ಏರ್ ಇಂಡಿಯಾ ಪೈಲಟ್ ಹೃದಯಾಘಾತದಿಂದ ಸಾವು; ಇದು ಮೂರನೇ ಪ್ರಕರಣ!

Heart Attack (4)
Published on

ನವದೆಹಲಿ: ದೇಶಾದ್ಯಂತ ಹೃದಯಾಘಾತ ಹೆಮ್ಮಾರಿಯಂತೆ ಕಾಡುತ್ತಿದ್ದು, ಚಿಕ್ಕ ಮಕ್ಕಳು, ವಯೋವೃದ್ಧರು ಎನ್ನದೆ ಎಲ್ಲ ವಯೋಮಾನದವರನ್ನು ಬಲಿ ತೆಗೆದುಕೊಳ್ಳಲಾರಂಭಿಸಿದೆ. ಕುಸಿದು ಬಿದ್ದು ಇಲ್ಲವೇ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಜನರು ಸಾಯುತ್ತಿರುವ ಪ್ರಕರಣ ದಿನೇದಿನೆ ಕೇಳಿಬರುತ್ತಿದೆ.

ಏರ್ ಇಂಡಿಯಾದ 37 ವರ್ಷದ ಪೈಲಟ್​ ಒಬ್ಬರು ಕೂಡ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಈ ಪ್ರಕರಣ ನಡೆದಿದೆ. ಹಿಮಾನಿಲ್ ಕುಮಾರ್ ಎಂಬಾತ ಸಾವಿಗೀಡಾದ ಪೈಲಟ್.

ವಿಮಾನನಿಲ್ದಾಣದ ಲೆವೆಲ್​ 3 ಕಚೇರಿಯಲ್ಲಿ ಬೆಳಗ್ಗೆ 11.35ರ ಸುಮಾರಿಗೆ ಇವರಿಗೆ ಎದೆನೋವು ಉಂಟಾಗಿದ್ದು, ಕೂಡಲೇ ಸಿಪಿಆರ್​ ಮಾಡಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗ್ಯೂ ಇವರನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಕ್ಯಾಪ್ಟನ್​ ಹಿಮಾನಿಲ್ ಕುಮಾರ್ ಇದೇ ಆ. 23ರಂದು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು, ಅವರು ದೈಹಿಕವಾಗಿ ಸದೃಢರಿದ್ದಾರೆ ಎಂದು ವೈದ್ಯಕೀಯ ಪ್ರಮಾಣಪತ್ರದಲ್ಲಿ ದೃಢೀಕರಿಸಲಾಗಿದೆ. ಅಲ್ಲದೆ ಈ ಪ್ರಮಾಣಪತ್ರದ ಅವಧಿ 2024ರ ಆ. 30ರ ವರೆಗೂ ಇದೆ. ಅಲ್ಲದೆ, ಅವರು ಕೆಲಸದ ಸಮಯದಲ್ಲಿ ಯಾವುದೇ ಆಯಾಸದ ಅನುಭವವನ್ನೂ ಹೊಂದಿರಲಿಲ್ಲ. ಅದಾಗ್ಯೂ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದು ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.

ಅಂದಹಾಗೆ ಇದು ಮೊದಲ ಪ್ರಕರಣವಲ್ಲ. ಯುವ ಪೈಲಟ್​ಗಳು ಹೃದಯಾಘಾತಕ್ಕೀಡಾಗಿ ಮರಣ ಹೊಂದಿದ ಪ್ರಕರಣಗಳಲ್ಲಿ ಇದು ಮೂರನೆಯದು. ಆಗಸ್ಟ್​ನಲ್ಲಿ ಇಂಡಿಗೊ ಪೈಲಟ್​ ನಾಗ್ಪುರ ವಿಮಾನನಿಲ್ದಾಣದಲ್ಲಿ ಇನ್ನೇನು ಪ್ರಯಾಣಕ್ಕೆ ಸಜ್ಜಾಗುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವಿಗೀಡಾಗಿದ್ದರು. ಅದಕ್ಕೂ ಹಿಂದಿನ ದಿನ ಕತಾರ್ ಏರ್​ವೇಸ್ ಪೈಲಟ್​ ಪ್ರಯಾಣಿಕರಾಗಿ ದೆಹಲಿಯಿಂದ ದೋಹಾಗೆ ಸಂಚರಿಸುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net