More

    ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಲಿ

    ಪಿರಿಯಾಪಟ್ಟಣ : ಕಳೆದೊಂದು ವಾರದಿಂದ ರಾಜ್ಯದಲ್ಲಿ ಮಳೆಯಿಂದ ಉಂಟಾಗಿರುವ ನಷ್ಟದ ಪ್ರಮಾಣದ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನಹರಿಸಬೇಕಿದೆ. ರಾಜ್ಯದಲ್ಲಿ ಲಕ್ಷಾಂತರ ರೈತರು ಮಳೆಯಿಂದ ನಷ್ಟ ಅನುಭವಿಸಿದ್ದು, ಸರ್ಕಾರ ಕೂಡಲೇ ಅವರ ನೆರವಿಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

    ತಾಲೂಕಿನ ವಿವಿಧೆಡೆ ಮಳೆ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಮಳೆಯಿಂದ ಆಗಿರುವ ನಷ್ಟದ ಪ್ರಮಾಣವನ್ನು ನನ್ನ ಕೇವಲ ಎರಡು ಗಂಟೆ ಭೇಟಿಯ ಅವಧಿಯಲ್ಲಿ ಅಂದಾಜಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಕೂಡಲೇ ಅಧಿಕಾರಿಗಳನ್ನು ನೇಮಿಸಿ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆಯಲಿ ಎಂದರು.

    ಕಳೆದ ವರ್ಷ ಬರಗಾಲದಿಂದ ರೈತರು ಸಂಕಷ್ಟ ಅನುಭವಿಸಿದ್ದರು. ಕಳೆದ ಬಾರಿಯ ನಷ್ಟವನ್ನು ಸರಿದೂಗಿಸಲು ರೈತರು ಈ ವರ್ಷ ಬೇಗನೆ ಕೃಷಿ ಚಟುವಟಿಕೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಉತ್ತಮವಾಗಿ ಮಳೆಯೂ ಪ್ರಾರಂಭವಾಗಿರುವುದು ಸಂತಸದ ವಿಷಯ. ಆದರೆ ಕೆಲವೆಡೆ ಅಪಾರ ಪ್ರಮಾಣದಲ್ಲಿ ಮಳೆ ಬಿದ್ದಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

    ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು ಕೆಲವು ಕಡೆ ಮಳೆ ಪ್ರಮಾಣದ ಹೆಚ್ಚಳದಿಂದಾಗಿ ವಾಣಿಜ್ಯ ಬೆಳೆಗಳಾದ ಬಾಳೆ, ದಾಳಿಂಬೆ, ಅಡಕೆ, ಶುಂಠಿ, ತಂಬಾಕು ಮತ್ತಿತರ ಬೆಳೆಗಳು ನೆಲಕಚ್ಚಿವೆ. ತುಮಕೂರು ಜಿಲ್ಲೆಯಲ್ಲಿ ಒಬ್ಬ ರೈತನಿಗೆ ಸೇರಿದ 2000ಕ್ಕೂ ಹೆಚ್ಚು 12 ವರ್ಷ ವಯಸ್ಸಿನ ಅಡಕೆ ಮರಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಆ ರೈತ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾನೆ. ಪಿರಿಯಾಪಟ್ಟಣ ತಾಲೂಕಿನ ಶಿಲ್ಪಾ ಎಂಬ ಮಹಿಳೆ ಒಬ್ಬರು ತಲಾ ಐವತ್ತು ಸಾವಿರ ರೂ.ಗಳಂತೆ ಏಳು ಜನರಿಂದ ಕೃಷಿ ಭೂಮಿಯನ್ನು ಗುತ್ತಿಗೆಗೆ ಪಡೆದು ಸಾಲ-ಸೋಲ ಮಾಡಿ ತಂಬಾಕು ನಾಟಿ ಮಾಡಿದ್ದಾರೆ. ಈಗಾಗಲೇ ಸುಮಾರು 7 ಲಕ್ಷ ರೂ. ವೆಚ್ಚವಾಗಿದೆ. ಆದರೆ ಈಗ ಮಳೆಯಿಂದ ತಂಬಾಕು ಬೆಳೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಆ ಮಹಿಳೆ ಸಾಲ ತೀರಿಸುವುದು ಹೇಗೆ ಎಂದು ಪ್ರಶ್ನಿಸಿದರು.

    ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರು ರಾಗಿ ಮಾರಾಟ ಮಾಡಿದ್ದಾರೆ. ಆದರೆ ಈವರೆಗೂ ರೈತರಿಗೆ ಹಣ ಬಿಡುಗಡೆಯಾಗಿಲ್ಲ. ಮಾರಾಟ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್ ರಾಗಿ ಖರೀದಿ ಸಂದರ್ಭದಲ್ಲಿ ನಾಲ್ಕು ಕೆ.ಜಿ. ಕಡಿತಗೊಳಿಸುತ್ತಿರುವುದು ಸರ್ಕಾರದ ಗಮನಕ್ಕೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.

    ರಾಜ್ಯದಲ್ಲಿ ಪ್ರತಿದಿನ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ, ಸರ್ಕಾರದ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಈವರೆಗೂ ಒಬ್ಬ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಕನಿಷ್ಠ ಮಾಧ್ಯಮಗಳ ಮೂಲಕವಾದರೂ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

    ನಾನು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂಬ ವಿಷಯ ತಿಳಿದ ತಾಲೂಕಿನ ಶಾಸಕ ಹಾಗೂ ಸಚಿವ ಕೆ.ವೆಂಕಟೇಶ್ ನನಗಿಂತ ಒಂದು ಗಂಟೆ ಮುಂಚೆಯೇ ತರಾತುರಿಯಲ್ಲಿ ಭೇಟಿ ನೀಡಿ ಹೋಗಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ, ಅವರು ಬಂದು ಭೇಟಿ ನೀಡಿರುವುದು ಕೇವಲ ತೋರಿಕೆಗಷ್ಟೇ. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಾಂತ್ವನ ಹೇಳುವ ಬದಲು ಕರಾಬು ಜಾಗದಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿ ಹೋಗಿರುವುದು ಅವರ ಘನತೆಗೆ ತಕ್ಕುದಲ್ಲ ಎಂದು ಜರಿದರು.

    ಮಳೆ ಹಾನಿಯಿಂದಾಗಿ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಜೆಡಿಎಸ್ ಪಕ್ಷದ ಮುಖಂಡರು ಶಾಸಕರೊಂದಿಗೆ ಚರ್ಚಿಸಿ ನಮ್ಮ ಪಕ್ಷದ ವತಿಯಿಂದಲೂ ರೈತರಿಗೆ ನೆರವು ನೀಡಲು ಚಿಂತನೆ ಮಾಡುವುದಾಗಿ ತಿಳಿಸಿದರು.

    ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಕೆ.ಮಹದೇವ್, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ ಇತರರಿದ್ದರು.

    ಸೆಲ್ಫಿಗೆ ಮುಗಿಬಿದ್ದ ಕಾರ್ಯಕರ್ತರು : ತಾಲೂಕಿನ ಮಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದರೂ ಪ್ರತಿ ಗ್ರಾಮದಲ್ಲೂ ಜೆಡಿಎಸ್ ಕಾರ್ಯಕರ್ತರು ಎಚ್‌ಡಿಕೆ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಹೋದ ಕಡೆಯಲ್ಲೆಲ್ಲಾ ತಮ್ಮ ವಾಹನಗಳಲ್ಲಿ ಅವರನ್ನು ಹಿಂಬಾಲಿಸಿದ ಕಾರ್ಯಕರ್ತರು ಅನವಶ್ಯಕವಾಗಿ ಜನಜಂಗುಳಿ ಸೃಷ್ಟಿಸಿದರು. ತಾಲೂಕಿನ ಚಿಕ್ಕನೇರಳೆ, ಚಪ್ಪರದಹಳ್ಳಿ, ಹಾರನಹಳ್ಳಿ, ಅಂಬಲಾರೆ ಗ್ರಾಮಗಳಿಗೆ ಭೇಟಿ ನೀಡಿದ ಎಚ್‌ಡಿಕೆ ಅಂಬಲಾರೆ ಗ್ರಾಮದಲ್ಲಿ ಭೋಜನ ಸ್ವೀಕರಿಸಿ ಗ್ರಾಮದಿಂದ ಮೈಸೂರಿಗೆ ಹಿಂದಿರುಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts