

ಹೈದರಾಬಾದ್: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಬಯಸುತ್ತಾರೆ. ಅದಕ್ಕಾಗಿ ಹಗಲಿರುಳು ಶ್ರಮಿಸುವ ಮೂಲಕ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟದ ಉದ್ಯೋಗ ಪಡೆದಾಗ ಪಾಲಕರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಜಗತ್ತನ್ನೇ ಗೆದ್ದಷ್ಟು ಸಂತೋಷಪಡುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆಗೆ ತುಂಬಾ ಸಂತೋಷವಾಗಿದೆ. ಮಗಳು ಐಎಎಸ್ ಅಧಿಕಾರಿಯಾಗಿದ್ದು, ತಂದೆ ಐಪಿಎಸ್ ಆಗಿದ್ದಾರೆ. ತೆಲಂಗಾಣದ ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಪ್ರಾಯೋಗಿಕ ತರಬೇತಿಗಾಗಿ ಏಳು ಮಂದಿ ಪ್ರೊಬೇಷನರಿ ಐಎಎಸ್ ಅಧಿಕಾರಿಗಳು ಶನಿವಾರ (ಜೂನ್ 15) ರಾಜ್ ಬಹದ್ದೂರ್ ವೆಂಕಟ ರಂಗಾರೆಡ್ಡಿ ತೆಲಂಗಾಣ ಪೊಲೀಸ್ ಅಕಾಡೆಮಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಐಪಿಎಸ್ ತಂದೆ, ಪೊಲೀಸ್ ಅಕಾಡೆಮಿಗೆ ಐಎಎಸ್ ಅಧಿಕಾರಿಯಾಗಿ ಬಂದ ಮಗಳಿಗೆ ಸೆಲ್ಯೂಟ್ ಹೊಡೆದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಪ್ರಾಯೋಗಿಕ ತರಬೇತಿಗೆ ಬಂದಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿಗಳನ್ನು ಪೊಲೀಸ್ ಅಕಾಡೆಮಿ ನಿರ್ದೇಶಕ ಅಭಿಲಾಶಾ ಬಿಷ್ಟ್ ಬದಲಿಗೆ ಜಂಟಿ ನಿರ್ದೇಶಕ ಡಿ.ಮುರಳೀಧರ್ ಮತ್ತು ಉಪನಿರ್ದೇಶಕ ವೆಂಕಟೇಶ್ವರಲು ಸ್ವಾಗತಿಸಿದರು. ಈ ವೇಳೆ ಈ ಅಪರೂಪದ ಘಟನೆ ನಡೆದಿದೆ.
ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿದ 2023ನೇ ಬ್ಯಾಚ್‌ನ ಏಳು ಪ್ರೊಬೇಷನರಿ ಐಎಎಸ್ ಅಧಿಕಾರಿಗಳಲ್ಲಿ ಉಮಾಭಾರತಿ ಒಬ್ಬರು. ತಂದೆ ವೆಂಕಟೇಶ್ವರಲು, ತಮ್ಮ ಮಗಳಿಗೆ ಊಗುಚ್ಛ ನೀಡಿ ಸೆಲ್ಯೂಟ್ ಹೊಡೆದು ಆತ್ಮೀಯವಾಗಿ ಬರಮಾಡಿಕೊಂಡರು. ಅಂದಹಾಗೆ ಉಮಾಭಾರತಿ ಅವರು ವಿಕಾರಾಬಾದ್‌ನಲ್ಲಿ ಟ್ರೈನಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಮಾಭಾರತಿ ಅವರು ನಿನ್ನೆ ತೆಲಂಗಾಣ ಪೊಲೀಸ್ ಅಕಾಡೆಮಿಗೆ (ಟಿಜಿಪಿಎ) ಭೇಟಿ ನೀಡಿ ಪರೀಕ್ಷೆಯ ಭಾಗವಾಗಿ ತರಬೇತಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ತಂದೆ ಎನ್.ವೆಂಕಟೇಶ್ವರಲು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅಪರೂಪದ ಘಟನೆ ನಡೆದಿದೆ. ಫೋಟೋ ವೈರಲ್ ಆಗಿದ್ದು, ಐಎಎಸ್ ಮಗಳು ಮತ್ತು ಐಪಿಎಸ್ ತಂದೆಯ ಯಶಸ್ಸಿಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. (ಏಜೆನ್ಸೀಸ್)