More

    ಅಬ್ದುಲ್​ ಕಲಾಂ ಅವರದ್ದು ಕಿರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುಣ…

     ಇಂದು ಕಲಾಂ ಜನ್ಮದಿನದ ನಿಮಿತ್ತ ಅವರ ಜತೆಗಿದ್ದ ಕಿರಿಯ ವಿಜ್ಞಾನಿಯ ನೆನಪುಗಳು

    ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಎಂದ ಕೂಡಲೆ, ಅವರ ಜತೆಗೆ ಕಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದ ಅನುಭವವಿರುವ ಬೆಂಗಳೂರಿನ ಲೋಹಶಾಸ್ತ್ರ ವಿಜ್ಞಾನಿ ಪಿ. ರಘೋತ್ತಮ ರಾವ್ ಅವರಿಗೆ ನೆನಪಿಗೆ ಬರುವುದು ಕಲಾಂ ಅವರ ಸರಳ ವ್ಯಕ್ತಿತ್ವ. ಇಸ್ರೊದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಕಲಾಂ ಕಿರಿಯರನ್ನು ನಡೆಸಿಕೊಳ್ಳುತ್ತಿದ್ದ ಬಗೆ, ಅವರಿಗೆ ನೀಡುತ್ತಿದ್ದ ಪ್ರಾಮುಖ್ಯವನ್ನು ರಘೋತ್ತಮ ರಾವ್ ನೆನಪಿಸಿಕೊಂಡಿದ್ದಾರೆ.

    ಅಬ್ದುಲ್​ ಕಲಾಂ ಅವರದ್ದು ಕಿರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುಣ...| ಪಿ. ರಘೋತ್ತಮ ರಾವ್

    ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ(ಡಿಆರ್​ಡಿಒ) ಕೆಲಸ ಮಾಡುತ್ತಿದ್ದ ನನ್ನನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೊ) ಉಪಗ್ರಹ ಉಡಾವಣಾ ವಾಹನ(ಎಸ್​ಎಲ್​ವಿ) ಯೋಜನೆಗೆ ನಿಯೋಜನೆ ಮಾಡಲಾಯಿತು. ಈಗ ಭಾರತದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲು ಬಳಸುತ್ತಿರುವ ಪಿಎಸ್​ಎಲ್​ವಿ, ಜಿಎಸ್​ಎಲ್​ವಿ ವಾಹನಗಳ ಮೂಲ ಕಾರ್ಯ ಆರಂಭವಾಗಿದ್ದು ಆಗ. ಮೊದಲ ಎಸ್​ಎಲ್​ವಿ ಯೋಜನೆಯ ಯೋಜನಾ ನಿರ್ದೇಶಕರಾಗಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿದ್ದರು. ಯೋಜನೆಯ ಗುಣಮಟ್ಟ ನಿಯಂತ್ರಣ(ಕ್ವಾಲಿಟಿ ಕಂಟ್ರೋಲ್) ವಿಭಾಗಕ್ಕೆ ನಾನು ಹಾಗೂ ಸ್ನೇಹಿತ ಶ್ರೀನಿವಾಸ ಉಪಾಧ್ಯಾಯ 1978ರಲ್ಲಿ ಸೇರಿಕೊಂಡೆವು. ಕೆಲಸಕ್ಕೆ ಸೇರಿಕೊಂಡ ತಕ್ಷಣ ಯೋಜನಾ ನಿರ್ದೇಶಕರಿಗೆ ವರದಿ ಮಾಡಿಕೊಳ್ಳಬೇಕಿತ್ತಾದರೂ ಕಲಾಂ ಊರಿನಲ್ಲಿಲ್ಲದ ಕಾರಣ ಸಾಧ್ಯವಾಗಿರಲಿಲ್ಲ. ಎರಡು ದಿನದ ನಂತರ ಮಧ್ಯಾಹ್ನ ಸಹೋದ್ಯೋಗಿಗಳೊಂದಿಗೆ ಊಟ ಮುಗಿಸಿ ಕುಳಿತಿದ್ದೆ. ಯೋಜನಾ ನಿರ್ದೇಶಕರು ಎಂಬ ಸ್ಥಾನವನ್ನೂ ಲೆಕ್ಕಿಸದೆ ನೇರ ನನ್ನ ಬಳಿ ಬಂದರು. ನಾನು ಎದ್ದು ನಿಂತು ನಮಸ್ಕರಿಸಿ, ಕುರ್ಚಿ ಬಿಟ್ಟುಕೊಡಲು ಮುಂದಾದೆ. ‘ಅದು ನಿನ್ನ ಕುರ್ಚಿ, ಕುಳಿತುಕೊ’ ಎನ್ನುತ್ತ ಅತ್ತಲಿಂದ ತಾವೇ ಇನ್ನೊಂದು ಕುರ್ಚಿ ಎಳೆದುಕೊಂಡು ಕುಳಿತರು. ನನ್ನ ಹಿನ್ನೆಲೆ, ಪರಿಚಯದ ನಂತರ, ‘ಯೋಜನೆಯಲ್ಲಿ ನಿನ್ನ ವಿಭಾಗದ ಪಾತ್ರ ಮಹತ್ವದ್ದು. ಈ ವಿಭಾಗದಲ್ಲಿ ನೀನು ಅತಿ ಶ್ರೇಷ್ಠ ವ್ಯಕ್ತಿಯಾಗಬೇಕು. ಈ ವಿಭಾಗದ ಪದಕೋಶದಲ್ಲಿರುವ ಕೊನೆಯ ಪದವೂ ನಿನಗೆ ತಿಳಿದಿರಬೇಕು’ ಎಂದು ಹುರಿದುಂಬಿಸಿದರು.

