ವಿಷ್ಣುವರ್ಧನ್ ಘನತೆ, ವ್ಯಕ್ತಿತ್ವಕ್ಕೆ ತಕ್ಕಂತೆ ಮ್ಯೂಸಿಯಂ ನಿರ್ಮಾಣ ಮಾಡಲಾಗುತ್ತದೆ; ಸಿಎಂ ಬೊಮ್ಮಾಯಿ

ವಿಷ್ಣುವರ್ಧನ್
Published on

ಬೆಂಗಳೂರು: ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಬೇಕೆಂದು ಈ ಹಿಂದಿನಿಂದಲೂ ಕೂಗು ಕೇಳಿ ಬರುತ್ತಿತ್ತು. ಈ ವಿಚಾರ ಸಾಕಷ್ಟು ವಿವಾದದ ಸ್ವರೂಪವನ್ನೂ ಕಂಡಿತ್ತು. ಇದೀಗ ನಟಿ ಭಾರತಿ ವಿಷ್ಣುವರ್ಧನ್ ಮನೆ ಗೃಹ ಪ್ರವೇಶಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ಮೈಸೂರಿನಲ್ಲಿ ವಿಷ್ಣು ಸ್ಮಾರಕ ಮತ್ತು ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ. ಈಗಾಗಲೇ ಸೂಕ್ತ ಜಾಗವನ್ನು ನೋಡಲಾಗಿದ್ದು, ಡಿಸೆಂಬರ್ ಒಳಗೆ ಅದರ ಅಂತಿಮ ತೀರ್ಮಾನ ಮಾಡಲಾಗುತ್ತದೆ. ವಿಷ್ಣುವರ್ಧನ್ ಅವರ ಘನತೆ, ವ್ಯಕ್ತಿತ್ವಕ್ಕೆ ತಕ್ಕಂತೆ ಮ್ಯೂಸಿಯಂ ಮತ್ತು ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಡಿಸೆಂಬರ್​ನಲ್ಲಿ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಲಿದ್ದು, ಈಗಾಗಲೇ ಸ್ಮಾರಕದ ಬಹುತೇಕ ಕೆಲಸ ಮುಗಿದಿದ್ದು, ಅಂತಿಮ ಸಿದ್ಧತೆಯಲ್ಲಿದೆ. ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದ್ದು, ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಮುಂತಾದ ವಿಶೇಷತೆಗಳನ್ನು ಒಳಗೊಂಡಿದೆ.

ಜಯನಗರದಲ್ಲಿ ನಿರ್ಮಾಣವಾಗಿರುವ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹೊಸ ಮನೆ ಗೃಹ ಪ್ರವೇಶ ನಡೆಯಿತು. ಸಂಸದೆ ಸುಮಲತಾ ಅಂಬರೀಶ್, ನಟ ಜಗ್ಗೇಶ್ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜಗ್ಗೇಶ್ ಮಾತನಾಡಿ, ಜಯನಗರದ ಮನೆ ವಿಷ್ಣು ಸರ್​​ಗೆ ಪ್ರಿಯವಾದ ಜಾಗ. ಈ ಮನೆಯ ಒಂದೊಂದು ಜಾಗವು ಕಾಡುತ್ತದೆ. ಭಾವನೆಗಳನ್ನು ಕೆದಕುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net