ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

WhatsApp Image 2024-04-30 at 7.31.25 AM
Published on

ನವದೆಹಲಿ: ಕ್ರಿಕೆಟ್ ಲೋಕದ ಮಾಂತ್ರಿಕ, ದಿಗ್ಗಜ, ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿಗಳು ಭಾರೀ ಚರ್ಚೆಗೆ ಗ್ರಾಸವಾಗುತ್ತಿವೆ. ಪ್ರಸ್ತುತ ಐಪಿಎಲ್​ನ 17ನೇ ಸೀಸನ್​ನಲ್ಲಿ ಕಡೆಯ ಓವರ್​ಗಳಲ್ಲಿ ಕ್ರೀಸ್​ಗೆ ಬರುತ್ತಿರುವ ಧೋನಿ ಎಂದಿನಂತೆ ತಮ್ಮ ಅಭಿಮಾನಿಗಳನ್ನು ಖುಷಿಪಡಿಸುವಲ್ಲಿ ಸಫಲರಾಗಿದ್ದಾರೆ. ಕೇವಲ ಮೂರು ಅಥವಾ ನಾಲ್ಕು ಬಾಲ್​ಗಳು ಉಳಿದಿರುವ ಸಮಯಕ್ಕೆ ಸರಿಯಾಗಿ ಅಖಾಡಕ್ಕಿಳಿಯುವ ಮಾಹಿ, ತಾವು ಅತ್ಯುತ್ತಮ ಫಿನಿಶರ್​ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ.

ಇನ್ನು ಈ ಸೀಸನ್​ನಲ್ಲಿ ಆಕರ್ಷಕ ಹಾಗೂ ಸ್ಪೋಟಕ ಬ್ಯಾಟಿಂಗ್ ಮಾಡಿ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮನರಂಜಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ಅವರ ಮುಂದಿನ ವರ್ಷದ ಐಪಿಎಲ್ ಎಂಟ್ರಿಯ ಬಗ್ಗೆಯೂ ಈಗಾಗಲೇ ಮಾತುಕತೆಗಳು ನಡೆದಿದ್ದು, ಧೋನಿ ಆಪ್ತ ಸ್ನೇಹಿತ ಸುರೇಶ್ ರೈನಾ 2025ರ ಆವೃತ್ತಿಯಲ್ಲಿ ಮಾಹಿ ಸಿಎಸ್​ಕೆ ಪರ ಆಡಲಿದ್ದಾರೆ ಎಂಬುದನ್ನು ಅಧಿಕೃತವಾಗಿ ತಿಳಿಸಿದರು. ಕೇವಲ ಎರಡು ತಿಂಗಳು ನಡೆಯುವ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಕೂಲ್, ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲಾ ಫಾರ್ಮೆಟ್​ಗೂ ನಿವೃತ್ತಿ ಘೋಷಿಸಿದ ಬಳಿಕ ಟೀಂ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಇಂದಿಗೂ ಒಂದು ಮಾತಿದೆ.

ವಿಕೆಟ್ ಕೀಪಿಂಗ್​ನಲ್ಲಿ ದೋನಿ ಮೀರಿಸುವವರಿಲ್ಲ, ಎನ್ನುವುದಕ್ಕಿಂತ ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಧೋನಿ ಅತ್ಯಂತ ಯಶಸ್ವಿ ಫಿನಿಶರ್​ ಹಾಗೂ 'ದಿ ಗ್ರೇಟೆಸ್ಟ್​​ ಫಿನಿಶರ್'​ ಎಂಬ ಪಟ್ಟವನ್ನು ಪಡೆದಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಕ್ಯಾಪ್ಟನ್ ಕೂಲ್ ಸ್ಥಾನವನ್ನು ತುಂಬಲು ಯಾರಿಂದಲೂ ಸಾದ್ಯವಿಲ್ಲ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಟೀಂ ಇಂಡಿಯಾದ ಹಿರಿಯ ಮಾಜಿ ಆಟಗಾರ ನವಜೋತ್ ಸಿಂಗು ಸಿಧು ಮಾತನಾಡಿ, ಧೋನಿ ಸ್ಥಾನವನ್ನು ಈ ಒಬ್ಬ ಆಟಗಾರನಿಂದ ತುಂಬಲು ಸಾಧ್ಯ ಎಂದು ಅಭಿಪ್ರಾಯಿಸಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​​ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮೂಲಕ ಅತ್ಯುತ್ತಮ ಮ್ಯಾಚ್​ ಫಿನಿಶರ್​ ಆಗಿ ಕಾಣಿಸಿಕೊಂಡಿರುವ ರಿಂಕು ಸಿಂಗ್​, ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ತುಂಬಲಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಮಾಹಿ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ, ಅದೇ ರೀತಿ ರಿಂಕು ಸಹ. ಅವರು ಕೂಡ ಯಾವ ಒತ್ತಡ ತೆಗೆದುಕೊಳ್ಳದೆ, ಬಹಳ ಕೂಲ್ ಆಗಿ ಹ್ಯಾಂಡಲ್ ಮಾಡ್ತಾರೆ. ರಿಂಕು ಟೀಂ ಇಂಡಿಯಾದ ಫ್ಯೂಚರ್​ ಸ್ಟಾರ್​ ಎಂದು ಸಿಧು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net