More

    ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕೋಟಿ ಜನರಿಂದ ಈಗಾಗಲೇ ಮತದಾನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮೂರೇ ವಾರ ಬಾಕಿಯಿದ್ದು ಈಗಾಗಲೇ ಜನರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತು ಮತದಾನ ಪ್ರಕ್ರಿಯೆಯಲ್ಲಿ ತುರುಸಿನಿಂದ ಭಾಗವಹಿಸುತ್ತಿದ್ದಾರೆ. ಜಾರ್ಜಿಯಾದ ಮತಗಟ್ಟೆಗಳಲ್ಲಿ ಜನರು 3ರಿಂದ 5 ಗಂಟೆ ಕಾಲ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿದೆ. ದೇಶದಲ್ಲಿ ಇದುವರೆಗೆ 1 ಕೋಟಿಗೂ ಹೆಚ್ಚು ಮತದಾರರು ಹಕ್ಕನ್ನು ಚಲಾಯಿಸಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆ ಯಲ್ಲಿ, 3 ವಾರಗಳಿಗೆ ಮುನ್ನ ಕೇವಲ 14 ಲಕ್ಷ ಜನರು ಮತದಾನ ಮಾಡಿದ್ದರು. 50 ರಾಜ್ಯಗಳ ಪೈಕಿ ಆರು ರಾಜ್ಯ ಹೊರತು ಪಡಿಸಿ ಇನ್ನೆಲ್ಲ ರಾಜ್ಯಗಳಲ್ಲಿ ಅಂಚೆ ಮತದಾನ ಮತ್ತು ಮತಪತ್ರ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಸುಮಾರು ಶೇಕಡ 65ರಷ್ಟು ಮತದಾರರು ಮತ ಚಲಾಯಿಸುವ ಸಂಭವವಿದೆ. ತಮ್ಮ ಮತ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೋ ಇಲ್ಲವೋ ಎನ್ನುವ ಅನುಮಾನ ಹಾಗೂ ಕರೊನಾ ಸಾಂಕ್ರಾಮಿಕತೆಯಿಂದಾಗಿ ಚುನಾವಣೆ ದಿನದಂದು (ನ.3) ಉದ್ದದ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗಬಹುದೆಂಬ ಆತಂಕದಿಂದ ಜನರು ಮುಂಚಿತವಾಗಿಯೇ ಹಕ್ಕನ್ನು ಚಲಾಯಿಸಲು ಮುಂದಾಗಿದ್ದಾರೆ.

    ಟ್ರಂಪ್ ಮರು ಆಯ್ಕೆ ಅನುಮಾನ

    ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮರು ಆಯ್ಕೆಗೆ ಅಗತ್ಯವಾದ 270 ಚುನಾಯಕ (ಎಲೆಕ್ಟೋರಲ್) ಮತಗಳನ್ನು ಗಳಿಸುವುದು ಅನುಮಾನ ಎನ್ನಲಾಗಿದೆ. ಸುಮಾರು ಒಂದು ಡಜನ್ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ 270 ಎಲೆಕ್ಟೋರಲ್ ಮತ ಪಡೆಯುವ ಅವಕಾಶಗಳು ಹೆಚ್ಚಾಗಿದೆ. ಆ ಪೈಕಿ ಫ್ಲಾರಿಡಾ (29), ಓಹಿಯೋ (18) ಮತ್ತು ಪೆನ್ಸೆಲ್ವೇನಿಯಾ (20)ಗಳಲ್ಲೇ 67 ಎಲೆಕ್ಟೋರಲ್ ಮತಗಳಿವೆ. ಈ ಮೂರೂ ರಾಜ್ಯಗಳಲ್ಲಿ ಕಳೆದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಜಯ ಸಾಧಿಸಿದ್ದರು. ಆದರೆ ಈ ಬಾರಿ ಟ್ರಂಪ್​ಗೆ ಇಲ್ಲಿ ಜನಬೆಂಬಲ ಕುಸಿದಿದ್ದು ವಿಶ್ವಾಸ ಮರಳಿ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

    ಬಿಡೆನ್​ಗೆ ಭಾರತೀಯರ ದೃಢ ಬೆಂಬಲ

    ಸುಮಾರು ಮುಕ್ಕಾಲು ಪಾಲು ಭಾರತೀಯ ಅಮೆರಿಕನ್ನರು ಜೋ ಬಿಡೆನ್​ರಿಗೆ ಮತ ನೀಡಲು ದೃಢ ನಿಶ್ಚಯ ಮಾಡಿದ್ದಾರೆ ಎಂದು ಬುಧವಾರ ನಡೆದ ಸಮೀಕ್ಷೆಯೊಂದು ತಿಳಿಸಿದೆ. ಟ್ರಂಪ್ ನೇತೃತ್ವದಲ್ಲಿ ದೇಶ ತಪು್ಪ ದಾರಿಯಲ್ಲಿ ಸಾಗುತ್ತಿದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಜತೆಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿರುವುದೂ ಕಾರಣವಾಗಿದೆ. ವಲಸಿಗರ ಪೈಕಿ ಭಾರತೀಯ ಅಮೆರಿಕನ್ನರು 2ನೇ ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ನೋಂದಾಯಿತ ಮತದಾರರ ಪೈಕಿ ಭಾರತೀಯ ಅಮೆರಿಕನ್ನರ ಸಂಖ್ಯೆ ಶೇ. 1ಕ್ಕಿಂತ ಕಡಿಮೆಯಿದೆ. ಆದರೆ, ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಎರಡೂ ಪಕ್ಷಗಳು ಭಾರತೀಯ ಸಮುದಾಯದ ಮನವೊಲಿಸಲು ಬಹಳ ಪ್ರಯತ್ನ ನಡೆಸುತ್ತಿವೆ. ತೀರಾ ಪೈಪೋಟಿ ನಡೆಯುವ ನಿರೀಕ್ಷೆಯಿರುವುದರಿಂದ ಭಾರತೀಯ ಸಮುದಾಯದ ಮತ ನಿರ್ಣಾಯಕವಾಗಬಹುದೆಂಬ ಲೆಕ್ಕಾಚಾರದಿಂದ ಪಕ್ಷಗಳು ಅವರನ್ನು ಸೆಳೆಯುವ ಪ್ರಯತ್ನದಲ್ಲಿವೆ.

    ‘ಇಲ್ಲಿರುವ ತರುಣರು..ಸುಂದರ ಮಹಿಳೆಯರನ್ನು ಚುಂಬಿಸಬೇಕು ಎನ್ನಿಸುತ್ತಿದೆ’ ಎಂದ್ರು ಡೊನಾಲ್ಡ್ ಟ್ರಂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts