ಸಿನಿವಾಣಿ

ಇಂದಿನಿಂದ ಸಿನಿಮಾ ಪ್ರದರ್ಶನ ಶುರು: ರಾಜ್ಯದ ಕೆಲ ಏಕಪರದೆ, ಮಲ್ಟಿಪ್ಲೆಕ್ಸ್ ಮಾತ್ರ ಆರಂಭ

ಪ್ರಸಾದ್​ ಶೆಟ್ಟಿಗಾರ್​

ಬೆಂಗಳೂರು: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಪ್ರದರ್ಶನ, ಅನ್​ಲಾಕ್ 5.0 ಮಾರ್ಗಸೂಚಿ ಅನ್ವಯ ಗುರುವಾರದಿಂದ (ಆ.15) ಮತ್ತೆ ಪ್ರಾರಂಭವಾಗಲಿದೆ. ಮೊದಲ ಹಂತವಾಗಿ ಬೆಂಗಳೂರು ಸೇರಿ ರಾಜ್ಯದ ಹಲವು ನಗರಗಳಲ್ಲಿ ಏಕಪರದೆ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರಪ್ರದರ್ಶನ ಶುರುವಾಗಲಿದೆ. ಕೆಲ ಚಿತ್ರಗಳು ಗುರುವಾರ ಬಿಡುಗಡೆಯಾದರೆ, ಇನ್ನೂ ಕೆಲವು ಶುಕ್ರವಾರ (ಅ 16) ರಿಲೀಸ್ ಆಗಲಿವೆ. ಪ್ರಾಯೋಗಿಕವಾಗಿ ಈಗಾಗಲೇ ಬಿಡುಗಡೆಯಾಗಿದ್ದ ‘ಲವ್ ಮಾಕ್​ಟೇಲ್’, ‘ಶಿವಾಜಿ ಸುರತ್ಕಲ್’, ‘ಶಿವಾರ್ಜುನ’, ‘ಮಾಯಾಬಜಾರ್ 2016’, ‘ಕಾಣದಂತೆ ಮಾಯವಾದನು’ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ಬರೀ ಕನ್ನಡ ಚಿತ್ರಗಳಷ್ಟೇ ಅಲ್ಲ, ‘ಪಿಎಂ ನರೇಂದ್ರ ಮೋದಿ’, ‘ತಾನಾಜಿ’, ‘ಥಪ್ಪಡ್’, ‘ಮಲಾಂಗ್’ ಮುಂತಾದ ಹಿಂದಿ ಚಿತ್ರಗಳು, ತೆಲುಗು-ತಮಿಳು ಸಿನಿಮಾಗಳೂ ಬಿಡುಗಡೆಯಾಗುತ್ತಿವೆ.

ರಾಜ್ಯಾದ್ಯಂತ ಬಿಡುಗಡೆ ಇಲ್ಲ ಚಿತ್ರಪ್ರದರ್ಶಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಬೇರೆ ಭಾಗಗಳಲ್ಲಿರುವ ಹಲವು ಚಿತ್ರಮಂದಿರದವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರಪ್ರದರ್ಶನ ಪ್ರಾರಂಭಿಸುವ ಯೋಚನೆಯಲ್ಲಿದ್ದಾರೆ.
ಶುಕ್ರವಾರದಿಂದ ಕೆಲ ಕಡೆ ಚಿತ್ರಪ್ರದರ್ಶನ ಪ್ರಾರಂಭವಾಗಲಿದೆ. ಕೆಲವೆಡೆ ಸ್ಯಾನಿಟೈಸಿಂಗ್ ಇನ್ನಿತರ ಕೆಲಸಗಳು ನಡೆಯುತ್ತಿರುವುದರಿಂದ ಮುಂದಿನ ವಾರ ಅಥವಾ ಅಕ್ಟೋಬರ್ ಕೊನೇ ವಾರದಿಂದ ಚಿತ್ರಪ್ರದರ್ಶನ ಪ್ರಾರಂಭವಾಗಲಿದೆ | ಕೆ.ವಿ.ಚಂದ್ರಶೇಖರ್ ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘ
ಯಾರೆಲ್ಲ ಸಿದ್ಧರಿದ್ದಾರೋ ಅವರೆಲ್ಲ ಚಿತ್ರಪ್ರದರ್ಶನ ಮಾಡುತ್ತಾರೆ. ಸದ್ಯಕ್ಕೆ ಜನರ ಪ್ರತಿಕ್ರಿಯೆ ಬಹಳ ಮುಖ್ಯ. ಮರುಬಿಡುಗಡೆಯಾಗುವ ಚಿತ್ರಗಳಿಗೆ ನಿರಂತರವಾಗಿ ಜನ ಬಂದರೆ, ಚಿತ್ರಪ್ರದರ್ಶನ ಮುಂದುವರಿಯುತ್ತದೆ. ಮುಂದಿನ ವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ. | ಜೈರಾಜ್ ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಪ್ರದರ್ಶಕರ ಮಂಡಳಿಯು ಸರ್ಕಾರ ಮತ್ತು ನಿರ್ವಪಕರ ಎದುರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಇವುಗಳು ಈಡೇರದ ಹೊರತು ಜಿಲ್ಲೆಯಲ್ಲಿ ಚಿತ್ರಪ್ರದರ್ಶನ ಮಾಡದಿರಲು ನಿರ್ಧರಿಸಿದೆ | ಜಿ.ಸುರೇಂದ್ರನಾಥ ಶ್ರೀರಾಮ ಚಿತ್ರಮಂದಿರ ಮಾಲೀಕರು, ಕರ್ನಾಟಕ ಚಿತ್ರಪ್ರದರ್ಶಕರ ಮಹಾಮಂಡಲ ಕಾರ್ಯದರ್ಶಿ (ದಕ್ಷಿಣ) 

