

Ahmedabad Plane Crash : ಅಹಮದಾಬಾದ್ ವಿಮಾನ ಪತನ ದುರಂತ ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಯಾಗಿ ಉಳಿದಿದೆ. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತಪಟ್ಟ ಒಬ್ಬರದ್ದು ಒಂದೊಂದು ರೀತಿಯ ಕರುಣಾಜನಕ ಕತೆಯಿದೆ.
ಏರ್ ಇಂಡಿಯಾ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ತಮ್ಮ ತಂದೆಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳದೆ ವಿಮಾನ ಪತನದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸುಮಿತ್ ಅವರ ಕುಟುಂಬದ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.
ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರು ಪೈಲಟ್ ಹುದ್ದೆಯನ್ನು ತ್ಯಜಿಸಿ, ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆಯನ್ನು ಈಡೇರಲಿಲ್ಲ. ಅವರು ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ತಮ್ಮ ತಂದೆಗೆ ಭರವಸೆ ನೀಡಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಇನ್ನು ಲಂಡನ್‌ಗೆ ಹಾರುವ ಮೊದಲೇ ಸುಮಿತ್ ತಮ್ಮ ತಂದೆಗೆ ಕರೆ ಮಾಡಿ, ಲಂಡನ್ ತಲುಪಿದ ನಂತರ ಮತ್ತೆ ಕರೆ ಮಾಡುವುದಾಗಿ ಹೇಳಿದ್ದರು. ಆದರೆ, ಅಷ್ಟರಲ್ಲಿ ಒಂದು ಭೀಕರ ದುರಂತ ಸಂಭವಿಸಿದೆ. ಸುಮಿತ್ ಅವರ ತಂದೆ ಮುಂಬೈನ ಪೊವೈ ಪ್ರದೇಶದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅವರು ಈ ಹಿಂದೆ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ನಿವೃತ್ತರಾಗಿದ್ದಾರೆ.
ಅಪಘಾತಕ್ಕೀಡಾದ ಏರ್ ಇಂಡಿಯಾ 787-8 ಡ್ರೀಮ್‌ಲೈನರ್ ವಿಮಾನವನ್ನು ಹಾರಿಸಿದ ಪೈಲಟ್‌ಗಳು ತಮ್ಮ ಸೇವೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಳಿದೆ. ವಿಮಾನವನ್ನು ಮುಖ್ಯ ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಹಾರಿಸುತ್ತಿದ್ದರು. ಸುಮಿತ್ ಪ್ರಯಾಣಿಕ ವಿಮಾನಗಳನ್ನು ಹಾರಿಸುವಲ್ಲಿ 8,200 ಗಂಟೆಗಳ ಅನುಭವವನ್ನು ಹೊಂದಿದ್ದರೆ, ಸಹ-ಪೈಲಟ್ ಕ್ಲೈವ್ 1,100 ಗಂಟೆಗಳ ಅನುಭವವನ್ನು ಹೊಂದಿದ್ದರು. ಇಬ್ಬರೂ ಒಟ್ಟು 9,300 ಗಂಟೆಗಳ ಸಂಯೋಜಿತ ಹಾರಾಟದ ಅನುಭವವನ್ನು ಹೊಂದಿದರು ಎಂದು DGCA ಬಹಿರಂಗಪಡಿಸಿದೆ.
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.
https://www.vijayavani.net/ahmedabad-plane-crash-ten-minutes-late-im-still-alive-bhumi-chauhan