

ಮುಂಬೈ: ಕೆಲವು ವಾರಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣದಡಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಆತನನ್ನು ಕಸ್ಟಡಿಯಲ್ಲಿ ಉಳಿಸಿಕೊಂಡಿದ್ದರು. ಆದರೆ, ಇದೀಗ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಬಾಲಿವುಡ್ನ ಹೆಸರಾಂತ ನಟನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪದಡಿ ಅನುಜ್ ತಾಪನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಕಸ್ಟಡಿಯಲ್ಲಿದ್ದ ಆರೋಪಿ ಅನುಜ್, ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಜೈಲಿನ ಅಧಿಕಾರಿಗಳಿಗೆ ತಿಳಿದುಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರೊಳಗೆ ತಾಪನ್ ಮೃತಪಟ್ಟಿರುವುದು ವೈದ್ಯರ ಪರಿಶೀಲನೆ ನಂತರ ತಿಳಿದುಬಂದಿದೆ ಎಂದು ಮುಂಬೈ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
32 ವರ್ಷದ ಆರೋಪಿ ಅನುಜ್ನನ್ನು ಮುಂಬೈ ಪೊಲೀಸರು ಏಪ್ರಿಲ್ 26ರಂದು ಪಂಜಾಬ್ನಲ್ಲಿ ಸೆರೆಹಿಡಿದಿದ್ದರು. 10 ಮಂದಿಯೊಡನೆ ಲಾಕ್ಅಪ್ನಲ್ಲಿದ್ದ ಅನುಜ್, ಬೆಳಗ್ಗೆ 11 ಗಂಟೆಯ ವೇಳೆಗೆ ಕಸ್ಟಡಿಗೆ ಅಳವಡಿಸಲಾಗಿದ್ದ ಬಾತ್ರೂಂಗೆ ತೆರಳಿ, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ,(ಏಜೆನ್ಸೀಸ್).