    ಯೋಜನೆ ಸಲುವಾಗಿ ವಿವಿಧ ವಿಭಾಗಗಳ ನಡುವೆ ಸಭೆಗಳು ನಡೆಯುವಾಗ ವಿಭಿನ್ನ ಸ್ತರದ ಅಧಿಕಾರಿಗಳಿರುತ್ತಿದ್ದರು. ಕೆಲವು ವಿಭಾಗದ ಪ್ರತಿನಿಧಿಗಳಾದ ಕಿರಿಯ ಅಧಿಕಾರಿಗಳು ಬಂದಿರುತ್ತಿದ್ದರು. ಕಿರಿಯರಿರಲಿ, ಹಿರಿಯರಿರಲಿ, ಎಲ್ಲರ ಮಾತಿಗೂ ಗೌರವ ನೀಡುತ್ತಿದ್ದರು. ‘ನೀವು ಬೊಂಬೆಯಂತೆ ಕೂರಲು ಬಂದಿಲ್ಲ, ಮಾತನಾಡಬೇಕು’ ಎನ್ನುತ್ತಿದ್ದರು. ಕಿರಿಯರು ಉತ್ತಮ ಅಂಶ ತಿಳಿಸಿದರೆ, ಇದೊಂದು ಗಂಭೀರ ವಿಚಾರವಾಗಿದ್ದು, ನೀವು ಉತ್ತರಿಸಿ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತಿದ್ದರು.

    ಕಲಾಂ ರಾಷ್ಟ್ರಪತಿಯಾದ ನಂತರ 2014ರ ಡಿ.19ರಂದು ಬೆಂಗಳೂರಿನ ಚಾಮರಾಜಪೇಟೆಯ ಮರಿಯಪ್ಪ ಹಾಸ್ಟೆಲ್ ಶತಮಾನೋತ್ಸವಕ್ಕೆ ಆಗಮಿಸಿದ್ದರು. ನನ್ನ ಹೆಸರು, ಪರಿಚಯವನ್ನು ಚೀಟಿಯಲ್ಲಿ ಬರೆದು ವೇದಿಕೆಯಲ್ಲಿದ್ದ ಕಲಾಂ ಅವರಿಗೆ ತಲುಪಿಸಿದೆ. ಕೂಡಲೇ ಬರುವಂತೆ ಹೇಳಿ ಕಳಿಸಿದರು. ನಾನು ನಿವೃತ್ತಿ ನಂತರ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿರುವುದನ್ನು ಕೇಳಿ ಸಂತಸಪಟ್ಟರು. ‘ನೀನು ಪುಣ್ಯದ ಕೆಲಸ ಮಾಡುತ್ತಿದ್ದೀಯ’ ಎಂದರು.

    1985ರಲ್ಲಿ ಅವರು ಡಿಆರ್​ಡಿಎಲ್ ನಿರ್ದೇಶಕರಾಗಿದ್ದರು, ನಾನು ಸರ್ಟಿಫಿಕೇಷನ್ ವಿಭಾಗದಲ್ಲಿದ್ದೆ. ಒಮ್ಮೆ ಮೆಸ್​ನಲ್ಲಿ ಊಟ ಮಾಡಲು ಆಗಮಿಸಿದ ಕಲಾಂ ಅವರು ಮಾತನಾಡಿಸಿದರು. ‘ಇತ್ತೀಚೆಗೆ ನೀನು ಮಾಡಿದ ಹೊಸ ಕಾರ್ಯ ಯಾವುದು?’ ಎಂದರು. ‘ದೇಶೀಯವಾಗಿ ಒಂದು ಉತ್ಪನ್ನ ಸಿದ್ಧಪಡಿಸಿದ್ದೇವೆ, ಕೋರಾಪುಟ್​ನಲ್ಲಿರುವ ಎಚ್​ಎಎಲ್​ನವರು ತಮ್ಮ ವಿಮಾನದಲ್ಲಿ ಇದನ್ನು ಬಳಸಬಹುದು’ ಎಂದದ್ದಕ್ಕೆ ಮೆಚ್ಚುಗೆ ಸೂಚಿಸಿದರು. ಆದರೆ, ‘ಈಗಾಗಲೇ ವಿದೇಶದಿಂದ ಆ ಉತ್ಪನ್ನ ಪಡೆಯುತ್ತಿರುವ ಎಚ್​ಎಎಲ್​ಗೆ ಈ ವಿಚಾರ ತಿಳಿದಿದೆಯೇ? ಆ ಸಂಸ್ಥೆ ಸಂಪೂರ್ಣವಾಗಿ ಆಮದನ್ನು ಸ್ಥಗಿತಗೊಳಿಸಿ ನಿನ್ನ ಉತ್ಪನ್ನವನ್ನು ಬಳಸುವವರೆಗೂ ನಿನ್ನ ಕೆಲಸ ಪೂರ್ಣವಾಗುವುದಿಲ್ಲ’

    ಎಂದು ಮೆಚ್ಚುಗೆಯ ಜತೆಗೆ ಜವಾಬ್ದಾರಿಯನ್ನೂ ಮನಗಾಣಿಸಿದರು. ಕಲಾಂ ಅವರಂತೆಯೇ ಸರಳ, ಸಹಜವಾಗಿ ಹಾಗೂ ಉನ್ನತ ಚಿಂತನೆಗಳೊಂದಿಗೆ ಜೀವಿಸಬೇಕು ಎಂಬ ಪ್ರೇರಣೆಯನ್ನು ಅವರ ನೆನಪುಗಳು ಸದಾ ನೀಡುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts