ಉಮಾಶ್ರೀ, ಬಿ.ಜಯಶ್ರೀ ಸೇರಿ 16 ಸಾಧಕಿಯರಿಗೆ 'ವಾವ್' ಪ್ರಶಸ್ತಿ ಪ್ರದಾನ | Wow Award

dk - 2025-06-05T210452.954
Published on

Wow Award: ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ರಂಗಭೂಮಿ ಗಾಯಕಿ ಮತ್ತು ಮಾಜಿ ಸಂಸದೆ ಪದ್ಮಶ್ರೀ ಬಿ. ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್‌ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಸೇರಿ 16 ಸಾಧಕಿಯರಿಗೆ ʼವುಮೆನ್ ಆಫ್ ವರ್ತ್ʼ(ವಾವ್) ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಬೆಂಗಳೂರಿನ ಯಶವಂತಪುರದ ಖಾಸಗಿ ಹೋಟೆಲ್‌ನಲ್ಲಿ ಉಬುಂಟು ಮಹಿಳಾ ನಿಯೋಗವು ಬುಧವಾರ ಆಯೋಜಿಸಿದ್ದ, ವಾವ್ 2025ರ 5ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಕಲೆ, ಸಂಸ್ಕೃತಿ, ಉದ್ಯಮ ಮತ್ತು ಸಾರ್ವಜನಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಸಾಧನೆಗೈದ 16 ಮಹಿಳಾ ಸಾಧಕಿಯರಿಗೆ ʼವಾವ್‌ʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ನಿಯೋಗದ ಸ್ಥಾಪಕರಾದ ಕೆ. ರತ್ನಪ್ರಭಾ ಮಾತನಾಡಿ, ʼಆತ್ಮದೊಂದಿಗೆ ಬೆಳವಣಿಗೆʼ ಎಂಬ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಕರ್ನಾಟಕ ಜಾಗತಿಕ ಹೂಡಿಕೆದಾರರ ಸಭೆಗಳಂತಹ ವೇದಿಕೆಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿಸಿದ ಕಾರ್ಯಗಳನ್ನು ನೆನಪಿಸಿಕೊಂಡರು.ʼಉಬುಂಟುʼಎಂದರೆ ನಾವಿದ್ದೇವೆ, ಒಟ್ಟಿಗೆ ಬೆಳೆಯುತ್ತೇವೆ ಎಂಬ ತತ್ವಶಾಸ್ತ್ರದೊಂದಿಗೆ ನಿಂತಿದ್ದೇವೆ ಎಂದರು. ಪ್ರಮುಖರಾದ ಪಾರುಲ್ ಸೋನಿ, ರಾಜ್ ಕುಮಾರ್ ಖತ್ರಿ, ನಿತೇಶ್ ಕೆ.ಪಾಟೀಲ್ ಮಾತನಾಡಿದರು.

ಇದೇ ವೇಳೆ ಜಾಗತಿಕವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತಿರುವ ಉಬುಂಟು ನಿಯೋಗವು 2030ರ ವೇಳೆಗೆ 195 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿತು. ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸುಮಾರು 300 ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net