

ಬೆಂಗಳೂರು: ದೇವರೇ ನನ್ನ ಜೀವ ಉಳಿಸಲು ಮೈತ್ರಿ ಸರ್ಕಾರದ ಅಧಿಕಾರದಿಂದ ಕೆಳಗೆ ಇಳಿಸಿದ್ದಾನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಮಾತನಾಡಿದ ಎಚ್ಡಿಕೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ 17 ಜನ (ಅಂದಿನ ಶಾಸಕರು) ಕಾರಣ ಎನ್ನುತ್ತಾರೆ. ನನ್ನ ಅಧಿಕಾರದಿಂದ ತೆಗೆದದ್ದು ಆ 17 ಜನ ಅಲ್ಲ. ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವರ ಬಗ್ಗೆ ಯಾವುದೇ ಬೇಜಾರಿಲ್ಲ. ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಸಂತೋಷದಿಂದ ಅಧಿಕಾರವನ್ನು ಬಿಟ್ಟು ಹೊರಗೆ ಬಂದೆ. ಈ ಸಂದಭದಲ್ಲಿ ನನ್ನ ಜೀವ ಉಳಿಯಬೇಕು ಎಂದು ದೇವರೇ ತೆಗೆದುಕೊಂಡ ನಿರ್ಧಾರ ಅದು ಎಂದರು.
ಕಾಂಗ್ರೆಸ್ನವರೊಬ್ಬರು 2018ರ ಚುನಾವಣೆಯಲ್ಲಿ ಇದು ನನ್ನ ಕೊನೇ ಚುನಾವಣೆ ಎಂದಿದ್ದರು. ಈಗ ಅವರೇ ಮತ್ತೆ ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಸಿದ್ದರಾಮಯ್ಯರ ಹೆಸರು ಹೇಳದೆ ಮಾತಿನಲ್ಲೇ ಎಚ್ಡಿಕೆ ಚಾಟಿ ಬೀಸಿದರು. ನಾನೀಗ ಬಿಡದಿ ತೋಟದ ಮನೆಯಲ್ಲಿದ್ದೇನೆ. ಇದೇ ನನಗೆ ಕಾಯಂ ಆಸ್ತಿ. ಬದುಕಿರುವವರೆಗೂ ಬಿಡದಿ ತೋಟದ ಮನೆಯೇ ನನ್ನ ಆಸ್ತಿ. ಯಾವ ವೆಸ್ಟ್ಎಂಡ್ ಇಲ್ಲ ರೈಟ್ ಎಂಡ್ ಇಲ್ಲ. ನನ್ನನ್ನ ಈಗ ಯಾರೂ ದೂರಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.