

ಹುಬ್ಬಳ್ಳಿ: ಡೆತ್ನೋಟ್ ಬರೆದಿಟ್ಟು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀದೇವಿ ವೀರಪ್ಪ ಕಮ್ಮಾರ ಮೃತರು. ಕಳೆದ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಶ್ರೀದೇವಿ ಮನೆ ಬಿದ್ದಿತ್ತು. ಪರಿಹಾರಕ್ಕಾಗಿ ಶೀದೇವಿ ಅಲೆದಾಡಿದರೂ ಪ್ರಯೋಜನ ಆಗಿರಲಿಲ್ಲ. ಇದೀಗ ಪರಿಹಾರದ ಹಣ ಸಿಗಲಿಲ್ಲ ಅಂತಾ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕಳೆದ ಮಳೆಗಾಲದಲ್ಲಿ ಅತೀವೃಷ್ಡಿಯಿಂದ ಇವರ ಮನೆ ಬಿದ್ದಿತ್ತು. ಮನೆ ಹಾನಿ ಪರಿಹಾರಕ್ಕಾಗಿ ಐದು ತಿಂಗಳಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಗೆ ಶ್ರೀದೇವಿ ಮನವಿ ಮಾಡಿದ್ದರಂತೆ. ಸರಿಯಾಗಿ ಸ್ಪಂದನೆ ಸಿಗದಿದ್ದಕ್ಕೆ ಮನನೊಂದಿದ್ದರು ಎನ್ನಲಾಗಿದೆ.
ಪರಿಹಾರ ಹಣ ಕೊಡಬೇಕು. ಇಲ್ಲವಾದರೆ ಸಾವೊಂದೇ ನನಗೆ ದಾರಿ ನಿರ್ಧರಿಸಿದ ಮಹಿಳೆ ಡೆತ್ನೋಟ್ ಬರೆದಿಟ್ಟು ಕೇಂದ್ರ ಸಚಿವ ಜೋಶಿ ಮನೆ ಮುಂದೆ ಏ.6ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು (ಶುಕ್ರವಾರ) ಕೊನೆಯುಸಿರೆಳೆದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.