

ಲಖನೌ: 17ನೇ ಆವೃತ್ತಿ ಐಪಿಎಲ್ ಶುರುವಾಗುವುದಕ್ಕೂ ಮುಂಚೆಯಿಂದಲೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಂದಿಲ್ಲೊಂದು ವಿವಾದಗಳಿಂದಲೇ ಸದ್ದು ಮಾಡುತ್ತಿದ್ದು, ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಮುಂಬೈ ನಾಯಕತ್ವ ವಹಿಸಿಕೊಂಡ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಮಂಗಳವಾರ (ಏಪ್ರಿಲ್ 30) ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಕೆ.ಎಲ್. ರಾಹುಲ್ ಸಾರಥ್ಯದ ಲಖನೌ ಸೂಪರ್ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಜಯ ಸಾಧಿಸಿದೆ. ಇನ್ನೂ ಮುಂಬೈ ಇಂಡಿಯನ್ಸ್ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಜೂನ್ 02ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ಗೆ ತಂಡ ಪ್ರಕಟಿಸಿದ ಬಿಸಿಸಿಐ ಹಾರ್ದಿಕ್ ಪಾಂಡ್ಯರನ್ನು ಉಪನಾಯಕನನ್ನಾಗಿ ನೇಮಿಸಿದೆ. ತಂಡದ ಉಪನಾಯಕನನ್ನಾಗಿ ನೇಮಿಸದ ಕೆಲ ಹೊತ್ತಿನಲ್ಲೇ ಹಾರ್ದಿಕ್ ಪಾಂಡ್ಯ ಲಖನೌ ಎದುರು ಬ್ಯಾಟಿಂಗ್ ಮಾಡುವ ವೇಳೆ ಶೂನ್ಯ ಸುತ್ತಿದ್ದು, ಒದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದಲ್ಲದೆ ಲಖನೌ ವಿರುದ್ಧದ ಸೋಲಿಗೂ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ.
ಹಾಲಿ ಐಪಿಎಲ್ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್ ಲಖನೌ ವಿರುದ್ಧದ ಪಂದ್ಯದಲ್ಲೂ ಮುಂದುವರೆದಿದ್ದು, ನೆಟ್ಟಿಗರು ತೀವ್ರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಗಾಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಂಡಕ್ಕೆ ಆಯ್ಕೆ ಮಾಡಿರುವುದು ಎಷ್ಟು ಸೂಕ್ತ. ಆತನ ಬದಲಿಗೆ ರಾಹುಲ್, ದಿನೇಶ್ ಕಾರ್ತಿಕ್ ಸೇರಿದಂತೆ ಅನೇಕ ಪ್ರತಿಭಾವಂತರಿದ್ದರು ಸಹ ಹಾರ್ದಿಕ್ರನ್ನು ಆಯ್ಕೆ ಮಾಡಿರುವುದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ನಿರ್ಧಾರವನ್ನು ಬದಲಿಸಿ ಎಂದು ಬಿಸಿಸಿಐಗೆ ಆಗ್ರಹಿಸಿದ್ದಾರೆ.