More

    ಎಲ್ಲ ಥಿಯೇಟರ್ ಆರಂಭ ಡೌಟ್

    ಭರತ್ ಶೆಟ್ಟಿಗಾರ್ ಮಂಗಳೂರು
    ಕೋವಿಡ್ ಅನ್‌ಲಾಕ್ ನಿಯಮದಂತೆ ಅ.15ರಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಎಲ್ಲ ಚಿತ್ರಮಂದಿರಗಳೂ ಗುರುವಾರವೇ ಪ್ರೇಕ್ಷಕರಿಗಾಗಿ ತೆರೆದುಕೊಳ್ಳುವ ಸಾಧ್ಯತೆ ಕಡಿಮೆ.

    ಪ್ರದರ್ಶನಕ್ಕೆ ಅವಕಾಶವಿಲ್ಲದೆ ಏಳು ತಿಂಗಳಿಂದ (ಮಾರ್ಚ್ 15ರಿಂದ) ಚಿತ್ರಮಂದಿರಗಳು ಮುಚ್ಚಿದ್ದವು. ಅನುಮತಿ ಲಭಿಸಿದ ಕಾರಣ ಸ್ಯಾನಿಟೈಸೇಷನ್ ಸೇರಿದಂತೆ, ಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಲಾಗಿದೆ. ಪ್ರೊಜೆಕ್ಟರ್, ಸೌಂಡ್ ವ್ಯವಸ್ಥೆ, ಲೈಟ್, ಹವಾನಿಯಂತ್ರಕ ಮೊದಲಾದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಕೆಲ ಗಂಟೆ ಚಾಲನೆಯಲ್ಲಿರಿಸಿ, ಸಮಸ್ಯೆಗಳಿದ್ದಲ್ಲಿ ಸಿಬ್ಬಂದಿ ಸರಿಪಡಿಸುತ್ತಿದ್ದಾರೆ.

    ಸಿಬ್ಬಂದಿಗೆ ಕೋವಿಡ್ ಟೆಸ್ಟ್: ಮಾರ್ಚ್‌ನಿಂದ ಇಲ್ಲಿಯವರೆಗೆ ಸಿಂಗಲ್ ಸ್ಕ್ರೀನ್-ಮಲ್ಟಿಪೆಕ್ಸ್‌ಗಳಲ್ಲಿ ಒಂದೆರಡು ಸಿಬ್ಬಂದಿ ಮಾತ್ರ ಥಿಯೇಟರ್‌ಗೆ ಬಂದು ಹೋಗುತ್ತಿದ್ದರು. ಹೆಚ್ಚಿನ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದ ಉದಾಹಣೆಗಳೂ ಇವೆ. ಪ್ರಸ್ತುತ ಸರ್ಕಾರಿದಂದ ಅನುಮತಿ ಸಿಗುತ್ತಿದ್ದಂತೆ ಮತ್ತೆ ಕೆಲಸಕ್ಕೆ ಕರೆದು, ಹೊಸತನಕ್ಕೆ ಹೊಂದಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಎಲ್ಲ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಿ, ವರದಿ ನೀಡುವಂತೆ ಸೂಚಿಸಲಾಗಿದೆ.

    ಹೇಗಿರಲಿದೆ ಹೊಸ ವ್ಯವಸ್ಥೆ?: ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಚಿತ್ರಮಂದಿರಗಳು ಹೊಸತನದೊಂದಿಗೆ ಕಾರ್ಯನಿರ್ವಹಿಸಲಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪೇಪರ್ ಲೆಸ್ ವ್ಯವಸ್ಥೆ ಜಾರಿಯಾಗಲಿದ್ದು, ಪ್ರೇಕ್ಷಕರಿಗೆ ಟಿಕೆಟ್ ನೀಡಲಾಗುವುದಿಲ್ಲ. ಆನ್‌ಲೈನ್ ಬುಕಿಂಗ್ ಮಾಡದೆ ಚಿತ್ರಮಂದಿರದಲ್ಲೇ ಬುಕ್ ಮಾಡುವರಿಗೂ ಮೊಬೈಲ್‌ಗೆ ಮೆಸೇಜ್ ಬರುತ್ತದೆ. ಆನ್‌ಲೈನ್ ಹಣ ಪಾವತಿಗೆ ಆದ್ಯತೆ. ಎಲ್ಲ ಟಚ್ ಪಾಯಿಂಟ್‌ಗಳಿಗೆ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ಶೋ ಬಳಿಕ ಸ್ಯಾನಿಟೈಸೇಷನ್, ಪ್ರೇಕ್ಷಕರಿಗೆ ಥರ್ಮಲ್ ಸ್ಕಾೃನಿಂಗ್ ಕಡ್ಡಾಯ. ರಾತ್ರಿ ಪ್ರದರ್ಶನ ಇಲ್ಲ.

