ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

WhatsApp Image 2024-04-28 at 4.51.36 PM
Published on

ನವದೆಹಲಿ: ನಿನ್ನೆ (ಏ.27) ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 43ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಗೆಲುವಿಗಾಗಿ ಭಾರೀ ಹಣಾಹಣಿ ನಡೆಸಿತು. ಈ ಮ್ಯಾಚ್​ ಹಿಂದಿನ ಪಂದ್ಯಗಳಿಗಿಂತಲೂ ಬಹಳ ರೋಚಕವಾಗಿ ಮೂಡಿಬಂದಿತು. ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಎಂಐ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಡೆಲ್ಲಿ ಪಡೆ ಕೊಟ್ಟ 258 ಬೃಹತ್ ರನ್ ಚೇಸ್​ ಮಾಡುವಲ್ಲಿ ಮುಗ್ಗರಿಸಿದರು. ತಮ್ಮ ನೆಚ್ಚಿನ ತಂಡ ಸೋತಿದ್ದಕ್ಕೆ ಬೇಸರಗೊಳ್ಳದ ಮುಂಬೈ ಅಭಿಮಾನಿಗಳು, ಪಾಂಡ್ಯ ನಡೆಗೆ ಮಾತ್ರ ತೀವ್ರ ಸಿಟ್ಟಿಗೆದ್ದಿದ್ದಾರೆ.

ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ವೇಳೆ ತಮ್ಮ ತಂಡದ ಬೌಲರ್​ಗಳು ಹಿಗ್ಗಾಮುಗ್ಗಾ ರನ್​ ಹೊಡೆಸಿಕೊಂಡರು ಎಂದು ಮೈದಾನದಲ್ಲೇ ಸಿಡಿದೆದ್ದ ಹಾರ್ದಿಕ್, ತಂಡದವರ ವಿರುದ್ಧವೇ ಕಿರುಚಾಡಿದರು. ಬಿರುಸಿನ ಆಟದ ನಡುವೆಯೇ ಪಾಂಡ್ಯ ತೋರಿದ ದರ್ಪಕ್ಕೆ ಕ್ರಿಕೆಟ್ ಫ್ಯಾನ್ಸ್ ವ್ಯಾಪಕವಾಗಿ ಕಿಡಿಕಾರಿದ್ದರು. ಆದರೆ, ಪಂದ್ಯ ಕೈಚೆಲ್ಲಿದ ಬಳಿಕ ನಾಯಕನಾಗಿ ಹಾರ್ದಿಕ್ ಕೊಟ್ಟ ಕಾರಣ, ದೂರಿದ ರೀತಿಗೆ ಇದೀಗ ಮುಂಬೈ ಅಭಿಮಾನಿಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ವಿರುದ್ಧದ ಚೇಸಿಂಗ್​ನಲ್ಲಿ ಹಾರ್ದಿಕ್ 46 ರನ್​ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರೆ, ಅಬ್ಬರದ ಬ್ಯಾಟಿಂಗ್​ ಮೂಲಕ 63 ರನ್​ಗಳನ್ನು ಸಿಡಿಸಿದ ತಿಲಕ್ ವರ್ಮ ಅವರ ರನ್ ಔಟ್ ತಂಡದ ಗೆಲುವಿನ ಲೆಕ್ಕಾಚಾರವನ್ನೇ ಬದಲಿಸಿತು. ತಿಲಕ್​ ಆಟದ ವೈಖರಿಯನ್ನು ನೋಡುತ್ತಿದ್ದಂತೆ ಮುಂಬೈ ತಂಡದ ಸದಸ್ಯರು ಹಾಗೂ ಅಭಿಮಾನಿಗಳು ಈ ಗೆಲುವು ಖಂಡಿತ ನಮ್ಮದೇ ಎಂದು ಭರವಸೆ ಇಟ್ಟುಕೊಂಡಿದ್ದರು. ಆದ್ರೆ, ಅವರ ರನ್ ಔಟ್​ ಸೋಲು ಖಚಿತ ಎಂಬುದನ್ನು ಸ್ಪಷ್ಟಪಡಿಸಿತು.

ತಿಲಕ್ ವರ್ಮಾರ ರನ್​ ಔಟ್​ ಅನ್ನೇ ಗುರಿಯಾಗಿಸಿದ ಕ್ಯಾಪ್ಟನ್ ಹಾರ್ದಿಕ್, ಪಂದ್ಯದ ಸೋತ ಬಳಿಕ ಮಾತನಾಡಿ, "ತಿಲಕ್ ತಮ್ಮ ಆಟದ ಬಗ್ಗೆ ಹೆಚ್ಚು ಗಮನಹರಿಸಬೇಕಿತ್ತು. ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಾವು ಸೋಲಲು ಆಸಕ್ತಿಯ ಕೊರತೆಯೇ ಕಾರಣ" ಎಂದು ದೂಷಿಸಿದರು. ಹಾರ್ದಿಕ್​ನ ಈ ಹೇಳಿಕೆ ಮುಂಬೈ ಅಭಿಮಾನಿಗಳ ಕೆಂಗಣ್ಣಿಗೆ ನೇರ ಗುರಿಯಾಗಿದ್ದು, ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net