

ವಿಶ್ವ ಪರಿಸರ ದಿನದ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಯಿತು.
ಗೋಪಾಲಸ್ವಾಮಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮೈಸೂರು ನಗರ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಪರಿಸರ ಕಾಳಜಿ ಕಲ್ಪನೆಗೆ ಬಣ್ಣ ತುಂಬಿದರು.
1 ರಿಂದ 4ನೇ ತರಗತಿ (ಸಬ್ ಜೂನಿಯರ್), 5 ರಿಂದ 7 ತರಗತಿ (ಜೂನಿಯರ್) ಹಾಗೂ 8 ರಿಂದ 10ನೇ ತರಗತಿ (ಸೀನಿಯರ್) ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಬ್ ಜೂನಿಯರ್ ವಿಭಾಗಕ್ಕೆ ‘ನಮ್ಮ ಪರಿಸರ’ ವಿಷಯ, ಜೂನಿಯರ್ ವಿಭಾಗಕ್ಕೆ ನನ್ನ ಮನೆಯಂಗಳ, ಸೀನಿಯರ್ ವಿಭಾಗಕ್ಕೆ ‘ಪ್ಲಾಸ್ಟಿಕ್ ಮುಕ್ತ ಪರಿಸರ’ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಎಲ್ಲೆಡೆಯಿಂದ ಆಗಮಿಸಿದ್ದ ಮಕ್ಕಳ ಕುಂಚದಲ್ಲಿ ಸುಂದರ ಪರಿಸರ, ವರ್ಣರಂಜಿತ ಮನೆಗಳು, ಭವಿಷ್ಯದ ಪರಿಸರ ಮಾದರಿ, ಬೆಟ್ಟ, ಗುಡ್ಡ, ಮನೆಯಂಗಳ, ಕಾಡು...ಹೀಗೆ ಹಲವು ಚಿತ್ರಗಳು ಅರಳಿದವು.
ಸಬ್ ಜೂನಿಯರ್ ವಿಭಾಗದಲ್ಲಿ ಬೇಡನ್ ಪೊವೆಲ್ ಪಬ್ಲಿಕ್ ಶಾಲೆ 3ನೇ ತರಗತಿಯ ರಾಜ್‌ದೀಪ್ ನಂದಿ(ಪ್ರಥಮ), ಬೇಡನ್ ಪೊವೆಲ್ ಪಬ್ಲಿಕ್ ಶಾಲೆಯ 3ನೇ ತರಗತಿಯ ರಿಷಿಕಾ ನಂದಿ (ದ್ವಿತೀಯ), ಶ್ರೀರಾಂಪುರದ ಸೆಂಟ್ ರೋಸೆಲ್ಲೊಸ್ ಶಾಲೆ 3ನೇ ತರಗತಿಯ ಎನ್.ತನಿಷಾ ನಂದಿ(ತೃತೀಯ), ಗೋಪಾಲಸ್ವಾಮಿ ಶಾಲೆ 1ನೇ ತರಗತಿಯ ಆರ್.ಶಶಿಧವ(ಸಮಾಧಾನಕರ) ಬಹುಮಾನ ಪಡೆದರು.
ಜೂನಿಯರ್ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಶಾಲೆಯ 7ನೇ ತರಗತಿಯ ಕೃತ್ವಿನಿ ವಿಜಯ್(ಪ್ರಥಮ), ಭಾರತೀಯ ವಿದ್ಯಾ ಭವನ ಶಾಲೆ 6ನೇ ತರಗತಿಯ ತೀರ್ಥ್ ಬಿ.ಸೋನಿ(ದ್ವಿತೀಯ), ಶ್ರೀ ಶಾರದಾ ಪಬ್ಲಿಕ್ ಶಾಲೆ 6ನೇ ತರಗತಿಯ ಕೆ.ಧೀರಜ್ (ತೃತೀಯ), ಆರ್.ವರದೇಗೌಡ(ಸಮಾಧಾನಕರ) ಬಹುಮಾನ ಪಡೆದರು.
ಸೀನಿಯರ್ ವಿಭಾಗದಲ್ಲಿ ಶ್ರೀ ಶಾರದಾ ಪಬ್ಲಿಕ್ ಶಾಲೆಯ 10ನೇ ತರಗತಿಯ ಕೆ.ದೀಕ್ಷಾ(ಪ್ರಥಮ), ವಿಜಯನಗರದ ಸಂತ ಜೋಸೆಫ್ ಶಾಲೆಯ 8ನೇ ತರಗತಿಯ ಎಸ್.ಕ್ಷಿತಿ(ದ್ವಿತೀಯ), ವಿಜಯನಗರದ ಸಂತ ಜೋಸೆಫ್ ಶಾಲೆಯ 8ನೇ ತರಗತಿಯ ಧೃತಿ ವಿ.ಷಾ(ತೃತೀಯ), ಗೋಪಾಲಸ್ವಾಮಿ ಶಾಲೆ 9ನೇ ತರಗತಿಯ ಎಂ.ಜೈಶ್ರೀ(ಸಮಾಧಾನಕರ) ಬಹುಮಾನ ಪಡೆದರು.
ತೀರ್ಪುಗಾರರಾಗಿ ಕಲಾವಿದರಾದ ಮಹದೇವ ಶೆಟ್ಟಿ, ಶಿವಕುಮಾರ್ ಕಾರ್ಯನಿರ್ವಹಿಸಿದರು. ಪ್ರತಿ ವಿಭಾಗದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಥಮ 3,000 ರೂ., ದ್ವಿತೀಯ 2,000 ರೂ., ತೃತೀಯ 1,000 ರೂ. ಹಾಗೂ ಸಮಾಧಾನಕರ ಬಹುಮಾನವಾಗಿ 500 ರೂ. ನೀಡಲಾಯಿತು. ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ನೀಡಲಾಯಿತು.
ಹಿರಿಯ ಚಿತ್ರ ಕಲಾವಿದ ಮಹದೇವ ಶೆಟ್ಟಿ ಮಾತನಾಡಿ, ಮಕ್ಕಳಲ್ಲಿ ವಿಶೇಷ ಕಲೆ ಇರುತ್ತದೆ. ಅದನ್ನು ಪಾಲಕರು ಅರ್ಥ ಮಾಡಿಕೊಂಡು ಹೊರಜಗತ್ತಿಗೆ ತೋರಿಸಬೇಕು. ವಿಜಯವಾಣಿ ದಿನ ಪತ್ರಿಕೆ ಪರಿಸರ ದಿನದ ಅಂಗವಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಚಿತ್ರಕಲೆ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಇಂದಿನ ದಿನಕ್ಕೆ ಬೇಕಾದ ವಿಷಯಗಳ ಮೇಲೆ ಚಿತ್ರ ಬಗ್ಗೆ ಬಿಡಿಸುವಂತೆ ಸ್ಪರ್ಧಾ ವಿಷಯ ನೀಡಲಾಗಿದೆ. ಮಕ್ಕಳು ಕೂಡ ಅದೇ ರೀತಿ ಚಿತ್ರ ಬಿಡಿಸಿದ್ದಾರೆ ಎಂದರು.
ವಿಶೇಷವಾಗಿ ಇಲ್ಲಿ ಯಾವುದೇ ವಿದ್ಯಾರ್ಥಿ ಕೂಡ ನಗರ ಪ್ರದೇಶದಲ್ಲಿ ವಾಸಿಸುವ ಮಾದರಿ ಗುಂಪು ಮನೆಗಳ ಚಿತ್ರ ಬರೆದಿಲ್ಲ. ಬದಲಿಗೆ ಒಂಟಿ ಮನೆ, ಬೆಟ್ಟ, ಗುಡ್ಡ, ಉತ್ತಮ ಪರಿಸರ ಹೊಂದಿರುವ ಮನೆಗಳ ಚಿತ್ರ ಬಿಡಿಸಿದ್ದಾರೆ. ಮೂಲಕ ತಮಗೆ ಗುಂಪು ಮನೆಗಳು ಇಷ್ಟ ಇಲ್ಲ ಎಂದು ತಿಳಿಸಿದ್ದಾರೆ. ಇವರೆಲ್ಲ ನಗರ ಪ್ರದೇಶದ ಮಕ್ಕಳಾದರೂ ಗ್ರಾಮಾಂತರ ಪ್ರದೇಶದ ರೀತಿಯೇ ಪರಿಸರದೊಂದಿಗೆ ಬದುಕಬೇಕು ಎಂದು ತಮ್ಮ ಚಿತ್ರದಲ್ಲಿ ಅಭಿವ್ಯಕ್ತಪಡಿಸಿದ್ದಾರೆ ಎಂದರು.
ಚಿತ್ರಕಲೆ ವಿಶ್ವ ಭಾಷೆಯಾಗಿದೆ. ಎಲ್ಲರಿಗೂ ಅರ್ಥ ಆಗುವ ಭಾಷೆಯೂ ಇದಾಗಿದೆ. ಎಲ್ಲ ಭಾಷೆಗಳಿಗೂ ಚಿತ್ರ ಕಲೆಯೇ ಮೂಲ. ಎಲ್ಲ ಭಾಷೆಗಳ ಲಿಪಿ ಕೂಡ ಒಂದೊಂದು ಚಿತ್ರದ ಮೂಲಕ ಸಿದ್ಧಗೊಂಡಿದೆ. ಚಿತ್ರಕಲೆ ಸರ್ವವ್ಯಾಪಿ ಎಂದರು.
