ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಅಸಿಂಧು ಮತ್ತು ಕಾನೂನು ಬಾಹಿರ ಎಂದು ಪಾಕ್ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟ ದಿನದ ಬೆನ್ನಲ್ಲೇ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ (ಮೇ 12) ಇಮ್ರಾನ್ ಖಾನ್ಗೆ 2 ವಾರಗಳ ಜಾಮೀನು ಮಂಜೂರು ಮಾಡಿದೆ.
ಇಮ್ರಾನ್ ಖಾನ್ ಬಂಧನವನ್ನು ಇಸ್ಲಮಾಬಾದ್ ಎತ್ತಿಹಿಡಿದಿತ್ತು. ಆದರೆ, ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠವೂ ಇಮ್ರಾನ್ ಖಾನ್ ಬಂಧನವನ್ನು ಕಾನೂನು ಬಾಹಿರ ಎಂದು ಹೇಳಿ ತಕ್ಷಣ ಬಿಡುಗಡೆ ಮಾಡುವಂತೆ ಗುರುವಾರ ಆದೇಶ ಹೊರಡಿಸಿತು.
ಇಂದು ನಡೆದ ವಿಚಾರಣೆ ಭದ್ರತಾ ಕಾರಣದಿಂದ ಎರಡು ಗಂಟೆ ವಿಳಂಬವಾಯಿತು. ಬೆಂಗಾವಲು ಪಡೆಯೊಂದಿಗೆ ಇಸ್ಲಮಾಬಾದ್ ಹೈಕೋರ್ಟ್ಗೆ ಆಗಮಿಸಿದ ಇಮ್ರಾನ್ ಖಾನ್ ಅವರನ್ನು ಡಜನ್ಗಟ್ಟಲೆ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಕೋರ್ಟ್ ಹಾಲ್ಗೆ ಸುರಕ್ಷಿತವಾಗಿ ಕರೆದೊಯ್ದರು.
ಇದಾದ ಬಳಿಕ ಸುಪ್ರೀಂಕೋರ್ಟ್ ನಿರ್ದೇಶನದಂತೆ ಇಮ್ರಾನ್ ಖಾನ್ ಅವರಿಗೆ ಇಸ್ಲಮಾಬಾದ್ ಹೈಕೋರ್ಟ್, ಎರಡು ವಾರಗಳ ಮಧ್ಯಂತರ ಜಾಮೀನು ನೀಡಿತು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸದಂತೆ ನ್ಯಾಯಾಲಯ ಸೂಚನೆ ನೀಡಿತು. ಜಾಮೀನು ಪಡೆದು ನ್ಯಾಯಾಲಯದಿಂದ ಹೊರಬಂದ ಖಾನ್, ತನ್ನ ಬೆಂಬಲಿಗರತ್ತ ಕೈಬೀಸಿದರು.
ಮಂಗಳವಾರ ಇಮ್ರಾನ್ ಖಾನ್ ಬಂಧನದ ನಂತರ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇಲ್ಲಿಯವರೆಗೂ ಅನೇಕ ಸರ್ಕಾರಿ ಹಾಗು ಖಾಸಗಿ ಸ್ವತ್ತುಗಳಿಗೆ ಹಾನಿಯಾಗಿದೆ. ಪಾಕಿಸ್ತಾನದ ಹಲವೆಡೆ ಇಮ್ರಾನ್ ಖಾನ್ ಬೆಂಬಲಿಗರು ಕಲ್ಲುತೂರಾಟ ಹಾಗೂ ವಾಹನಗಿಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. (ಏಜೆನ್ಸೀಸ್)