    ಟಿಕೆಟ್ ದರ ಏರಿಕೆ ಇಲ್ಲ: ಚಿತ್ರಮಂದಿರದಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ. ಸದ್ಯಕ್ಕೆ ಟಿಕೆಟ್ ದರ ಏರಿಸುವ ಉದ್ದೇಶ ಸಂಸ್ಥೆಗಳಿಗಿಲ್ಲ. ಚಾಲ್ತಿಯಲ್ಲಿದ್ದ ದರ ಮುಂದುವರಿಯಲಿದೆ ಎನ್ನುತ್ತಾರೆ ಚಿತ್ರಮಂದಿರ ಸಿಬ್ಬಂದಿ. ಸಿಂಗಲ್ ಸ್ಕ್ರೀನ್ ಟಾಕೀಸ್‌ಗಳ ಪ್ರೇಕ್ಷಕ ವರ್ಗವೇ ಬೇರೆ. ಅವರೆಲ್ಲ ಹೊರ ಭಾಗದಿಂದ ಬಂದವರು. ಕರೊನಾ ಭೀತಿ ನಡುವೆ ಈ ವರ್ಗ ಚಿತ್ರ ವೀಕ್ಷಿಸುವ ನಿರೀಕ್ಷೆಯಿಲ್ಲ. ಇತ್ತೀಚಿನ ದಿನಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿರುವ ಚಿತ್ರವೂ ಅತಿ ವಿರಳ. ಆದ್ದರಿಂದ ಥಿಯೇಟರ್ ಆರಂಭವಾದರೆ ಅಂತರ ಕಾಪಾಡಿಕೊಳ್ಳಲು ಸಮಸ್ಯೆಯಾಗದು ಎನ್ನುವುದು ಟಾಕೀಸ್ ಸಿಬ್ಬಂದಿಯೊಬ್ಬರ ಅಭಿಪ್ರಾಯ.

    ಹಳೇ ಸಿನಿಮಾ ಪ್ರದರ್ಶನ: ಕರೊನಾ ಪ್ರಮಾಣ ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ಸದ್ಯ ಹೊಸ ಸಿನಿಮಾಗಳ ಬಿಡುಗಡೆಗೆ ನಿರ್ಮಾಪಕರು ಮನಸ್ಸು ಮಾಡಿಲ್ಲ. ಇನ್ನೊಂದೆಡೆ ಚಿತ್ರ ಮಂದಿರಗಳು ತೆರೆದರೂ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಕಡಿಮೆ. ಆದ್ದರಿಂದ ಅಲ್ಲಿಯವರೆಗೆ ಮಾರ್ಚ್ ತಿಂಗಳಲ್ಲಿ ಅರ್ಧಕ್ಕೆ ನಿಲ್ಲಿಸಲಾಗಿರುವ ಚಿತ್ರಗಳನ್ನೇ ಮತ್ತೆ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಹೆಚ್ಚಿನ ಚಿತ್ರ ಮಂದಿರದವರೂ ಇದೇ ಮಾದರಿ ಅನುಸರಿಸಲಿದ್ದಾರೆ ಎಂದು ಸಿನೆಪೊಲಿಸ್ ಚಿತ್ರ ಮಂದಿರದ ಮಂಗಳೂರು ವಿಭಾಗ ಮುಖ್ಯಸ್ಥ ಕೀರ್ತನ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.

    ಉಡುಪಿಯಲ್ಲಿ ಸದ್ಯಕ್ಕಿಲ್ಲ ಪ್ರದರ್ಶನ: ಉಡುಪಿ: ಜಿಲ್ಲೆಯಲ್ಲಿ ಚಿತ್ರಮಂದಿರಗಳು ಈ ತಿಂಗಳು ತೆರೆಯುವುದು ಅನುಮಾನ ಎನ್ನುತ್ತಾರೆ ಮಾಲೀಕರು. ಜಿಲ್ಲೆಯಲ್ಲಿ ಕಲ್ಪನ, ಅಲಂಕಾರ್, ಡಯಾನ, ಆಶಿರ್ವಾದ್ ಪ್ರಮುಖ ಚಿತ್ರಮಂದಿರಗಳು. ಚಿತ್ರಮಂದಿರ ಸ್ಯಾನಿಟೈಸ್ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಚಿತ್ರ ಪ್ರಸಾರ ಮಾಡುವ ಯುಎಫ್‌ಒ ಸಂಸ್ಥೆಯ ಪ್ರಾಜೆಕ್ಟರ್ ಪರಿಶೀಲನೆಯೂ ಯುಎಫ್‌ಒ ಸಂಸ್ಥೆಯ ಇಂಜಿನಿಯರ್‌ನಿಂದ ನಡೆಯಬೇಕಿದೆ. ಹೊಸ ಸಿನಿಮಾ ಇಲ್ಲ. ಆರಂಭದಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದು. ಮುಂದಿನ ದಿನಗಳಲ್ಲಿ ಪ್ರೇಕ್ಷಕರು ಚಿತ್ರಮಂದಿರ ಕಡೆಗೆ ಬರುತ್ತಾರೆ ಎಂಬುದು ಮಾಲೀಕರ ವಿಶ್ವಾಸ. ಮಣಿಪಾಲ ಭಾರತ್ ಸಿನಿಮಾಸ್ ಅ.15ರಿಂದ ತೆರೆಯಲಿದೆ. ಮಣಿಪಾಲ ಐನಾಕ್ಸ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಇನ್ನೆರಡು ದಿನ ಬಳಿಕ ಕಾರ್ಯನಿರ್ವಹಿಸಲಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಚಿತ್ರಮಂದಿರ ಸಂಪೂರ್ಣ ಸ್ಯಾನಿಟೈಸೇಶನ್ ಮಾಡಲಾಗಿದೆ. ಪ್ರಾಜೆಕ್ಟರ್ ಪರಿಶೀಲನೆ, ಹೊಸ ಚಲನಚಿತ್ರ ಕೊರತೆ, ಇನ್ನಿತರೆ ತಾಂತ್ರಿಕ ಕಾರಣಗಳಿಂದ ಸದ್ಯಕ್ಕೆ ಆರಂಭ ಮಾಡುತ್ತಿಲ್ಲ. ನವೆಂಬರ್ ಮೊದಲ ವಾರದಿಂದ ಚಿತ್ರಮಂದಿರ ತೆರೆಯಬಹುದು.
    ಜಗದೀಶ್ ಕುಡ್ವ ವ್ಯವಸ್ಥಾಪಕ, ಉಡುಪಿ ಅಲಂಕಾರ್ ಚಿತ್ರಮಂದಿರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts