

ಬೆಂಗಳೂರು: ಪುಣ್ಯಕ್ಷೇತ್ರ ಶಬರಿಮಲೆಗೆ ಹೋಗುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಅಕ್ಟೋಬರ್ನಿಂದ ಜನವರಿ ತಿಂಗಳ ಅವಧಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ವೇಳೆ ಅಯ್ಯಪ್ಪ ಪಾದಯಾತ್ರಿಗಳು ದಾರಿ ಮಧ್ಯದಲ್ಲಿ ಸಿಗುವ ವಾವರ್ ಮಸೀದಿಗೆ ತೆರಳಿ ಮುಂದೆ ಸಾಗುತ್ತಾರೆ. ಈ ವಿಚಾರವೀಗ ಚರ್ಚೆಗೆ ಕಾರಣವಾಗಿದೆ.
ಇದೀಗ ಮತ್ತೆ ವಾವರ್ ಮಸೀದಿ ವಿವಾದ ಮುನ್ನಲೆಗೆ ಬಂದಿದ್ದು, ಶಬರಿಮಲೆ ಯಾತ್ರೆ ವೇಳೆ ಹಿಂದೂಗಳು ವಾವರ್ ಮಸೀದಿಗೆ ಹೋಗದಂತೆ ಹಿಂದೂಪರ ಸಂಘಟನೆಗಳು ಮನವಿ ಮಾಡಿವೆ. ಈಗಾಗಲೇ ಶಬರಿಮಲೆ ವ್ರತ ಆರಂಭವಾಗಿದೆ. ನಾವು ಶಬರಿಮಲೆಗೆ ಹೋಗುವಾಗ ಘೋರ ತಪ್ಪನ್ನು ಮಾಡುತ್ತಿದ್ದೇವೆ. ಅಲ್ಲಿನ ವಾವರ್ ಮಸೀದಿಗೆ ಹೋಗುವಂತಹ ಕೆಟ್ಟ ಸಂಪ್ರದಾಯ ಇತ್ತೀಚೆಗೆ ಶುರುವಾಗಿದೆ ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಹೇಳಿದ್ದಾರೆ.
ವಾವರ್ ಒಬ್ಬ ಬಾಬರ್ ಆಗಿದ್ದ. ಒಬ್ಬ ಕಳ್ಳನನ್ನು, ದರೋಡೆಕೋರನನ್ನು ಅಯ್ಯಪ್ಪ ಸ್ವಾಮಿಯ ಸ್ನೇಹಿತ ಎಂದು ಬಿಂಬಿಸಿ, ಅವನ ಘೋರಿಯನ್ನು ಮಸೀದಿಯನ್ನಾಗಿ ಮಾಡಲಾಗಿದೆ. ಹಿಂದೂಗಳು ಕೋಟಿಗಟ್ಟಲೆ ಹಣವನ್ನು ಆ ಮಸೀದಿ ಸುರಿಯುತ್ತಿದ್ದು, ಇದು ಹಿಂದೂ ಧರ್ಮಕ್ಕೆ, ಶಬರಿಮಲೆಯ ಅಯ್ಯಪ್ಪನಿಗೆ ಮಾಡಿದ ಅಪಮಾನವಾಗಿದೆ.
ಹಿಂದೂಗಳ ಮೂರ್ತಿ ಪೂಜೆಯನ್ನು ಒಪ್ಪದ ಒಬ್ಬ ಮುಸ್ಲಿಂ ವಾವರ್, ಹೇಗೆ ಅಯ್ಯಪ್ಪ ಸ್ವಾಮಿ ಭಕ್ತನಾಗಲು ಸಾಧ್ಯ? ಇಸ್ಲಾಂನ ಆಗಮನವಾಗಿರುವುದು ಯಾವಾಗ..? ಲಕ್ಷ ಲಕ್ಷ ವರ್ಷಗಳ ಹಿಂದೆ ಅಯ್ಯಪ್ಪ ಸ್ವಾಮಿಯ ಜನನ ಆಗಿದೆ. ಹೀಗಿದ್ದಾಗ ಅಯ್ಯಪ್ಪ ಸ್ವಾಮಿಗೂ ವಾವರ್ಗೂ ಏನು ಸಂಬಂಧ? ಇವತ್ತು ಅಯ್ಯಪ್ಪ ಸ್ವಾಮಿಯ ಭಕ್ತರು ಹಾಕುವಂತಹ ಆ ಮಸೀದಿಯ ಹಣ ಯಾವ ರೀತಿ ವಿನಿಯೋಗ ಆಗ್ತಿದೆ ಯಾರಿಗೂ ಗೊತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಹಿಂದೂಗಳು ವಾವರ್ ಮಸೀದಿಗೆ ಹೋಗಬಾರದು ಮತ್ತು ಕಾಣಿಕೆಯನ್ನು ಹಾಕಬಾರದು.
ಯಾವೊಬ್ಬ ಮುಸಲ್ಮಾನ ಕೂಡ ಅಯ್ಯಪ್ಪ ಸ್ವಾಮಿ ಪ್ರಸಾದ ಸ್ವೀಕಾರ ಮಾಡುತ್ತಿಲ್ಲ. ಹೀಗಿರುವಾಗ ಹಿಂದೂ ಅಯ್ಯಪ್ಪ ಭಕ್ತಾಧಿಗಳು ವಾವರ್ ಮಸೀದಿಗೆ ಹೋಗಿ ಯಾಕೆ ಪ್ರಾರ್ಥನೆ ಮಾಡಿ, ಕಾಣಿಕೆ ಹಾಕಬೇಕು? ಹೀಗಾಗಿ ಹಿಂದೂಗಳು ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾತ್ರ ಪಡೆಯಬೇಕು ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಗೌಡ ಆಗ್ರಹಿಸಿದ್ದಾರೆ.