More

    ಕಬ್ಬು ಬೆಳೆನಷ್ಟ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮೊರೆ

    ದಾವಣಗೆರೆ: ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿ 1069 ರೈತರ 2070 ಎಕರೆ ಪ್ರದೇಶದ ಕಬ್ಬು ಬೆಳೆ ಒಣಗಿ ನಾಶವಾಗಿದೆ. ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ನೀಡುವಂತೆ ದಾವಣಗೆರೆ ಸಕ್ಕರೆ ಕಂಪನಿ ನಿಯಮಿತ, ಜಿಲ್ಲಾ ರೈತರ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘಗಳು ಜಿಲ್ಲಾಡಳಿತವನ್ನು ಆಗ್ರಹಿಸಿವೆ.
    ಭದ್ರಾ ಸಲಹಾ ಸಮಿತಿಯ ಅವೈಜ್ಞಾನಿಕ ವೇಳಾಪಟ್ಟಿಯಿಂದಾಗಿ ಭದ್ರಾ ನೀರಿನ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದ ಕಾರಣಕ್ಕೆ ಅಂತರ್ಜಲ ಕುಸಿದಿವೆ. ನೀರಿಲ್ಲದೆ 2070 ಎಕರೆಯಲ್ಲಿನ ಕಬ್ಬು ಹಾಳಾಗಿದೆ ಎಂದು ದಾವಣಗೆರೆ ಸಕ್ಕರೆ ಕಂಪನಿ ನಿಯಮಿತ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
    ಕಬ್ಬು ವಾರ್ಷಿಕ ಬೆಳೆಯಾಗಿದ್ದು, ರೈತರು ಕಳೆದ ವರ್ಷದ ಜೂನ್‌ನಿಂದ ನವೆಂಬರ್‌ವರೆಗೆ ಕಬ್ಬು ನಾಟಿ ಮಾಡಿದ್ದರು. ಸಾಲ ಮಾಡಿ ಬೆಳೆದಿದ್ದಾಗ್ಯೂ ಕಬ್ಬು ಸಂಪೂರ್ಣ ಒಣಗಿ ಹೋಗಿ, ಗಣ್ಣು ಇಡುವುದಿಲ್ಲ. ಅದನ್ನು ಸುಟ್ಟು ಹೊಲ ಉಳುಮೆ ಮಾಡುವುದು ರೈತನಿಗೆ ಅನಿವಾರ್ಯತೆ ಆಗಿದೆ.
    ಆದ್ದರಿಂದ ರೈತ ಕಬ್ಬಿನ ಬೆಳೆ ಬೆಳೆಸಲು ಸುರಿದ ಬಂಡವಾಳದಲ್ಲಿ ನಯಾ ಪೈಸೆ ಸಿಗುವುದಿಲ್ಲ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಕರೆ ಕಬ್ಬು ಬೆಳೆಯಲು 45 ಸಾವಿರ ರೂ. ವೆಚ್ಚವಾಗಲಿದೆ. ದಾವಣಗೆರೆ ಸಕ್ಕರೆ ಕಂಪನಿಯವರು ಎಕರೆಗೆ 29200 ರೂ. ಸಾಲ ನೀಡಿದ್ದು ರೈತರು ಸಾಲದ ಕೂಪದಲ್ಲಿದ್ದಾರೆ. ಕೂಡಲೆ ಒಣಗಿದ ಕಬ್ಬಿಗೆ ಪರಿಹಾರ ನೀಡಬೇಕೆಂದು ಮುಖಂಡರು ಆಗ್ರಹಿಸಿದರು.
    ದಾವಣಗೆರೆ ಸಕ್ಕರೆ ಕಂಪನಿ ನಿಯಮಿತದ ಕಾರ್ಯನಿರ್ವಾಹಕ ನಿರ್ದೇಶಕ ಅಭಿಜಿತ್ ಶಾಮನೂರು, ಕುಕ್ಕುವಾಡದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಜಿಲ್ಲಾ ರೈತರ ಒಕ್ಕೂಟದ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಅವರು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಜಂಟಿ ಮನವಿಪತ್ರ ಸಲ್ಲಿಸಿದರು.
    ರೈತ ಮುಖಂಡರಾದ ಹದಡಿ ಜಿ.ಸಿ.ನಿಂಗಪ್ಪ, ಚಂದ್ರಶೇಖರ ಪೂಜಾರ, ಕುಕ್ಕುವಾಡದ ಡಿ.ಬಿ.ಶಂಕರ್, ಡಿ.ಬಿ.ಅರವಿಂದ, ಕೆ.ಸಿ.ಉಮೇಶ, ಯು.ಸಿ.ನಾಗರಾಜ, ದೂಳಹೊಳೆ ವಾಗೀಶ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts