

ಶಿವಮೊಗ್ಗ: ಯುವಕನೊಬ್ಬ ಸಾವಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ದೂರು ದಾಖಲಾಗಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ನಡೆದಿದೆ.
ಪೊಲೀಸರ ಕಿರುಕುಳ ತಾಳಲಾರದೇ ಯುವಕ ನೇಣಿಗೆ ಶರಣಾದನಾ ಎಂಬ ಪ್ರಶ್ನೆ ಮೂಡಿದೆ. ಯಾವುದೇ ದೂರು ಇಲ್ಲದಿದ್ದರೂ ಯುವಕನನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಸಾವಿನ ಹಾದಿ ಹಿಡಿದ್ದಾನೆ ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇದೀಗ ಯುವಕನ ಆತ್ಮಹತ್ಯೆ ಸಂಬಂಧ ಶಿವಮೊಗ್ಗದ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್ ವಿರುದ್ಧ ಕೇಸು ದಾಖಲಾಗಿದೆ. ಪೊಲೀಸರ ವಿರುದ್ಧ ದೂರು ಮೃತ ಯುವಕನ ಪತ್ನಿ ಕಮಲಾಕ್ಷಿ ದೂರು ದಾಖಲಿಸಿದ್ದಾರೆ.
ಮೃತ ಯುವಕನನ್ನು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಈತ ಕನ್ನೆಕೊಪ್ಪ ಗ್ರಾಮದ ನಿವಾಸಿ. ಜೂನ್ 11ರಂದು ಕಾರಣವಿಲ್ಲದೆ ಹೊಳೆಹೊನ್ನೂರು ಪೊಲೀಸರು ಮಂಜುನಾಥ್ನನ್ನು ಕರೆದೊಯ್ದಿದ್ದರು. ದೂರು ನೀಡದಿದ್ದರೂ ಅಥವಾ ದಾಖಲಾಗದಿದ್ದರೂ ಮಂಜುನಾಥ್ಗೆ ನಿರಂತರವಾಗಿ ಡ್ರಿಲ್ ಮಾಡಿದ್ದರು. ಠಾಣೆಯಲ್ಲಿ ಸಿಕ್ಕಾಪಟ್ಟೆ ಥಳಿಸಿದ ಬಳಿಕ ಮಂಜುನಾಥ್ನನ್ನು ಬಿಟ್ಟು ಕಳುಹಿಸಲಾಗಿತ್ತು.
ಈ ಘಟನೆಯಿಂದ ಮನನೊಂದಿದ್ದ ಮಂಜುನಾಥ್ ಮರ್ಯಾದೆಗೆ ಅಂಜಿ ಮನೆಯಿಂದ ಹೊರಗೆ ಎಲ್ಲೂ ಹೋಗದೆ ಕಳೆದ ನಾಲ್ಕು ದಿನದಿಂದ ಮನೆಯಲ್ಲಿಯೇ ಉಳಿದಿದ್ದ. ಅಂತಿಮವಾಗಿ ಜೂನ್ 15ರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಠಾಣೆಯಲ್ಲಿ ಪೊಲೀಸರ ಕಿರುಕುಳದಿಂದಲೇ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಕಮಲಾಕ್ಷಿ ದೂರು ನೀಡಿದ್ದಾರೆ.
ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಬಳಿಕ ಗ್ರಾಮಸ್ಥರು ಗಲಾಟೆ ನಡೆಸಿದಾಗ, ಕೊನೆಗೂ ನಿನ್ನೆ ರಾತ್ರಿ ನಾಲ್ವರು ಪೊಲೀಸ್ ಸಿಬ್ಬಂದಿ ವಿರುದ್ಧ ಹೊಳೆಹೊನ್ನೂರು ಠಾಣಾ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪ್ರಕರಣ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್)