

ನವದೆಹಲಿ: ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ ಬಗ್ಗೆ ಪಾಸಿಟಿವ್ಗಿಂತ ನೆಗಿಟಿವ್ ಕಾಮೆಂಟ್ಗಳೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿವೆ. ಈ ಸಿನಿಮಾ ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಪ್ರಮಾಣೀಕರಿಸುವಂತೆ ಕೋರಿ ಹಿಂದು ಸೇನಾ ಸಂಘಟನೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
ಆದಿಪುರುಷ್ ಸಿನಿಮಾ ವಿರುದ್ಧ ಹಿಂದು ಸೇನಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ ಅವರು ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದಾರೆ.
ಇದು ಭಾರತೀಯ ಸಂವಿಧಾನದ 226 ನೇ ವಿಧಿ ಅಡಿಯಲ್ಲಿ ಬರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ರೂಪದ ರಿಟ್ ಅರ್ಜಿಯಾಗಿದೆ. ಧಾರ್ಮಿಕ ಮುಖಂಡರು / ಪಾತ್ರಗಳು / ವ್ಯಕ್ತಿಗಳನ್ನು ಕೆಟ್ಟ ಅಭಿರುಚಿಯಲ್ಲಿ ಚಿತ್ರಿಸುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಪ್ರತಿವಾದಿಗಳಿಗೆ ನಿರ್ದೇಶನದ ನೀಡುವಂತೆ ಅರ್ಜಿಯಲ್ಲಿ ಕೇಳಿಕೊಳ್ಳಲಾಗಿದೆ. ಅಲ್ಲದೆ, ಸಾರ್ವಜನಿಕ ಪ್ರದರ್ಶನಕ್ಕಾಗಿ ಆದಿಪುರುಷ್ ಚಿತ್ರವನ್ನು ಪ್ರಮಾಣೀಕರಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಚಿತ್ರವು ಧಾರ್ಮಿಕ ಮುಖಂಡರು/ಪಾತ್ರಗಳು/ಆಕೃತಿಗಳನ್ನು ಅಸಮರ್ಪಕವಾಗಿ ಮತ್ತು ಅನುಚಿತವಾಗಿ ಚಿತ್ರಿಸುವ ಮೂಲಕ ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮುಖ್ಯ ಪಾತ್ರಧಾರಿ ರಾಮನು ಸೇರಿದಂತೆ ಎಲ್ಲ ಪಾತ್ರಗಳ ಬಗ್ಗೆ ಸಿನಿಮಾದಲ್ಲಿ ತಪ್ಪಾದ ವಿವರಣೆಯನ್ನು ನೀಡಲಾಗಿದೆ. ವಾಲ್ಮಿಕಿ ಮಹರ್ಷಿ ಮತ್ತು ತುಳಸಿದಾಸರು ಬರೆದಂತಹ ಪಾತ್ರಗಳಿಗೂ ಚಿತ್ರದಲ್ಲಿ ಚಿತ್ರೀಕರಿಸಿರುವ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ ಮತ್ತು ತಪ್ಪಾಗಿ ಬಿಂಬಿಸಲಾಗಿದೆ ಎಂದು ಪಿಐಎಲ್ನಲ್ಲಿ ಉಲ್ಲೇಖಿಸಲಾಗಿದೆ.
ಆದಿಪುರುಷ್ ಸಿನಿಮಾ ತಂಡ ಸೀತಾ ದೇವಿಯ ಜನ್ಮಸ್ಥಳ ವಿಚಾರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಸಿನಿಮಾದ ಒಂದು ಡೈಲಾಗ್ ವಿವಾದಕ್ಕೆ ಕಾರಣವಾಗಿದೆ. ಸೀತೆ ಭಾರತದವಳು ಎನ್ನುವ ಡೈಲಾಗ್ನಿಂದ ಆದಿಪುರುಷನಿಗೆ ನೇಪಾಳದಲ್ಲಿ ಬ್ಯಾನ್ ಬಿಸಿ ತಟ್ಟಿದೆ. ಅಲ್ಲದೆ, ನೇಪಾಳದ ಕಠ್ಮಂಡುವಿನ ಮೇಯರ್ ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಸೀತೆ ಹುಟ್ಟಿದ್ದು ನೇಪಾಳದಲ್ಲಿ, ಆ ಬಳಿಕ ರಾಮ ಆಕೆಯನ್ನು ವಿವಾಹವಾಗಿ ಕರೆದುಕೊಂಡು ಹೋದರು. ಹೀಗಾಗಿ ಸಿನಿಮಾದಲ್ಲಿನ ಡೈಲಾಗ್ ತೆಗೆದು ಹಾಕುವಂತೆ ಒತ್ತಾಯಿಸಲಾಗಿದೆ. ಇಲ್ಲವಾದರೆ ನೇಪಾಳದಲ್ಲಿ ಆದಿಪುರುಷ ಸಿನಿಮಾ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆದಿಪುರುಷ್ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾವನ್ನು ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್)