

ಬೆಂಗಳೂರು: ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಿಯಕರ ರೈಲಿನಿಂದ ಜಿಗಿದು ಆತ್ಮಹತ್ಯೆ ಯತ್ನಿಸಿ ಗಂಭೀರ ಗಾಯಗೊಂಡ ಘಟನೆ ಬಂಡೆಪಾಳ್ಯದ ಸೋಮಸಂದ್ರಪಾಳ್ಯದಲ್ಲಿ ಸೋಮವಾರ ಸಂಭವಿಸಿದೆ.
ಸೊಮಸಂದ್ರಪಾಳ್ಯದ 17 ವರ್ಷದ ಬಾಲಕಿ ಕೊಲೆಯಾದವಳು. ಈಕೆಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದವನ ಹೆಸರು ರಾಜು. ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿದ್ದ ರಾಜು ಸೊಮಸಂದ್ರಪಾಳ್ಯದಲ್ಲಿ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದ. ಈತನ ರೂಂ ಸಮೀಪದಲ್ಲೇ ನೆಲೆಸಿದ್ದ ಮೃತ ಬಾಲಕಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಇದನ್ನೂ ಓದಿರಿ ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ರೊಮಾನ್ಸ್, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್
ಇವರಿಬ್ಬರೂ ಒಂದೇ ಪ್ರದೇಶದಲ್ಲಿದ್ದ ಹಿನ್ನೆಲೆಯಲ್ಲಿ ಪರಿಚಯ ಪ್ರೀತಿಗೆ ತಿರುಗಿದೆ. 2 ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಪ್ರೇಯಸಿ ಮೇಲೆ ರಾಜು ಮುನಿಸಿಕೊಂಡಿದ್ದ. ಏ.3ರ ಸಂಜೆ 4 ಗಂಟೆಗೆ 3ರಂದು ಕಾಲೇಜು ಮುಗಿಸಿಕೊಂಡು ಸ್ನೇಹಿತರ ಜತೆ ಸೋಮಸಂದ್ರ ವೃತ್ತದವರೆಗೆ ಆಕೆ ಬಂದಿದ್ದಳು. ನಂತರ ಮನೆಗೆ ವಾಪಾಸ್ಸಾಗದೆ ರಾಜು ರೂಂಗೆ ಹೋಗಿದ್ದಾಳೆ ಎನ್ನಲಾಗುತ್ತಿದೆ. ಆ ವೇಳೆ ರಾಜು ಹಾಗೂ ಯುವತಿ ನಡುವೆ ಜಗಳ ನಡೆದಿದ್ದು, ಆಕ್ರೋಶಗೊಂಡ ರಾಜು ಯುವತಿಯ ಕತ್ತು ಬಿಗಿದು ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತ ಕಾಲೇಜಿಗೆ ತೆರಳಿದ ಮಗಳು ಮನೆಗೆ ವಾಪಸ್ ಆಗದೇ ಇದ್ದ ಹಿನ್ನೆಲೆಯಲ್ಲಿ ಏ.3ರಂದು ರಾತ್ರಿ ಯುವತಿಯ ಪಾಲಕರು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ದೂರಿನಲ್ಲಿ ರಾಜು ಜತೆ ತೆರಳಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು.
ಈ ನಡುವೆ ಏ.4ರ ಬೆಳಗ್ಗೆ ರಾಜು ಮಲ್ಲೇಶ್ವರದಿಂದ ಯಶವಂತಪುರಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಸಿ ಮಾರ್ಗಮಧ್ಯೆ ಯಶವಂತಪುರ ಬಳಿ ಚಲಿಸುತ್ತಿರುವ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜುನನ್ನು ಸ್ಥಳೀಯರು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ಏ.5ರಂದು ರಾಜುಗೆ ಪ್ರಜ್ಞೆ ಬಂದಿದ್ದು, ತನ್ನ ರೂಂನಲ್ಲಿ ಬಾಲಕಿ ಮೃತಪಟ್ಟಿರುವ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದ. ವೈದ್ಯರು ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದರು. ಬಂಡೆಪಾಳ್ಯ ಪೊಲೀಸರು ಸೋಮಸಂದ್ರದಲ್ಲಿರುವ ರಾಜುವಿನ ರೂಂ ಅನ್ನು ಪರಿಶೀಲಿಸಿದಾಗ ಬಾಲಕಿ ಶವ ಪತ್ತೆಯಾಗಿದೆ. ಆಕೆಯ ಕತ್ತಿನಲ್ಲಿ ಹಗ್ಗದಂತಹ ವಸ್ತುವಿನಿಂದ ಬಿಗಿದ ಕಲೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಸಾವಿನ ಪ್ರಕರಣವನ್ನು ಪೋಕ್ಸೋ ಅಡಿ ದಾಖಲಿಸಿಕೊಳ್ಳಲಾಗಿದೆ. ತನಿಖೆ ಬಳಿಕ ಬಾಲಕಿ ಸಾವಿಗೆ ನಿಖರ ಕಾರಣ ತಿಳಿಯಲಿದೆ.