

ಬೆಂಗಳೂರು: ಮಹಾರಾಷ್ಟ್ರ ಸರ್ಕಾರ ಮತ್ತೆ ಗಡಿ ತಂಟೆ ಎತ್ತಿರುವುದು, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಕರ್ನಾಟಕ ಗಡಿ ಹಾಗೂ ನದಿ ರಕ್ಷಣಾ ಆಯೋಗದ ಮೊದಲ ಮಹತ್ವದ ಸಭೆ ಇಂದು ನಡೆಯಲಿದೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿದ್ದು, ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಇಂದು ರಾತ್ರಿ 7ಕ್ಕೆ ಸಭೆ ನಿಗದಿಯಾಗಿದೆ.
ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸುಪ್ರೀಂ ಕೋರ್ಟ್ ನ ಕೆಲ ವಕೀಲರ ಜತೆಗೆ ಸಿಎಂ ಬೊಮ್ಮಾಯಿ ಚರ್ಚಿಸಲಿದ್ದಾರೆ.
ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು, ರಾಜ್ಯಗಳ ಪುನರ್ವಿಂಗಡಣೆ ಕಾಯ್ದೆ ಜಾರಿಗೆ ಬಂದಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ದಾವೆ ವಿಚಾರಣೆಗೆ ಸ್ವೀಕಾರಾರ್ಹವಲ್ಲ ಎನ್ನುವುದು ರಾಜ್ಯ ಸರ್ಕಾರದ ನಿಲುವಾಗಿದೆ. ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳು, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ವಾದಿಸಲಿರುವ ನುರಿತ ಕಾನೂನು ತಂಡಕ್ಕೆ ನೀಡಬೇಕಾದ ಮಾಹಿತಿ, ಇಷ್ಟರಲ್ಲೇ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಈ ಸಭೆ ಪರಾಮರ್ಶಿಸಲಿದೆ ಎಂದು ಮೂಲಗಳು ತಿಳಿಸಿವೆ.