

Ahmedabad Plane Crash : ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತ ಘಟಿಸಿದೆ. ಏರ್ ಇಂಡಿಯಾ ವಿಮಾನ ಪತನದಲ್ಲಿ ಕೇವಲ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕಿದರೆ, ಉಳಿದ ಎಲ್ಲ 241 ಪ್ರಯಾಣಿಕರು ಮತ್ತು ಸಿಬ್ಬಂದಿ ದುರಂತ ಸಾವಿಗೀಡಾಗಿದ್ದಾರೆ. ಅಲ್ಲದೆ, ವಿಮಾನ, ಮೇಘನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವಿಗೀಡಾಗಿದ್ದಾರೆ. ಈ ಅವಘಡದಲ್ಲಿ ಒಟ್ಟು 265 ಮಂದಿ ಅಸುನೀಗಿದ್ದಾರೆ. ಈ ಘಟನೆಯಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಮಹಿಳಾ ಜ್ಯೋತಿಷಿ ಒಬ್ಬರು ಒಂದು ವಾರದ ಹಿಂದೆಯೇ ವಿಮಾನ ಪತನ ಬಗ್ಗೆ ಭವಿಷ್ಯ ನುಡಿದಿದ್ದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜ್ಯೋತಿಷಿ ಶರ್ಮಿಷ್ಠಾ ಎಂಬುವರು ವಿಮಾನ ಪತನದ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ಇದೀಗ ಆ ಭವಿಷ್ಯವಾಣಿಯನ್ನು ಮತ್ತೆ ನೆನಪಿಸಿದ್ದಾರೆ. 2025ರಲ್ಲಿ ವಿಮಾನ ಅಪಘಾತ ಖಂಡಿತವಾಗಿಯೂ ಸಂಭವಿಸುತ್ತದೆ ಎಂದು ಶರ್ಮಿಷ್ಠಾ ಅವರು ಭವಿಷ್ಯ ನುಡಿದಿದ್ದರು. ಅಲ್ಲದೆ, ಇದುವರೆಗಿನ ಅತ್ಯಂತ ಕೆಟ್ಟ ವಿಮಾನ ಅಪಘಾತವಾಗಲಿದೆ ಅಂತಾನೂ ಹೇಳಿದ್ದರು. ಇದೇ ಜೂನ್ 5ರಂದು ಭವಿಷ್ಯ ನುಡಿದಿದ್ದರು. ಇದಾದ ಒಂದೇ ವಾರದಲ್ಲಿ ಅಂದರೆ, ಜೂನ್ 12ರಂದು ದುರ್ಘಟನೆ ಸಂಭವಿಸಿದೆ.
ಕಳೆದ ವರ್ಷ ಡಿಸೆಂಬರ್ 29ರಂದು ಮೊದಲ ಟ್ವೀಟ್ ಮಾಡಿರುವ ಶರ್ಮಿಷ್ಠಾ, 2025ರಲ್ಲಿ ವಿಮಾನಯಾನ ಕ್ಷೇತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ವಿಮಾನ ಅಪಘಾತದ ಸುದ್ದಿಗಳು ನಮಗೆ ಆಘಾತವನ್ನುಂಟು ಮಾಡಬಹುದು. ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಸ್ವಲ್ಪ ಸುಧಾರಣೆ ಪ್ರಾರಂಭವಾಗಿದೆ. ಗುರುವು ಗ್ರಹವು ತಿಂಗಳಿಗೆ ಸುಮಾರು 6.5 ಡಿಗ್ರಿ ವೇಗದಲ್ಲಿ ಮೃಗಶಿರ ಮತ್ತು ಆರ್ದ್ರಾದ ಮಿಥುನ ಭಾಗದಲ್ಲಿರುವಾಗ, ವಿಮಾನಯಾನವು ಅಭಿವೃದ್ಧಿ ಹೊಂದುತ್ತದೆ. ಆದರೆ, ಸುರಕ್ಷತೆ ಮತ್ತು ಭದ್ರತೆ ಕಾಣೆಯಾಗುತ್ತದೆ ಎಂದು ಶರ್ಮಿಷ್ಠಾ ಭವಿಷ್ಯ ನುಡಿದಿದ್ದರು. ಜೂನ್ 5ರಂದು ಮತ್ತೊಂದು ಟ್ವೀಟ್ ಮಾಡಿರುವ ಶರ್ಮಿಷ್ಠಾ, ಟಾಟಾ ಕಂಪನಿ ಹೈದರಾಬಾದ್ನಲ್ಲಿ ರಫೇಲ್ ವಿಮಾನ ನಿರ್ಮಾಣ ಮಾಡಲಿದೆ. ಇದು ಕೇವಲ ವಾಯುಯಾನ ವಿಸ್ತರಣೆ. ಇಸ್ರೋ ಮುಂಬರುವ ಎರಡು ವರ್ಷಗಳಲ್ಲಿ ಬಾಹ್ಯಾಕಾಶ ಮತ್ತು ಉಪಗ್ರಹ ಇಂಜಿನಿಯರಿಂಗ್ ಹಾಗೂ ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಜಗತ್ತನ್ನು ಅಚ್ಚರಿಗೊಳಿಸಲಿದೆ. ಕಳೆದ ವರ್ಷ ನಕ್ಷತ್ರ ಸಂಚಾರದ ಮೂಲಕ ಇದನ್ನು ಊಹಿಸಲಾಗಿತ್ತು. 2025 ರಲ್ಲಿ ವಿಮಾನ ಅಪಘಾತ ಮತ್ತು ವಾಯುಯಾನದಲ್ಲಿ ವಿನಾಶದ ಮುನ್ಸೂಚನೆಯನ್ನು ನಾನು ಇನ್ನೂ ಬಲವಾಗಿ ನಂಬುತ್ತೇನೆ ಎಂದಿದ್ದರು.
ನಿನ್ನೆ (ಜೂನ್ 12) ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ವಿಮಾನ ಪತನದ ಬೆನ್ನಲ್ಲೇ ಟ್ವೀಟ್ ಮಾಡಿರುವ ಶರ್ಮಿಷ್ಠಾ, ಇಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ನಾವು ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಗುರು ಗ್ರಹ ಇನ್ನೂ ಆರ್ದ್ರಾ ಪ್ರವೇಶಿಸಿಲ್ಲ ಮತ್ತು ಭಾರತದ ಮಂಗಳ ಮಹಾದಶಾ ಇನ್ನೂ ಪ್ರಾರಂಭವಾಗಿಲ್ಲ. ಅಷ್ಟರಲ್ಲೇ ಬಹಳಷ್ಟು ಪ್ರಾರಂಭವಾಗಿದೆ. ನನಗೆ ತುಂಬಾ ಮಂದಿ ಟ್ಯಾಗ್ ಮಾಡುತ್ತಿದ್ದಾರೆ. ಅಲ್ಲದೆ, ನನ್ನ ಹಳೆಯ ಟ್ವೀಟ್ ಅನ್ನು ರೀಟ್ವೀಟ್ ಮಾಡುತ್ತಿದ್ದಾರೆ. ಆದರೆ, ನಾನು ಎಲ್ಲರಿಗೂ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಕ್ಷಮಿಸಿ ಎಂದು ಶರ್ಮಿಷ್ಠಾ ಟ್ವೀಟ್ ಮಾಡಿದ್ದಾರೆ.
ಶರ್ಮಿಷ್ಠಾ ಅವರು ನುಡಿದ ಭವಿಷ್ಯವಾಣಿ ನಿಜವಾಗಿದ್ದು, ಅನೇಕ ನೆಟ್ಟಿಗರು ಅವರ ಭವಿಷ್ಯವಾಣಿಯ ಟ್ವೀಟ್ಗಳನ್ನು ರೀಟ್ವೀಟ್ ಮಾಡಿ, ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಭವಿಷ್ಯ ನಿಜವಾಗಿದೆ ಎನ್ನುತ್ತಿದ್ದಾರೆ. ಕೆಲವರು ಶರ್ಮಿಷ್ಠಾ ವಿರುದ್ಧವೂ ಕಿಡಿಕಾರಿದ್ದಾರೆ. ನೆಟ್ಟಿಗರೊಬ್ಬ ನೀವು ದೇವರಿಗಿಂತ ದೊಡ್ಡವರಲ್ಲ ಎಂದಿದ್ದು, ಇದಕ್ಕೆ ಉತ್ತರಿಸಿರುವ ಶರ್ಮಿಷ್ಠಾ, ನಿಜ ಆದರೆ, ಪ್ರಾರಬ್ಧದಿಂದ ತಪ್ಪಿಸಿಕೊಳ್ಳಲಾಗದು ಎಂದು ಉತ್ತರಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.
* ಎಲ್ಲಿ ದುರಂತ?: ಅಹಮದಾಬಾದ್ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್ನಲ್ಲಿ ಪತನ
* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