More

  ಯಾರ ಕೈಗೊಂಬೆಯು ನಾನಲ್ಲ ಎಂದ ವಾಸಣ್ಣ

  ತುಮಕೂರು: ಯಾವುದೇ ವ್ಯಕ್ತಿ, ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುವ ಪ್ರಮೇಯ ಉದ್ಭವವಾಗಿಲ್ಲ. ಶಾಸಕ ಎಂ.ಟಿ.ಕೃಷ್ಣಪ್ಪ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿಯಾಗಿ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ಸ್ವಭಾವ ಅವರಿಗೆ ಗೊತ್ತಿದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿರುಗೇಟು ಕೊಟ್ಟರು.

  ಯಾವ ವ್ಯಕ್ತಿಗೆ ಹೆದರಿಕೊಂಡು, ಮೆಚ್ಚಿಸಲಿಕ್ಕೆ ಆಗಲಿ ಕೆಲಸ ಮಾಡಿಲ್ಲ. ಏನಾದರೂ ಇದ್ದರೆ ಕೃಷ್ಣಪ್ಪ ನನ್ನ ಹತ್ರ ಬಂದು ಮಾತಾಡಲಿ. ಅದನ್ನ ಬಿಟ್ಟು ಬೇರೆಲ್ಲೋ ಬಾಯಿಗೆ ಬಂದಂಗೆ ಮಾತಾಡಿದರೆ ಅದರ ಪರಿಣಾಮವನ್ನು ಹೆದರಿಸಬೇಕಾಗುತ್ತೆ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

  ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮೊದಲಿನಿಂದಲೂ ನನ್ನ ವಿರೋಧವಿದೆ. ಹಾಗಂತ ಇವರು ಯಾರೋ ಮಾಡುವ ಹೋರಾಟಕ್ಕೆ ಬೆಂಬಲ ಸೂಚಿಸುವುದಿಲ್ಲ. ಬದಲಾಗಿ ಅಗತ್ಯ ಬಿದ್ದರೆ ಪ್ರತ್ಯೇಕವಾಗಿ ಹೋರಾಟ ಮಾಡುತ್ತೇನೆ. ಜಿಲ್ಲೆಯ ಜನರು, ರೈತರ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯ. ಸಿಎಂ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದು ಒಂದು ವೇಳೆ ಆ ಕೆಲಸ ಆಗದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಾಸು ತಿಳಿಸಿದರು.

  ನಾವು ಸರ್ಕಾರದ ಭಾಗವಾಗಿರುವುದರಿಂದ ಈ ರೀತಿಯ ಕ್ರಮಗಳು ಕೈಗೊಂಡರೆ ಮುಜುಗರವಾಗುತ್ತದೆ. ಹಾಗಾಗಿ ಮೊದಲು ಸಭೆ ಕರೆದು ಕುಣಿಗಲ್‌ಗೆ 3 ಟಿಎಂಸಿ ನೀರು ಹಂಚಿಕೆ ಆಗಿರುವ ಬಗ್ಗೆ ಜಿಲ್ಲೆಯ ರೈತರಿಗೆ ಮನವರಿಕೆ ಮಾಡಲು ತಿಳಿಸಲಾಗಿದೆ. ಇದಕ್ಕೆ ಸಿಎಂ ಸಹ ಸಕಾರಾತ್ಮಕವಾಗಿ ಸ್ಪಂದಿಸಿ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಂತೆಯೂ ತಿಳಿಸಲಾಗಿದೆ ಎಂದರು.

  ನಾನು ಹೇಮಾವತಿ ಚಾನಲ್ ಮೇಲೆ ಓಡಾಡಿಕೊಂಡು ನೀರಗಂಟಿಯಂತೆ ಗುಬ್ಬಿ ತಾಲೂಕಿಗೆ ಹೇಮಾವತಿ ನೀರು ಬಿಡಿಸಿದ ವ್ಯಕ್ತಿ. ನಮ್ಮ ತಾಲೂಕಿನ ರೈತರ ಹಿತವನ್ನು ಯಾವ ರೀತಿ ಕಾಯಬೇಕೆಂಬುದು ನನಗೆ ಗೊತ್ತಿದೆ. ಕುಣಿಗಲ್‌ಗೆ 3 ಟಿಎಂಸಿ ನೀರು ಅಲೋಕೇಷನ್ ಆಗಿದೆ ಎಂದು ಅವರು ಹೇಳುತ್ತಿದ್ದಾರೆ. ಹಾಗಾಗಿ, ಈ ಬಗ್ಗೆ ನಮ್ಮ ಜಿಲ್ಲೆಯ ರೈತರು, ಜನಸಾಮಾನ್ಯರ ಸಭೆ ಕರೆದು ಮನವರಿಕೆ ಮಾಡಿಕೊಡಬೇಕು. ಮೊದಲ ಈ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

  ಗಂಡಸೇ ಆಗಿದ್ದರೆ…
  ಅವನ್ಯಾವನು ಎಂ.ಟಿ.ಕೃಷ್ಣ. ಅವರಪ್ಪನಿಗೆ ಹುಟ್ಟಿದ್ದರೆ, ಗಂಡಸೇ ಆಗಿದ್ದರೆ ಅವನು ನನ್ನ ಮುಂದೆ ಬಂದು ಮಾತನಾಡಲಿ. ಎಲ್ಲೋ ಮೈಕ್ ಹಿಡ್ಕೊಂಡು ಮಾತಾಡೋದಲ್ಲ. ಗುಬ್ಬಿಯಲ್ಲಿ ಬಂದು ಮಾತಾಡಲಿ ಕೋರಳ ಪಟ್ಟಿ ಹಿಡ್ಕೊಂಡು ಕೇಳುತ್ತೀನಿ. ಜಿಲ್ಲೆಯ ಜನರ ಹಿತ ಕಾಪಾಡೋದು ನಮ್ಮ ಜವಾಬ್ದಾರಿ ಎಂದು ಎಸ್.ಆರ್.ಶ್ರೀನಿವಾಸ್ ಹರಿಹಾಯ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts