ಮಹಿಳೆಯರ ಚಿನ್ನಾಭರಣ ದೋಚಿ ಹೊಸ ಸಿನಿಮಾ ನಿರ್ಮಾಣ: ಪತ್ನಿ, ಪುತ್ರನ ಸಮೇತ ಸಿಕ್ಕಿಬಿದ್ದ ನಟ!

Tamil Nadu Actor
Published on

ಚೆನ್ನೈ: ಮಹಿಳೆಯರ ಒಡವೆಗಳನ್ನು ಕದ್ದು ಸಿನಿಮಾ ಮಾಡುತ್ತಿದ್ದ ನಟನನ್ನು ಆತನ ಪತ್ನಿ ಮತ್ತು ಪುತ್ರನ ಸಮೇತ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಮೇ 15 ರಂದು ತೂತುಕುಡಿ ಜಿಲ್ಲೆಯ ಕೊವಿಲಪಟ್ಟಿ ಮೂಲದ ಪಳನಿಸ್ವಾಮಿ ಮತ್ತು ಪತ್ನಿ ಪೂಮರಿ ಅಲಿಯಾಸ್​ ಮುತ್ತುಮಾರಿ ಎಂಬುವರು ತಮ್ಮ ಮನೆಯ ಮುಂದೆ ಕುಳಿತಿದ್ದಾಗ, ಎರಡು ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳು, ಮುತ್ತುಮಾರಿಯ ಕುತ್ತಿಗೆಯಲ್ಲಿದ್ದ 12 ಪೌಂಡ್​ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು.

ವಿಶೇಷ ಪಡೆ

ಇದೇ ರೀತಿ ಕೋವಿಲಪಟ್ಟಿಯ ಕಥಿರೇಸನ್​ ದೇವಸ್ಥಾನದ ರಸ್ತೆಯಲ್ಲಿ ಗೋಪಾಲಸ್ವಾಮಿ ಎಂಬುವರ ಪತ್ನಿ ವಲಿತಥೈ ಅವರಿಂದ 6 ಪೌಂಡ್​ ಚಿನ್ನಾಭರಣವನ್ನು ದುಷ್ಕರ್ಮಿಗಳು ಎಗಿರಿಸಿದ್ದರು. ಒಂದೇ ದಿನ ಎರಡು ಪ್ರಕರಣಗಳು ನಡೆದಿದ್ದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಈ ಸಂಬಂಧ ದೂರು ದಾಖಲಾದ ಬಳಿಕ ಆರೋಪಿಗಳ ಪತ್ತೆಗೆ ವಿಶೇಷ ಪಡೆಯನ್ನು ಪೊಲೀಸ್​ ಇಲಾಖೆ ರಚನೆ ಮಾಡಿತು.

ಕುಟುಂಬವೇ ಕಳ್ಳತನದಲ್ಲಿ

ಕಾರ್ಯಾಚರಣೆಗೆ ಇಳಿದ ಪೊಲೀಸರು ಸುಲಿಗೆ ನಡೆದ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 42 ವರ್ಷದ ಸನಾಬುಲ್ಲಾ (42), ಪತ್ನಿ ರಶಿಯಾ (38) ಮತ್ತು ದಂಪತಿಯ ಪುತ್ರ ಜಫಾರ್ ಕಳ್ಳತನ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿತು. ಬಳಿಕ ಪೊಲೀಸರು ಮೂವರನ್ನು ಬಂಧಿಸಿದರು. ಇದೀಗ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

ಪೋಷಕ ಕಲಾವಿದ

ಸನಾಬುಲ್ಲಾ ಸೇರಿದಂತೆ ಎಲ್ಲಾ 3 ಜನರು ಮಹಾರಾಷ್ಟ್ರದ ಮೂಲದವರು. ಕಳೆದ ಕೆಲವು ದಿನಗಳಿಂದ ದಿಂಡಿಗಲ್ಲುವಿನಲ್ಲಿ ವಾಸವಿದ್ದಾರೆ. ಸನಾಬುಲ್ಲಾ ಪೋಷಕ ಕಲಾವಿದನಾಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಸನಾಬುಲ್ಲಾ ಮಗ ಜಾಫರ್ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಡ್ರಾಪ್​ ಮಾಡುವುದಾಗಿ ಕರೆದುಕೊಂಡು ಹೋಗಿ ಆಭರಣಗಳನ್ನು ಸುಲಿಗೆ ಮಾಡುತ್ತಿದ್ದ. ಬಂದ ಹಣದಲ್ಲಿ ಸನಾಬುಲ್ಲಾ ‘ನಾನ್ ಅವಂಥಾನ್​’ ಎಂಬ ಸಿನಿಮಾ ಮಾಡಿದ್ದಾನೆ. ಅದರಲ್ಲಿ ಸನಾಬುಲ್ಲಾ ಪ್ರಮುಖ ಪಾತ್ರ ನಿರ್ವಹಿಸಿದ್ದಾನೆ. ಈ ಚಿತ್ರ ಬಿಡುಗಡೆಯಾಗುವಷ್ಟರಲ್ಲಿ ಸನಾಬುಲ್ಲಾ ತನ್ನ ಕುಟುಂಬ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಬಂಧಿತ ಸನಾಬುಲ್ಲಾ, ಪತ್ನಿ ಮತ್ತು ಮಗನನ್ನು ಪೊಲೀಸರು ನಿನ್ನೆ ಕೋವಿಲಪಟ್ಟಿ ಒಂದನೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ನಳಿಕ ಜೈಲಿಗೆ ಹಾಕಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net