ಜಿಲ್ಲೆ

ಡಿಜೆ ಹಳ್ಳಿ ಗಲಭೆಗೆ ಟ್ವಿಸ್ಟ್‌: ಕಿಡಿಕೇಡಿಗಳ ಫೋನ್‌ ಕಾಲ್‌ ನೋಡಿ ಪೊಲೀಸರೇ ದಂಗು!

ಬೆಂಗಳೂರು: ಫೇಸ್‌ಬುಕ್‌ಗೆ ಹಾಕಲಾದ ಪೋಸ್ಟ್‌ ಒಂದಕ್ಕೆ ಬರೆದಿರುವ ಕಮೆಂಟ್‌ ನೆಪಮಾಡಿಕೊಂಡು ಬೆಂಗಳೂರಿನ ಡಿ.ಜೆ.ಹಳ್ಳಿ, ಕೆಜಿ ಹಳ್ಳಿ, ಕಾವಲಬೈರಸಂದ್ರದಲ್ಲಿ ಕಿಡಿಗೇಡಿಗಳು ಸೃಷ್ಟಿಸಿದ್ದ ಗಲಭೆಗಳಿಗೆ ದಿನದಿಂದ ದಿನಕ್ಕೆ ಹೊಸರೂಪ ಬರುತ್ತಲೇ ಸಾಗಿದೆ.

ಹಿಂದೂ ದೇವಸ್ಥಾನವನ್ನು ರಕ್ಷಣೆ ಮಾಡಿದ ಕೆಲವರು ಮಾಡಿದ್ದ ವಿಡಿಯೋದ ಕೊನೆಯ ಭಾಗದಲ್ಲಿ ‘ಜಲ್ದಿ ಜಲ್ದಿ ಅಪ್‌ಲೋಡ್‌ ಕರೋ (ಬೇಗ ಬೇಗ ಅಪ್‌ಲೋಡ್‌ ಮಾಡು)’ ಎಂದು ಹೇಳಿರುವ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಇದರ ಬಗ್ಗೆ ನೆಟ್ಟಿಗರು ಸಾಕಷ್ಟು ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ.

ಅದರ ನಡುವೆಯೇ ಇದೀಗ ಗಲಭೆ ನಡೆದಿರುವ ಸಮಯದ ಆಸುಪಾಸಿನ ವೇಳೆ ಗಲಭೆಗೆ ಜನರನ್ನು ಸೇರಿಸುವ ಸಂಬಂಧ ಆರೋಪಿಗಳು ಮಾಡಿರುವ ಫೋನ್‌ಕಾಲ್‌ ಸಂಖ್ಯೆಗಳನ್ನು ನೋಡಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಬೆಂಕಿ ಹಚ್ಚಿ ಆವಾಂತರ ಮಾಡಿದ್ದ ದಿನ 30ಕ್ಕೂ ಅಧಿಕ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ಪತ್ತೆ ಹಚ್ಚಿದಾಗ ಘಟನೆ ನಡೆದ ಸ್ಥಳಗಳಲ್ಲಿ ಆರೋಪಿಗಳಿಂದಲೇ ಸಾವಿರಾರು ಕಾಲ್‌ಗಳು ಹೋಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಫೋನ್‌ ಕಾಲ್‌ಗಳು ಎಲ್ಲೆಲ್ಲಿ ಹೋಗಿವೆ, ಯಾರಿಗೆ ಮಾಡಲಾಗಿದೆ ಎಂಬ ಬಗ್ಗೆ ಕಂಡುಹಿಡಿಯಲು ಅವುಗಳನ್ನು ಡಿ-ಕೋಡಿಂಗ್‌ ಮಾಡುವ ಕಾರ್ಯಗಳು ತಜ್ಞರಿಗೆ ಶುರುವಾಗಿದೆ.

ಆರೋಪಿ ಮುಜಾಮ್ಮಿಲ್ ಹೇಳಿಕೆ ಆಧರಿಸಿ ಸಾರಾಯಿಪಾಳ್ಯದಲ್ಲಿ 25ಕ್ಕೂ ಹೆಚ್ಚು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದಾಗಲೇ ಬಂಧಿತರಾಗಿರುವ ಕಾರ್ಪೊರೇಟರ್ ಪತಿ ಖಲೀಂ ಪಾಷಾ, ಮೊಬೈಲ್‍ನಲ್ಲಿ ಇಡೀ ಗಲಭೆಯ ಪಿನ್ ಟು ಪಿನ್ ಬ್ಲೂ ಪ್ರಿಂಟ್ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದರ ಜತೆಯಲ್ಲಿಯೇ ಆರೋಪಿಗಳೇ ಸ್ಥಳದಲ್ಲಿ ಮಾಡಿರುವ ಮೊಬೈಲ್‌ ಫೋನ್‌ಗಳ ವಿಡಿಯೋಗಳಿಂದಲೂ ಸಾಕಷ್ಟು ಪುರಾವೆಗಳು ಪೊಲೀಸರಿಗೆ ಸಿಕ್ಕಿವೆ. ಸ್ಥಳದಲ್ಲಿದ್ದ ಕೆಲವೊಂದು ಸಿಸಿಟಿವಿಗಳನ್ನು ಘಟನೆ ನಡೆಸುವ ಮುನ್ನವೇ ಕಿಡಿಗೇಡಿಗಳು ಧ್ವಂಸ ಮಾಡಿದ್ದರು.

ಆದರೆ ಇದನ್ನು ಹೊರತುಪಡಿಸಿ ಸುಮಾರು 800 ಸಿಸಿಟಿವಿ ಫುಟೇಜ್‌ಗಳು ಪೊಲೀಸರಿಗೆ ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ.

ಗಲಭೆ ನಡೆಸಲು ಸಾಕಷ್ಟು ಮುಂಚಿತವಾಗಿಯೇ ಯೋಜನೆ ರೂಪಿಸಿರುವುದು ಇದಾಗಲೇ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಇದೀಗ, ಗಲಭೆಕೋರರನ್ನು ಸೇರಿಸುವ ಸಲುವಾಗಿ ಹಲವರು ಫೇಸ್‌ಬುಕ್‌ ಲೈವ್‌ಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಐದು ಸಾವಿರಕ್ಕೂ ಅಧಿಕ ಪುಂಡರನ್ನು ಗಲಭೆ, ದೋಂಬಿ ಸೃಷ್ಟಿಸುವ ಸಂಬಂಧ ಒಟ್ಟಿಗೆ ಸೇರಿಸಲು ಫೇಸ್‌ಬುಕ್‌ ಲೈವ್‌ ಬಳಕೆ ಮಾಡಿರುವ ಅಂಶಗಳು ಕೂಡ ಪೊಲೀಸರಿಗೆ ತಿಳಿದುಬಂದಿದೆ.

ದಾಳಿ ವೇಳೆ ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.