

ಬೆಂಗಳೂರು: ಕನ್ನಡದ 'ಅಮೃತವರ್ಷಿಣಿ' ಸಿನಿಮಾದಲ್ಲೂ ಅಭಿನಯಿಸಿ ಗಮನ ಸೆಳೆದಿದ್ದ ಬಹುಭಾಷಾ ನಟ ಶರತ್ಬಾಬು ಅನಾರೋಗ್ಯ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತಿರುವಂಥದ್ದೇ. ಆದರೆ ಈ ಮಧ್ಯೆ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ನಟ ಕಮಲಹಾಸನ್ ಅವರು ಶರತ್ಬಾಬುವನ್ನು ಸಹೋದರ, ಗೆಳೆಯ, ಹಿತೈಷಿ ಎಂದೆಲ್ಲ ಸಂಬೋಧಿಸಿ, ನೀವು ಸದಾ ನೆನಪಿನಲ್ಲಿರುತ್ತೀರಿ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಶರತ್ ಅವರು ಜೀವಂತವಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದರಿಂದ, ಕಮಲಹಾಸನ್ ಇಂದು ರಾತ್ರಿ 9.20ಕ್ಕೆ ಮಾಡಿದ್ದ ಟ್ವೀಟನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ.
ಅಲ್ಲದೆ ಶರತ್ ಅವರು ಅನಾರೋಗ್ಯದಲ್ಲಿರುವುದು ನಿಜ. ಆದರೆ ಅವರು ಸಾವಿಗೀಡಾಗಿಲ್ಲ ಎಂದು ಅವರ ಆಪ್ತವರ್ಗದ ಹಲವರು ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ, ಶರತ್ಬಾಬು ಅವರ ಕುರಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಶರತ್ಬಾಬು ಅವರು ಚೇತರಿಸಿಕೊಂಡಿದ್ದು, ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಅವರ ಸಹೋದರಿ ಸ್ಪಷ್ಟನೆ ನೀಡಿದ್ದಾಗಿ ಆಪ್ತಮೂಲಗಳು ತಿಳಿಸಿವೆ.