

Liver Health : ಅನೇಕ ಜನರು ನಿಯಮಿತವಾಗಿ ಕೂಲ್ ಡ್ರಿಂಕ್ಸ್ ಸೇವಿಸುತ್ತಾರೆ. ಪ್ರಯಾಣ ಮಾಡುವಾಗ, ಕೆಲಸ ಮಾಡುವಾಗ, ಹುಟ್ಟುಹಬ್ಬ ಆಚರಣೆ ಮಾಡುವಾಗ ಹೀಗೆ ಒಂದಿಲ್ಲೊಂದು ಸಂದರ್ಭದಲ್ಲಿ ಕೂಲ್ ಡ್ರಿಂಕ್ಸ್ ಸೇವನೆ ಮಾಡುತ್ತಾರೆ. ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಅದನ್ನು ಕುಡಿಯುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ ಮತ್ತು ಕೂಲ್ ಡ್ರಿಂಕ್ಸ್ ಕಂಪನಿಗಳ ಆದಾಯವು ಕೂಡ ಹೆಚ್ಚಾಗುತ್ತಿದೆ.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂಲ್ ಡ್ರಿಂಕ್ಸ್ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಈ ಒಂದು ಕೆಟ್ಟ ಅಭ್ಯಾಸ ಎಂಬುದನ್ನು ಮರೆಯಬೇಡಿ. ಕೂಲ್ಡ್ರಿಂಕ್ಸ್ ಕುಡಿಯುವುದರಿಂದ ದೇಹದಲ್ಲಿನ ಲಿವರ್ಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಹೌದು, ನೀವು ಕೇಳಿದ್ದು ಸರಿಯಿದೆ. ಲಿವರ್ಗೆ ತುಂಬಾ ಹಾನಿ ಉಂಟುಮಾಡುವ ಕೆಲವು ಪಾನೀಯಗಳಿವೆ. ಅವುಗಳನ್ನು ಸೇವಿಸಿದರೆ ಕಾಲಾನಂತರದಲ್ಲಿ ಲಿವರ್ಗೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುತ್ತವೆ.
ಲಿವರ್ ನಮ್ಮ ದೇಹದಲ್ಲಿ ಪ್ರಮುಖ ಅಂಗವಾಗಿದೆ. ಇದು ತ್ಯಾಜ್ಯವನ್ನು ಫಿಲ್ಟರ್ ಮಾಡಲು, ಕೊಬ್ಬನ್ನು ಚಯಾಪಚಯಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ಬೆಂಬಲಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಕುಡಿಯುವ ಕೆಲವು ಕೂಲ್ ಡ್ರಿಂಕ್ಸ್ ಲಿವರ್ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಹಾಗಾದರೆ, ಲಿವರ್ಗೆ ಹಾನಿಯುಂಟುಮಾಡುವ ಪಾನೀಯಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಸೋಡಾ: ಇದು ಕೇವಲ ಸಿಹಿ ಪಾನೀಯವಲ್ಲ. ಇದರಲ್ಲಿ ಸೇರಿಸಲಾದ ಸಕ್ಕರೆ ಮತ್ತು ಕೃತಕ ರಾಸಾಯನಿಕಗಳು ಲಿವರ್ ಮೇಲೆ ಪರಿಣಾಮ ಬೀರುತ್ತವೆ. ಕೆನಡಿಯನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತಂಪು ಪಾನೀಯಗಳ ನಿಯಮಿತ ಸೇವನೆಯು ಕೊಬ್ಬಿನ ಲಿವರ್ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಎಂದು ಕರೆಯಲಾಗುತ್ತದೆ. ಲಿವರ್ನಲ್ಲಿ ಕೊಬ್ಬು ಶೇಖರಣೆಯಾಗುವುದು ಹಲವು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಎನರ್ಜಿ ಡ್ರಿಂಕ್ಸ್: ಅನೇಕ ಜನರು ಶಕ್ತಿಗಾಗಿ ಎನರ್ಜಿ ಡ್ರಿಂಕ್ಸ್ ಕುಡಿಯುತ್ತಾರೆ. ಆದರೆ, ಇವು ನಿಮ್ಮ ಲಿವರ್ಗೆ ತುಂಬಾ ಹಾನಿಕಾರಕ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನದ ಪ್ರಕಾರ, ಹೆಚ್ಚು ಎನರ್ಜಿ ಡ್ರಿಂಕ್ ಕುಡಿಯುವುದರಿಂದ ಲಿವರ್ಗೆ ಹಾನಿಯಾಗುತ್ತದೆ. ಈ ಪಾನೀಯಗಳಲ್ಲಿ ಹೆಚ್ಚಿನ ಪ್ರಮಾಣದ ಟೌರಿನ್, ಕೆಫೀನ್ ಮತ್ತು ಇತರ ಉತ್ತೇಜಕಗಳು ಲಿವರ್ ಮೇಲೆ ಒತ್ತಡವನ್ನು ಉಂಟುಮಾಡುತ್ತವೆ. ಇದರೊಂದಿಗೆ ದೀರ್ಘಾವಧಿಯಲ್ಲಿ ಲಿವರ್ಗೆ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಲಿವರ್ ಕಸಿಗೂ ಕಾರಣವಾಗುತ್ತದೆ.
ಮದ್ಯ: ಅತಿಯಾದ ಮದ್ಯ ಸೇವನೆಯು ಲಿವರ್ಗೆ ಹಾನಿ ಮಾಡುತ್ತದೆ ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಮದ್ಯಯುಕ್ತ ಲಿವರ್ ಕಾಯಿಲೆಯು ಅತಿಯಾದ ಮದ್ಯ ಸೇವನೆಯಿಂದ ಉಂಟಾಗುತ್ತದೆ. ಇದು ಉರಿಯೂತ ಮತ್ತು ಲಿವರ್ ವೈಫಲ್ಯಕ್ಕೆ ಕಾರಣವಾಗುತ್ತದೆ.
ಸಕ್ಕರೆ ತುಂಬಿದ ಪಾನೀಯಗಳು: ಸಕ್ಕರೆಭರಿತ ಚಹಾ ಹಾಗೂ ಹಣ್ಣಿನ ಜ್ಯೂಸ್ ಮತ್ತು ಇತರೆ ಸಕ್ಕರೆ ಪಾನೀಯಗಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಹೊಂದಿರುತ್ತವೆ. ಇದು ಲಿವರ್ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಈ ಸಕ್ಕರೆ ಲಿವರ್ನಲ್ಲಿ ಕೊಬ್ಬಾಗಿ ಬದಲಾಗುತ್ತದೆ. ಇದು NAFLD ಅಪಾಯವನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ ಲಿವರ್, ಉರಿಯೂತ, ಫೈಬ್ರೋಸಿಸ್ ಅಥವಾ ಸಿರೋಸಿಸ್ನಂತಹ ಗಂಭೀರ ತೊಡಕುಗಳನ್ನು ಉಂಟುಮಾಡಬಹುದು. ಹಾಗಾಗಿ ಆರೋಗ್ಯವಾಗಿರಲು ಈ ಪಾನೀಯಗಳನ್ನು ದೂರವಿಡಬೇಕು.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ. (ಏಜೆನ್ಸೀಸ್)