ಅಮ್ಮನ ಕೈತುತ್ತು ತಿನ್ನುತ್ತಿರುವಾಗಲೇ ತಲೆ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಸಾವು!

baby death
Published on

ಹಿರೇಕೆರೂರ: ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ? ಅಮ್ಮನ ಕಂಕುಳಲ್ಲಿ ಕೂತು ಕೈತುತ್ತು ತಿನ್ನುತ್ತಿರುವಾಗಲೇ ಹಾಲುಗಲ್ಲದ ಕಂದ ಸಾವಿಗೀಡಾಗಿದೆ.

ಹೆತ್ತಮ್ಮನ ಕಣ್ಣೆದುರಲ್ಲೇ ತೆಂಗಿನಕಾಯಿ ರೂಪದಲ್ಲಿ ಬಂದ ಜವರಾಯ ಮಗುವಿನ ಪ್ರಾಣ ಹೊತ್ತೊಯ್ದ ಕರುಣಾಜಕನ ಘಟನೆ ಹಿರೇಕೆರೂರ ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮಲ್ಲಿಕಾರ್ಜುನ ವಾಲ್ಮೀಕಿ ಮತ್ತು ಮಾಲಾ ವಾಲ್ಮೀಕಿ ದಂಪತಿಯ 11 ತಿಂಗಳ ಮಗು ತನ್ವಿತ್ ಮೃತ ದುರ್ದೈವಿ. ಸೋಮವಾರ ತಾಯಿ ಮಾಲಾ, ಮಗುವಿಗೆ ಊಟ ಮಾಡಿಸುತ್ತಾ ಪಕ್ಕದ ಮನೆಗೆ ಹೋಗುತ್ತಿದ್ದರು. ಇದನ್ನೂ ಓದಿರಿ ಅಮ್ಮ ಸತ್ತ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಅಪ್ಪ-ಮಕ್ಕಳು! ಸುಂದರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಮನೆ ಆವರಣದಲ್ಲೇ ಇದ್ದ ತೆಂಗಿನ ಮರದಿಂದ ಹಸಿಕಾಯಿ ಮಗುವಿನ ತಲೆ ಮೇಲೆ ಬಿತ್ತು. ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಗ್ರಾಮದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಗು ಬದುಕಲಿಲ್ಲ.

ಆಟಾವಾಡುತ್ತ ನಲಿದಾಡಬೇಕಿದ್ದ ಪುಟ್ಟ ಕಂದ ತನ್ನ ಕಣ್ಣೆದುರಲ್ಲೇ ಬಾರದ ಲೋಕಕ್ಕೆ ಹೋದದ್ದನ್ನ ಕಂಡ ಹೆತ್ತಮ್ಮನ ಒಡಲಿಗೆ ಬೆಂಕಿ ಬಿದ್ದಂತಾಗಿದೆ. 2 ವರ್ಷದ ಹಿಂದೆ ಮಲ್ಲಿಕಾರ್ಜುನ ಹಾಗೂ ಮಾಲಾ ದಂಪತಿ ಮದುವೆಗಿದ್ದರು. ಈ ದಂಪತಿಗೆ ಚೊಚ್ಚಲ ಮಗು ಇದು. ಮುದ್ದುಮುದ್ದಾಗಿ ತನ್ವಿತ್​ನನ್ನು ಓಣಿಯ ಜನರೂ ಬಹಳ ಹಚ್ಚಿಕೊಂಡಿದ್ದರು. ಮಗುವಿನ ದುರಂತ ಸಾವಿನ ಸುದ್ದಿ ಇಡೀ ಓಣಿಗೆ ಸೂತಕದ ಛಾಯೆ ಆವರಿಸಿದೆ.(ದಿಗ್ವಿಜಯ ನ್ಯೂಸ್, ಹಾವೇರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net