ಸೌಜನ್ಯ ಸಾವು ಪ್ರಕರಣ: ಆರೋಪಿ ದೋಷ ಮುಕ್ತನೆಂದು ಕೋರ್ಟ್ ತೀರ್ಪು, ನಮಗೂ ಜಯ ಸಿಕ್ಕಿದೆ ಎಂದ ಸೌಜನ್ಯ ತಾಯಿ

Soujanya Death case
Published on

ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್​​ಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್​ಚಿಟ್ ನೀಡಿರುವ ವಿಚಾರವಾಗಿ ಸೌಜನ್ಯಳ ತಾಯಿ ಪ್ರತಿಕ್ರಿಯೆ ನೀಡಿದ್ದು, ನಮಗೂ ಒಂದು ಜಯ ಸಿಕ್ಕಿದೆ ಎಂದಿದ್ದಾರೆ.

ತನಿಖೆ ಮಾಡಿ ನ್ಯಾಯ ಕೊಡಲಿ

ಸುದ್ದಿಗಾರರೊಂದಿಗೆ ಮಾತನಾಡಿದ ಸೌಜನ್ಯಳ ತಾಯಿ ಕುಸುಮಾವತಿ, ಸಂತೋಷ್ ರಾವ್ ದೋಷಮುಕ್ತ ಎಂದು ಇವತ್ತು ತೀರ್ಪು ಬಂದಿದೆ. ಈ ಮೂಲಕ ಇದರಲ್ಲಿ ನಮಗೂ ಒಂದು ಜಯ ಸಿಕ್ಕಿದೆ. ಆದರೆ, ಸಿಬಿಐ ಮತ್ತೆ ಆರೋಪಿಗಳು ಯಾರು ಅಂತ ತನಿಖೆ ಮಾಡಿ ನ್ಯಾಯ ಕೊಡಲಿ. ಸಿಬಿಐ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.

ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು

ಮುಂದೆಯೂ‌ ನಾವು ಈ ನಿಟ್ಟಿನಲ್ಲಿ ಹೋರಾಟ ಮಾಡ್ತೇವೆ. ಸಂತೋಷ್ ರಾವ್ ಆರೋಪಿ ಅಲ್ಲ ಅಂತ ನಾವು ಹತ್ತು ವರ್ಷದಿಂದ ಹೇಳಿಕೊಂಡು ಬಂದಿದ್ದೇವೆ. ಅದರ ಜೊತೆಗೆ ಮೂರ್ನಾಲ್ಕು ಜನರ ಹೆಸರು ಕೊಟ್ಟಿದ್ದೆವು. ಅವರ ತನಿಖೆ ಆಗಬೇಕು. ಆದರೆ, ಅವರು ತನಿಖೆಗೆ ತಡೆ ತಂದಿದ್ದಾರೆ. ಪ್ರಕರಣದ ಹಿಂದೆ ಅವರು ಇಲ್ಲದಿದ್ದರೆ ತಡೆಯಾಜ್ಞೆ ಯಾಕೆ ತಂದಿದ್ದು? ಅವರ ತನಿಖೆ ಆಗಬೇಕು ಮತ್ತು ನಮಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.

‌ಮೃತದೇಹ ನಮಗೆ ಸಿಕ್ಕಿತು

ಪರೀಕ್ಷೆ ಅಂತ ಹೋದ ಮಗಳು ಅಂದು ಮನೆಗೆ ವಾಪಾಸ್ ಬರಲೇ‌ ಇಲ್ಲ. ಎಷ್ಟೇ ಹುಡುಕಾಡಿದರೂ ಮಗಳು ಮಾತ್ರ ಸಿಗಲೇ ಇಲ್ಲ. ಆದರೆ, ಮರುದಿನ ಅವಳ ‌ಮೃತದೇಹ ನಮಗೆ ಸಿಕ್ಕಿತು. ಒಳ ಉಡುಪನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ ಸ್ಥಳದಲ್ಲಿ ಪೊಲೀಸರೇ ಹಾಕಿದರು ಎಂದು ಕಹಿ ಕ್ಷಣಗಳನ್ನು ನೆನೆದು ಕುಸುಮಾವತಿ ಕಣ್ಣೀರಾಕಿದರು.

ಮಹೇಶ್ ಶೆಟ್ಟಿ ತಿಮರೋಡಿ ನಮಗೆ ನ್ಯಾಯ ಕೊಡಿಸಲು ಬೆನ್ನ ಹಿಂದೆ ನಿಂತಿದ್ದರು. ನಮಗೆ ಸಿಬಿಐ ನ್ಯಾಯ ಕೊಡಬೇಕು. ಈ ನಿಟ್ಟಿನಲ್ಲಿ ಮತ್ತೆ ಹೋರಾಟ ಮಾಡ್ತೇವೆ ಎಂದು ಸೌಜನ್ಯಳ ತಾಯಿ ತಿಳಿಸಿದರು.

ಘಟನೆ ನಡೆದ ಹನ್ನೊಂದು ವರ್ಷಗಳ ಬಳಿಕ ನಿನ್ನೆ (ಜೂ. 16)ತೀರ್ಪು ಹೊರಬಿದ್ದಿದೆ. ಪ್ರಕರಣ ಸಂಬಂಧ ಸಾಕ್ಷ್ಯಾಧಾರ ಕೊರತೆಯಿಂದಾಗಿ ಆರೋಪಿ ಸಂತೋಷ್​ ರಾವ್​ನನ್ನು ಬಿಡುಗಡೆ ಮಾಡಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ. ಅವರು ಆದೇಶ ಹೊರಡಿಸಿದ್ದಾರೆ.

ಪ್ರಕರಣ ಹಿನ್ನೆಲೆ ಏನು?

ಮೃತ ಸೌಜನ್ಯ ಉಜಿರೆಯ ಎಸ್​ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಆಕೆಯನ್ನು 2012ರ ಅಕ್ಟೋಬರ್ 10 ರಂದು ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಕಾಡಿನಲ್ಲಿ ಈ ಕೃತ್ಯ ನಡೆದಿತ್ತು. ಈ ಘಟನೆ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗಿ ಜನಾಕ್ರೋಶ ವ್ಯಕ್ತವಾಗಿತ್ತು.

ಘಟನೆ ಬಳಿಕ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಸಂತೋಷ್ ರಾವ್​ನನ್ನು ಬಂಧಿಸಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡು ಕೃತ್ಯ ನಡೆಸಿದ್ದ ಎನ್ನಲಾಗಿತ್ತು. ಆರೋಪಿಯು ಜಾಮೀನುನಲ್ಲಿ ಬಿಡುಗಡೆಗೊಂಡಿದ್ದ. ಹಲವು ಹೋರಾಟದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್ ರಾವ್ ದೋಷ ಮುಕ್ತ ಎಂದು ಹೇಳಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net