತನ್ನೇ ಸೃಷ್ಟಿಸುತ್ತಾಳೆ. ಹೆಂಡತಿಯು ತನ್ನ ಸಣ್ಣ ಕಾರ್ಯಗಳಿಂದಲೂ ಗಂಡನ ಜೀವನವನ್ನು ಶಾಂತ ಮತ್ತು ಸುಂದರವಾಗಿಸುತ್ತಾಳೆ. ಕಷ್ಟಕಾಲದಲ್ಲಿ ಧೈರ್ಯ ತುಂಬುವ ಸ್ನೇಹಿತೆಯಾಗಿ, ಮಾರ್ಗದರ್ಶಕಿಯಾಗಿ ಅವಳು ತೋರಿಸುವ ಪ್ರೀತಿ, ವಿಶ್ವಾಸ, ಕೊಡುವ ಬೆಂಬಲ ನಾವು ಜೀವನದಲ್ಲಿ ನಡೆಯುವ ದಾರಿಯನ್ನು ತೋರಿಸುತ್ತದೆ. ಒಂದು ಪದದಲ್ಲಿ ಹೇಳಬೇಕೆಂದರೆ ಅರ್ಧಾಂಗಿ ಎನಿಸಿಕೊಳ್ಳುವ ಹೆಂಡತಿಯು ಜೀವನದ ಹೃದಯ ಬಡಿತ ಇದ್ದಂತೆ. ಈ ಮಾತಗಳನ್ನು ಲಾವಣ್ಯ ಸಾಬೀತು ಮಾಡಿದ್ದಾಳೆ.
ತೆಲಂಗಾಣದ ಖಮ್ಮಮ್ ಜಿಲ್ಲೆಯ ರಘುನಾಥಪಾಲೆಂ ಮಂಡಲದ ಪೆದ್ದ ಎರ್ಲಪುಡಿ ಗ್ರಾಮದ ಶ್ರೀನಿವಾಸ್ ಎಂಬ ವ್ಯಕ್ತಿ ಖಮ್ಮಮ್ನ ಎಪಿಜಿವಿಬಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರೆ. ಅವರ ಪತ್ನಿ ಲಾವಣ್ಯ ಎಲ್‌ಎಲ್‌ಬಿ ಅಂತಿಮ ವರ್ಷ ಓದುತ್ತಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಯಾವುದೇ ತೊಂದರೆಗಳಿಲ್ಲದೆ ನೆಮ್ಮದಿಯಿಂದ ಸಾಗುತ್ತಿದ್ದ ಅವರ ಜೀವನದಲ್ಲಿ ಅನಿರೀಕ್ಷಿತ ಅತಿಥಿಯಂತೆ ಆರೋಗ್ಯ ಸಮಸ್ಯೆಗಳು ಬಂದವು.
ಕೆಲವು ವರ್ಷಗಳ ಹಿಂದೆ ಶ್ರೀನಿವಾಸ್, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಜಾಂಡೀಸ್ನಿಂದಾಗಿ ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದರು. ಇದರಿಂದ ಏನು ಮಾಡಬೇಕೆಂದು ತೋಚದೆ ದಂಪತಿ ತಬ್ಬಿಬ್ಬಾದರು. ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿ, ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಹಲವು ಪರೀಕ್ಷೆಗಳ ನಂತರ ಲಿವರ್ ಕಸಿ ಮಾಡಿದರೆ ಶ್ರೀನಿವಾಸ್ ಬದುಕುವ ಅವಕಾಶವಿದೆ ಎಂದು ವೈದ್ಯರು ತೀರ್ಮಾನಿಸಿದರು. ಬಳಿಕ ಲಿವರ್ ದಾನಕ್ಕಾಗಿ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ಸಂಪರ್ಕಿಸಿದರು. ಆದರೆ, ಯಾರೊಬ್ಬರು ಸಹಾಯಕ್ಕಾಗಿ ಮುಂದೆ ಬಾರದಿದ್ದಾಗ ದಂಪತಿ ಹತಾಶರಾದರು.
ಕೊನೆಗೆ ಲಾವಣ್ಯ ಅವರೇ ತಮ್ಮ ಪತಿಯನ್ನು ರಕ್ಷಿಸಲು ಮುಂದಾದರು. ಪತಿಗಾಗಿ ತಮ್ಮ ಲಿವರ್ ಭಾಗವನ್ನು ದಾನ ಮಾಡುವುದಾಗಿ ಹೇಳಿದರು. ವೈದ್ಯರು ಒಂದಷ್ಟು ಪರೀಕ್ಷೆ ಮಾಡಿ ಲಿವರ್ ಅಳವಡಿಸಬಹುದು ಎಂದು ದೃಢಪಡಿಸಿದರು. ಬಳಿಕ ಲಾವಣ್ಯ ಅವರ ಯಕೃತ್ತಿನ 65 ಪ್ರತಿಶತ ಭಾಗವನ್ನು ತೆಗೆದು ಶ್ರೀನಿವಾಸ್ಗೆ ಹಾಕಲಾಯಿತು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಪತಿ ಮತ್ತು ಪತ್ನಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ಶ್ರೀನಿವಾಸ್ ಮತ್ತು ಲಾವಣ್ಯ ಇಬ್ಬರೂ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ಘಟನೆಯಲ್ಲಿ ಲಾವಣ್ಯ ತನ್ನ ಪತಿಗೆ ಪುನರ್ಜನ್ಮ ನೀಡಿ ಅರ್ಧಾಂಗಿ ಪದಕ್ಕೆ ನಿಜವಾದ ಅರ್ಥವನ್ನು ನೀಡಿದ್ದಾರೆ. ಲಾವಣ್ಯ ಅವರ ಧೈರ್ಯ ಮತ್ತು ತ್ಯಾಗ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಲಾವಣ್ಯಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. (ಏಜೆನ್ಸೀಸ್)