ಇದನ್ನೂ ಓದಿ: ಅಬ್ದುಲ್​ ಕಲಾಂ ಅವರದ್ದು ಕಿರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುಣ… ಆನ್​ಲೈನ್ ಬುಕ್ಕಿಂಗ್: ಈಗಾಗಲೇ ಬುಕ್​ವೆುೖಶೋನಲ್ಲಿ ಆನ್​ಲೈನ್ ಬುಕ್ಕಿಂಗ್ ಶುರುವಾಗಿದ್ದು, ಯಾವ್ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಮಾಹಿತಿ ಲಭ್ಯವಿದೆ. ಪ್ರೇಕ್ಷಕರು ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಗೊಂದಲ ಇರುವುದರಿಂದ, ಸದ್ಯಕ್ಕೆ ಮೊದಲೆರೆಡು ದಿನಗಳ ಬುಕ್ಕಿಂಗ್ ಮಾತ್ರ ಇದೆ. ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಬುಕ್ಕಿಂಗ್ ಮುಂದುವರಿಸಲಾಗುತ್ತದೆ.

ಪ್ರವೇಶ ದರ ಕಡಿತ: ಇದಕ್ಕೂ ಮುನ್ನ ಏಕಪರದೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಬೇರೆಬೇರೆ ಪ್ರವೇಶ ದರವಿತ್ತು. ಲಾಕ್​ಡೌನ್ ನಂತರ ಜನರನ್ನು ಸೆಳೆಯುವ ಸಲುವಾಗಿ ಎರಡರಲ್ಲೂ ಪ್ರವೇಶ ದರ ಕಡಿತಗೊಳಿಸಲಾಗಿದೆ. ಪ್ರಮುಖವಾಗಿ ಕೆಲವು ಏಕಪರದೆಯ ಚಿತ್ರಮಂದಿರಗಳಲ್ಲಿ ಬಾಲ್ಕನಿಯ ಪ್ರವೇಶ ದರವನ್ನು 50 ರೂ. ಮತ್ತು ಸೆಕೆಂಡ್ ಕ್ಲಾಸ್​ಗೆ 40 ರೂ.ಗಳಿಗೆ ನಿಗದಿಪಡಿಸಲಾಗಿದೆ.

ಸೇವಾಶುಲ್ಕ ಕಡಿತಗೊಳಿಸಿದ ಕ್ಯೂಬ್: ಸರ್ವೀಸ್ ಪ್ರೊವೈಡರ್​ಗಳು ಸೇವಾಶುಲ್ಕ ಕಡಿತಗೊಳಿಸಬೇಕು ಎಂದು ನಿರ್ವಪಕರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಯುಎಫ್​ಓ, ಕ್ಯೂಬ್ ಮುಂತಾದ ಸರ್ವೀಸ್ ಪ್ರೊವೈಡರ್​ಗಳಿಂದ ಯಾವುದೇ ಉತ್ತರ ಬಂದಿರಲಿಲ್ಲ. ಇದೀಗ ಕೆಲವು ಷರತ್ತುಗಳನ್ನು ಅನ್ವಯಿಸಿ ಸೇವಾಶುಲ್ಕ ಕಡಿತಗೊಳಿಸುವುದಕ್ಕೆ ಮುಂದಾಗಿದ್ದಾರೆ.