ದೃಷ್ಟಿ ಇಲ್ಲದಿದ್ರೂ ಶಾಲೆಗೇ ಸಿಬಿಎಸ್​ಇ ಟಾಪರ್​: ಆ್ಯಸಿಡ್​ ದಾಳಿಗೆ ಎರಡೂ ಕಣ್ಣು ಕಳೆದುಕೊಂಡ್ರೂ ಹೋಪ್ ಕಳ್ಕೊಂಡಿಲ್ಲ!

Kafi
Published on

ಚಂಡೀಗಢ: ಆ್ಯಸಿಡ್ ದಾಳಿಗೆ ಒಳಗಾಗಿದ್ದಲ್ಲದೆ ಎರಡೂ ಕಂಗಳನ್ನು ಕಳೆದುಕೊಂಡಿದ್ದರೂ ಹೋಪ್ ಕಳೆದುಕೊಂಡಿರದ ವಿದ್ಯಾರ್ಥಿನಿ ಶಾಲೆಗೇ ಸಿಬಿಎಸ್​ಇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈ ಮೂಲಕ ಆ್ಯಸಿಡ್ ದಾಳಿಗೆ ಒಳಗಾದ 12 ವರ್ಷಗಳ ಬಳಿಕ ಈಕೆ ತನ್ನ ತಂದೆ-ತಾಯಿ ಭಾರಿ ಸಂಭ್ರಮ ಹಾಗೂ ಹೆಮ್ಮೆ ಪಡುವಂತೆ ಮಾಡಿದ್ದಾಳೆ.

ಕಫಿ ಎಂಬ ಈ ವಿದ್ಯಾರ್ಥಿನಿ ಸಿಬಿಎಸ್​​ಇ ಹತ್ತನೇ ತರಗತಿಯಲ್ಲಿ ಶಾಲೆಗೇ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಚಂಡೀಗಢದ ಇನ್​ಸ್ಟಿಟ್ಯೂಟ್ ಆಫ್ ಬ್ಲೈಂಡ್​ನಲ್ಲಿನ ವಿದ್ಯಾರ್ಥಿನಿಯಾಗಿರು ಈಕೆ ಹತ್ತನೇ ತರಗತಿಯಲ್ಲಿ ಶೇ. 95.20 ಅಂಕ ಗಳಿಸಿದ್ದಾಳೆ.

ಈಕೆ ಮೂರು ವರ್ಷದವಳಾಗಿದ್ದಾಗ ಹೋಳಿ ಆಡುತ್ತಿದ್ದ ಸಂದರ್ಭದಲ್ಲಿ ಮೂವರು ಈಕೆ ಮೇಲೆ ಆ್ಯಸಿಡ್ ಎರಚಿದ್ದು, ಅದರಲ್ಲಿ ಗಂಭೀರ ಗಾಯಗೊಂಡಿದ್ದ ಈಕೆಯ ಎರಡೂ ಕಣ್ಣುಗಳು ದೃಷ್ಟಿ ಕಳೆದುಕೊಂಡಿದ್ದವು. ಈಕೆಯನ್ನು ಬದುಕಿಸಿಕೊಳ್ಳಲು ತಂದೆ-ತಾಯಿ ಹರಸಾಹಸ ಪಟ್ಟಿದ್ದರು. ಅದಾಗಿ 12 ವರ್ಷದ ಬಳಿಕ ಈಕೆ ಈ ಸಾಧನೆ ಮಾಡಿದ್ದಾಳೆ.

ಜೀವನದಲ್ಲಿ ಇನ್ನೇನು ಎಲ್ಲ ಮುಗಿದೇ ಹೋಯ್ತು ಎನ್ನುವಂಥ ಕೆಲವು ಸಂದರ್ಭಗಳು ಬಂದಿರುತ್ತವೆ. ಆದರೆ ನನ್ನ ತಂದೆ-ತಾಯಿ ಹೋಪ್ ಕಳೆದುಕೊಂಡಿರಲಿಲ್ಲ. ಅಲ್ಲದೆ ನಾನು ಕೂಡ ನನಗೆ ಏನಾಗಿತ್ತೋ ಅದರ ಹೊರತಾಗಿಯೂ ನಾನು ಬೆಲೆ ಇಲ್ಲದವಳ ಎನ್ನುವುದನ್ನು ಸಾಧಿಸಿ ತೋರಬೇಕಿತ್ತು, ಅದನ್ನು ಮಾಡಿದ್ದೇನೆ ಎನ್ನುವ ಈ ವಿದ್ಯಾರ್ಥಿನಿ, ಮುಂದೆ ಐಎಎಸ್ ಅಧಿಕಾರಿ ಆಗುವ ಕನಸು ಇರಿಸಿಕೊಂಡಿದ್ದಾಳೆ. ಈಕೆಯ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿಕೊಂಡಿರುವ ತಂದೆ ಸದ್ಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net