More

    ಇಂದು ಆರ್‌ಸಿಬಿ- ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ಮುಖಾಮುಖಿ

    ಶಾರ್ಜಾ: ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ ಸತತ 5 ಸೋಲುಗಳಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಪಂದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕ್ರಿಸ್ ಗೇಲ್ ವಾಪಸಾಗಲಿದ್ದಾರೆ. ಕಳೆದ ಮುಖಾಮುಖಿಯಲ್ಲಿ ಆರ್‌ಸಿಬಿ ತಂಡ 97 ರನ್‌ಗಳಿಂದ ಪಂಜಾಬ್ ಎದುರು ಹೀನಾಯವಾಗಿ ಶರಣಾಯಿತು. ಇದೀಗ ಹ್ಯಾಟ್ರಿಕ್ ಗೆಲುವಿನ ಜತೆಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ವಿರಾಟ್ ಕೊಹ್ಲಿ ಬಳಗವಿದೆ.

    * ಆರ್‌ಸಿಬಿಗೆ ಹ್ಯಾಟ್ರಿಕ್ ಗೆಲುವಿನ ಗುರಿ
    ಪಂದ್ಯದಿಂದ ಪಂದ್ಯಕ್ಕೆ ಉತ್ತಮ ನಿರ್ವಹಣೆ ತೋರಲು ಯಶಸ್ವಿಯಾಗುತ್ತಿರುವ ಆರ್‌ಸಿಬಿ ತಂಡ, ಸರ್ವಾಂಗೀಣ ನಿರ್ವಹಣೆ ಮೂಲಕ ಗಮನಸೆಳೆಯುತ್ತಿದೆ. ಅನುಭವಿ ಆರನ್ ಫಿಂಚ್ ಹಾಗೂ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಜೋಡಿ ಆರಂಭಿಕ ಹಂತದಲ್ಲಿ ತಕ್ಕಮಟ್ಟಿಗೆ ರನ್‌ಗಳಿಸುತ್ತಿದ್ದರೆ, ಎಬಿ ಡಿವಿಲಿಯರ್ಸ್‌, ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ತೋರಿದ್ದ ಎಬಿಡಿ ಇದೀಗ ಮತ್ತೊಂದು ಇನಿಂಗ್ಸ್ ಕಟ್ಟಲು ಸಜ್ಜಾಗಿದ್ದಾರೆ. ಕೆಕೆಆರ್ ಎದುರು ಇದೇ ಮೈದಾನದಲ್ಲಿ ಅದ್ಭುತ ಇನಿಂಗ್ಸ್ ಮೂಲಕ ಗಮನಸೆಳೆದಿದ್ದರು. ಆಲ್ರೌಂಡರ್ ಕ್ರಿಸ್ ಮಾರಿಸ್ ತಂಡದಲ್ಲಿ ಕಾಣಿಸಿಕೊಂಡ ಬಳಿಕ ಬೌಲಿಂಗ್ ವಿಭಾಗದಲ್ಲೂ ಆರ್‌ಸಿಬಿ ಸುಧಾರಣೆ ಕಂಡಿದೆ. ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ಪವರ್ ಪ್ಲೇ ಎಕ್ಸ್‌ರ್ಟ್ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ವೇಗಿಗಳಾದ ನವದೀಪ್ ಸೈನಿ, ಇಸುರು ಉದಾನ ಜೋಡಿ ಎದುರಾಳಿ ತಂಡಕ್ಕೆ ಕಡಿವಾಣ ಹಾಕಲು ಸಜ್ಜಾಗಿದೆ.
    * ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಬಲ
    ಆರ್‌ಸಿಬಿ ವಿರುದ್ಧವೇ ಕಡೇ ಬಾರಿಗೆ ಜಯ ದಾಖಲಿಸಿ ಸತತ ಸೋಲುಗಳಿಂದ ಟೂರ್ನಿಯಲ್ಲಿ ನಿರ್ಗಮನದ ಹಂತದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಬಳಗಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ವಾಪಸಾಗಿದ್ದಾರೆ. ಕಳೆದ ಪಂದ್ಯದಲ್ಲಿ ಕೆಕೆಆರ್ ಎದುರು ಗೆಲುವಿನ ಹಂತದಲ್ಲಿ ಎಡವಿದ ಪಂಜಾಬ್ ತಂಡಕ್ಕೆ ಗೆಲುವಿನ ಅನಿವಾರ್ಯವಾಗಿದೆ. ಕಲುಷಿತ ಆಹಾರ ಸೇವಿಸಿ ಕಳೆದ ಎರಡು ಪಂದ್ಯಗಳಿಂದ ಅಲಭ್ಯರಾಗಿದ್ದ ಗೇಲ್, ಆಗಮನ ತಂಡಕ್ಕೆ ಕೊಂಚ ಸಮಾಧಾನ ತಂದಿದೆ. ಆರಂಭಿಕರಾದ ರಾಹುಲ್ ಹಾಗೂ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊರತುಪಡಿಸಿ ಮಧ್ಯಮ ಕ್ರಮಾಂಕದಲ್ಲಿ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಬೌಲಿಂಗ್‌ನಲ್ಲಿ ಮೊಹಮದ್ ಶಮಿ ಹಾಗೂ ರವಿ ಬಿಷ್ಣೋಯಿ ಮಾತ್ರ ತಕ್ಕ ಮಟ್ಟಿಗೆ ನಿರ್ವಹಣೆ ತೋರುತ್ತಿದ್ದಾರೆ. ತಂಡಕ್ಕೆ ಪ್ರಮುಖವಾಗಿ ವಿದೇಶಿ ಆಟಗಾರರಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ.