ಚಿತ್ರಗಳ ಮೂಲಕ ಮಕ್ಕಳ ಅಭಿವ್ಯಕ್ತಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಮಕ್ಕಳು ಬಣ್ಣದ ಜತೆ ಹೆಚ್ಚು ಆಡಬೇಕು. ಆಗ ಅವರ ಕ್ರಿಯಾಶೀಲತೆ, ಬೌದ್ಧಿಕ ಮಟ್ಟ ಹೆಚ್ಚುತ್ತದೆ. ಈ ದೃಷ್ಟಿಯಿಂದ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ವಿಜಯವಾಣಿ ಒಳ್ಳೆಯ ಕೆಲಸ ಮಾಡಿದೆ. ಇದರಿಂದ ಮಕ್ಕಳಿಗೆ ಪ್ಲಾಸ್ಟಿಕ್‌ಮುಕ್ತ ಪರಿಸರದ ಬಗ್ಗೆ ಗೊತ್ತಾಗುತ್ತದೆ ಎಂದರು.
ಜ್ಞಾನಧ್ವನಿ ಸಮುದಾಯ ಬಾನುಲಿ ಕೇಂದ್ರದ ನಿರ್ದೇಶಕ ಡಾ.ಪಾಂಡುರಂಗ ವಿಠ್ಠಲ್ ಮಾತನಾಡಿ, ವಿಜಯವಾಣಿ ಪತ್ರಿಕೆಯು ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಪ್ರಯತ್ನ ಮಾಡಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಮಕ್ಕಳು ಚಿತ್ರ ಬಿಡಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಯಬೇಕು. ಪರಸರ ರಕ್ಷಣೆಗೆ ಕೈಜೋಡಿಸಬೇಕು ಎಂದರು.
ಶ್ರೀಯೋಗಾನರಸಿಂಹ ಸ್ವಾಮಿ ದೇವಾಲಯ ಟ್ರಸ್ಟ್‌ನ ಆಡಳಿತಾಧಿಕಾರಿ ಶ್ರೀನಿವಾಸನ್ ಮಾತನಾಡಿ, ವಿಶ್ವದಲ್ಲೇ ಅಭಿವೃದ್ಧಿ ಹೊಂದಿರುವ ದೇಶ ಎಂದರೆ ಅಮೆರಿಕ. ಅದೇ ರೀತಿ ನಂ.1 ಕನ್ನಡ ದಿನ ಪತ್ರಿಕೆ ಎಂದರೆ ಅದು ನಮ್ಮ ವಿಜಯವಾಣಿ ಆಗಿದೆ. ಪತ್ರಿಕೆಯು ನಾನಾ ಲೇಖನಗಳ ಮೂಲಕ ಸಮಾಜವನ್ನು ತಿದ್ದುವ ಜತೆಗೆ ಚಿತ್ರ ಬಿಡಿಸುವ ಸ್ಪರ್ಧೆಗಳಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪರಿಸರ ಜ್ಞಾನ ಹೆಚ್ಚಿಸಬೇಕು ಎಂದರು.
ಮುಖ್ಯಶಿಕ್ಷಕ ಎಸ್.ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್(ಪಿಯಾ), ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ, ಕಲಾವಿದ ಶಿವಕುಮಾರ್ ಇತರರಿದ್ದರು.
ಮಗನೊಂದಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಿಯಾಗಿರುವುದಕ್ಕೆ ತುಂಬ ಖುಷಿಯಾಗಿದೆ. ಸ್ಪರ್ಧೆಯಲ್ಲಿ ಮಕ್ಕಳು ತಮ್ಮದೇ ಆದ ಕಲ್ಪನೆಯಲ್ಲಿ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ. ಮಕ್ಕಳಲ್ಲಿರುವ ಕಲಾ ಪ್ರತಿಭೆ ಅದ್ಭುತವಾದದ್ದು. ಶಿಕ್ಷಣಕ್ಕೂ ಚಿತ್ರಕಲೆ ಪೂರಕವಾಗಿರುವ ಹಿನ್ನೆಲೆಯಲ್ಲಿ ಚಿತ್ರಕಲೆಯಲ್ಲಿ ತೊಡಗುವ ಮಕ್ಕಳಿಗೆ ಪಾಲಕರು ಪ್ರೋತ್ಸಾಹ ನೀಡಬೇಕು. ಕೃಪಾ, ಗೋಕುಲಂ ಕೋಟ್ ಇಂತಹ ಚಿತ್ರಕಲಾ ಸ್ಪರ್ಧೆಗಳು ಹೆಚ್ಚು ನಡೆಯಬೇಕು. ಇದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ. ಪಾಲಕರು ಮಕ್ಕಳನ್ನು ಚಿತ್ರಕಲೆಯಲ್ಲಿ ತೊಡಗುವಂತೆ ಮಾಡಬೇಕು. ಆಗ ಮಕ್ಕಳಲ್ಲಿರುವ ಪ್ರತಿಭೆ ಅರಳಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವ ವಿಜಯವಾಣಿ ಪತ್ರಿಕೆಗೆ ಧನ್ಯವಾದ ಸಲ್ಲಿಸುತ್ತೇನೆ. ರಮ್ಯಾ, ದಟ್ಟಗಳ್ಳಿ