    ಟೀಮ್ ನ್ಯೂಸ್:
    ಆರ್‌ಸಿಬಿ: ಗೆಲುವಿನ ಲಯದಲ್ಲಿರುವ ಆರ್‌ಸಿಬಿ, ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಬದಲಾವಣೆ ನಿರೀಕ್ಷಿಸುವುದು ಕಷ್ಟ.
    * ಸಂಭಾವ್ಯ ತಂಡ: ಆರನ್ ಫಿಂಚ್, ದೇವದತ್ ಪಡಿಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಕ್ರಿಸ್ ಮಾರಿಸ್, ಇಸುರು ಉದಾನ, ನವದೀಪ್ ಸೈನಿ, ಮೊಹಮದ್ ಸಿರಾಜ್, ಯಜುವೇಂದ್ರ ಚಾಹಲ್.
    ಕಳೆದ ಪಂದ್ಯ: ಕೆಕೆಆರ್ ಎದುರು 82 ರನ್ ಜಯ

    ಪಂಜಾಬ್:
    ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ತಂಡದಲ್ಲಿ ಬದಲಾವಣೆ ಅನಿವಾರ್ಯ. ಕ್ರಿಸ್ ಗೇಲ್ ವಾಪಸಾಗಿರುವುದರಿಂದ ಬ್ಯಾಟಿಂಗ್‌ನಲ್ಲಿ ವೈಲ್ಯ ಅನುಭವಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಹೊರಗುಳಿಯಲಿದ್ದಾರೆ. ಮಂದೀಪ್ ಸಿಂಗ್ ಬದಲಿಗೆ ದೀಪಕ್ ಹೂಡ, ವೇಗಿ ಶೆಲ್ಡನ್ ಕಾಟ್ರೆಲ್ ಬದಲಿಗೆ ಹರ್ದುಸ್ ವಿಲ್‌ಜೊಯೆನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
    ಕಳೆದ ಪಂದ್ಯ: ಕೆಕೆಆರ್ ಎದುರು 2 ರನ್‌ಗಳಿಂದ ಸೋಲು
    * ಸಂಭಾವ್ಯ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಸಿಮ್ರಾನ್‌ಸಿಂಗ್ (ವಿಕೀ), ಕ್ರಿಸ್ ಗೇಲ್/ಮ್ಯಾಕ್ಸ್‌ವೆಲ್, ಮಂದೀಪ್ ಸಿಂಗ್/ದೀಪಕ್ ಹೂಡಾ, ಶೆಲ್ಡನ್ ಕಾಟ್ರೆಲ್/ಹರ್ದುಸ್ ವಿಲ್‌ಜೊಯೆನ್, ಮುಜೀಬ್ ಉರ್ ರೆಹಮಾನ್, ಮೊಹಮದ್ ಶಮಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯಿ.

     ಸೆಪ್ಟೆಂಬರ್ 24 ರಂದು ಆರ್‌ಸಿಬಿ ವಿರುದ್ಧ ಜಯ ದಾಖಲಿಸಿದ ಬಳಿಕ ಕಿಂಗ್ಸ್ ಇಲೆವೆನ್ ಆಡಿದ 5 ಪಂದ್ಯಗಳಲ್ಲೂ ಸೋಲನುಭವಿಸಿದೆ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ

    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಮುಖಾಮುಖಿ: 25, ಆರ್‌ಸಿಬಿ: 12, ಪಂಜಾಬ್: 13.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts